LPL 2024: ಹ್ಯಾಟ್ರಿಕ್ ವಿಕೆಟ್: ದಾಖಲೆ ಬರೆದ ಶಾದಾಬ್ ಖಾನ್
LPL 2024: ಲಂಕಾ ಪ್ರೀಮಿಯರ್ ಲೀಗ್ನ 3ನೇ ಪಂದ್ಯದಲ್ಲಿ ಶಾದಾಬ್ ಖಾನ್ 4 ಓವರ್ಗಳಲ್ಲಿ ಕೇವಲ 22 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈ ನಾಲ್ಕು ವಿಕೆಟ್ಗಳಲ್ಲಿ ಮೂರು ವಿಕೆಟ್ಗಳು ಮೂಡಿಬಂದಿರುವುದು ಹ್ಯಾಟ್ರಿಕ್ ಮೂಲಕ ಎಂಬುದು ವಿಶೇಷ. ಈ ಮೂಲಕ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಶ್ರಿಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನಲ್ಲಿ (LPL 2024) ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಶಾದಾಬ್ ಖಾನ್ (Shadab Khan) ವಿಶೇಷ ದಾಖಲೆ ಬರೆದಿದ್ದಾರೆ. ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ಸ್ ಮತ್ತು ಕ್ಯಾಂಡಿ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಂಡಿ ಫಾಲ್ಕನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲಂಬೊ ಸ್ಟ್ರೈಕರ್ಸ್ ಪರ ವಿಕೆಟ್ ಕೀಪರ್ ಬ್ಯಾಟರ್ ಸದೀರ ಸಮರವಿಕ್ರಮ 26 ಎಸೆತಗಳಲ್ಲಿ 7 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 48 ರನ್ ಬಾರಿಸಿದರು.
ಇನ್ನು ಅಂತಿಮ ಓವರ್ಗಳ ವೇಳೆ ಶಾದಾಬ್ ಖಾನ್ 20 ರನ್ಗಳ ಕೊಡುಗೆ ನೀಡಿದರೆ, ಕರುಣರತ್ನೆ 25 ರನ್ ಬಾರಿಸಿದರು. ಈ ಮೂಲಕ ಕೊಲಂಬೊ ಸ್ಟ್ರೈಕರ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
199 ರನ್ಗಳ ಕಠಿಣ ಗುರಿ ಪಡೆದ ಕ್ಯಾಂಡಿ ಫಾಲ್ಕನ್ಸ್ ತಂಡಕ್ಕೆ ದುನಿಲ್ ವೆಲ್ಲಲಾಗೆ ಆರಂಭಿಕ ಆಘಾತ ನೀಡಿದ್ದರು. ಇದಾಗ್ಯೂ ಫಾಲ್ಕನ್ಸ್ ತಂಡವು 6 ಓವರ್ಗಳಲ್ಲಿ 66 ರನ್ ಕಲೆಹಾಕಿತು. ಅಲ್ಲದೆ 10 ಓವರ್ಗಳ ಮುಕ್ತಾಯದ ವೇಳೆಗೆ ತಂಡ ಮೊತ್ತ 100 ರನ್ಗಳ ಗಡಿದಾಟಿತ್ತು.
ಆದರೆ 15ನೇ ಓವರ್ನಲ್ಲಿ ದಾಳಿಗಿಳಿದ ಶಾದಾಬ್ ಖಾನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 4ನೇ ಎಸೆತದಲ್ಲಿ ವನಿಂದು ಹಸರಂಗ (25) ವಿಕೆಟ್ ಪಡೆದ ಶಾದಾಬ್, ಮರು ಎಸೆತದಲ್ಲೇ ಅಘಾ ಸಲ್ಮಾನ್ (0) ರ ವಿಕೆಟ್ ಕಬಳಿಸಿದರು. ಇನ್ನು ಕೊನೆಯ ಎಸೆದಲ್ಲಿ ಪವನ್ ರಥನಾಯಕೆಗೆ (0) ಯನ್ನು ಎಲ್ಬಿಡಬ್ಲ್ಯೂ ಮಾಡಿದರು. ಈ ಮೂಲಕ ಶಾದಾಬ್ ಖಾನ್ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ಗಳ ಸಾಧನೆ ಮಾಡಿದರು.
ಈ ಹ್ಯಾಟ್ರಿಕ್ ವಿಕೆಟ್ನೊಂದಿಗೆ ದಿಢೀರ್ ಕುಸಿತ ಕಂಡ ಕ್ಯಾಂಡಿ ಫಾಲ್ಕನ್ಸ್ ತಂಡವು 15.5 ಓವರ್ಗಳಲ್ಲಿ 147 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಕೊಲಂಬೊ ಸ್ಟ್ರೈಕರ್ಸ್ ತಂಡವು 51 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಶಾದಾಬ್ ಖಾನ್ ದಾಖಲೆ:
ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಎಲ್ಪಿಎಲ್ನಲ್ಲಿ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಶಾದಾಬ್ ಖಾನ್ ಹ್ಯಾಟ್ರಿಕ್ ವಿಡಿಯೋ:
Shadab Khan Hat-trick in LPL24🔥 . . . . . Subscribe Now YouTube Channel ( Crazy Shorts ) pic.twitter.com/yQcCri1Fr1
— Kazim Hasnain🇵🇰 (@KrickKazim) July 3, 2024
ಇದಕ್ಕೂ ಮುನ್ನ 2022 ರಲ್ಲಿ ಕೊಲಂಬೊ ಸ್ಟಾರ್ಸ್ ವಿರುದ್ಧ ವನಿಂದು ಹಸರಂಗ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದರು. ಇದೀಗ ಕ್ಯಾಂಡಿ ಫಾಲ್ಕನ್ಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಉರುಳಿಸಿ ಶಾದಾಬ್, ಈ ಸಾಧನೆ ಮಾಡಿದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.