T20 World Cup 2021: ಅವರಿಗಿಂತ ಇವರೇ ಬೆಸ್ಟ್: ಪರ್ಯಾಯ ಟೀಮ್ ಇಂಡಿಯಾ ಪ್ಲೆಯಿಂಗ್ 11
T20 World Cup 2021 India: ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಐಪಿಎಲ್ 2021 ರಲ್ಲಿ ಕ್ರಮವಾಗಿ 32 ಮತ್ತು 24 ವಿಕೆಟ್‌ಗಳನ್ನು ಉರುಳಿಸಿ ಅತ್ಯಂತ ಯಶಸ್ವಿ ಬೌಲರ್‌ಗಳು ಎನಿಸಿಕೊಂಡಿದ್ದರು.
ಟಿ20 ವಿಶ್ವಕಪ್ನ (T20 World Cup 2021) ಮೊದಲೆರಡು ಪಂದ್ಯಗಳನ್ನು ಸೋತಿರುವ ಭಾರತದ ಸೆಮಿಫೈನಲ್ ಪ್ರವೇಶಿಸುವ ಕನಸು ಬಹುತೇಕ ಕಮರಿದೆ. ಇತ್ತ ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ವಿರುದ್ದದ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಕೂಡ ಅಪಸ್ವರಗಳು ಕೇಳಿ ಬಂದಿದೆ. ಏಕೆಂದರೆ ಫಾರ್ಮ್ನಲ್ಲಿರದ ಕೆಲ ಆಟಗಾರರಿಗೆ ಈ ಬಾರಿ ಭಾರತ ತಂಡದಲ್ಲಿ ಮಣೆಹಾಕಲಾಗಿತ್ತು. ಪರಿಣಾಮ ಈ ಆಟಗಾರರಿಂದ ಯಾವುದೇ ರೀತಿಯ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಯುಎಇ ಅಂಗಳದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೆಲ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡದಿರುವುದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಯುವ ಆಟಗಾರರನ್ನು ಟೀಮ್ ಇಂಡಿಯಾಗೆ ಆಯ್ಕೆಗೆ ಪರಿಗಣಿಸಿರಲಿಲ್ಲ. ಆದರೆ ಈ ಆಟಗಾರರ ಪ್ರದರ್ಶನವನ್ನು ಗಮನಿಸಿದರೆ, ಇವರನ್ನೇ ಆಯ್ಕೆ ಮಾಡಿ ಪರ್ಯಾಯ ತಂಡವನ್ನು ರೂಪಿಸಿಕೊಳ್ಳಬಹುದು. ಅಂತಹ ಅದ್ಭುತ ಪ್ರದರ್ಶನವನ್ನು ಕೆಲ ಆಟಗಾರರು ಈ ಬಾರಿ ಪ್ರದರ್ಶಿಸಿದ್ದರು. ಅದರಂತೆ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಆಟಗಾರರನ್ನು ಬಳಸಿ ಪರ್ಯಾಯ ಪ್ಲೇಯಿಂಗ್ ಇಲೆವೆನ್ ರೂಪಿಸಿದರೆ ಯಾರಿಗೆಲ್ಲಾ ಚಾನ್ಸ್ ನೀಡಬಹುದಿತ್ತು ನೋಡೋಣ.
ಆರಂಭಿಕರು – ರುತುರಾಜ್ ಗಾಯಕ್ವಾಡ್ ಮತ್ತು ವೆಂಕಟೇಶ್ ಅಯ್ಯರ್: ರುತುರಾಜ್ ಗಾಯಕ್ವಾಡ್ ಐಪಿಎಲ್ 2021 ರಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 45.35 ಸರಾಸರಿಯಲ್ಲಿ 635 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳಿವೆ. ಇನ್ನು ಯುಎಇನಲ್ಲಿ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ರುತುರಾಜ್ 140 ಸ್ಟ್ರೈಕ್ ರೇಟ್‌ನಲ್ಲಿ 439 ರನ್‌ಗಳಿಸಿ ಅತ್ಯದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ ಈ ಬಾರಿ ಸಿಎಸ್ಕೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ರುತುರಾಜ್ ಅವರ ಭರ್ಜರಿ ಬ್ಯಾಟಿಂಗ್ ಕೂಡ ಒಂದು ಕಾರಣ.
ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಬೆಳಕಿಗೆ ಬಂದಿದ್ದು ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಪಂದ್ಯಗಳ ವೇಳೆ. ಕೆಕೆಆರ್ ತಂಡದ ಓಪನರ್ ಆಗಿ ಕಾಣಿಸಿಕೊಂಡ ಅಯ್ಯರ್, 10 ಇನ್ನಿಂಗ್ಸ್‌ಗಳಲ್ಲಿ 41 ರ ಸರಾಸರಿಯಲ್ಲಿ 370 ರನ್‌ಗಳನ್ನು ಬಾರಿಸಿದ್ದರು. ಈ ಮೂಲಕ ಕೆಕೆಆರ್ ಈ ಸಲ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಎಂಬುದು ಕೂಡ ವಿಶೇಷ.
ಮಧ್ಯಮ ಕ್ರಮಾಂಕ- ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್ ಮತ್ತು ಮಯಾಂಕ್ ಅಗರ್ವಾಲ್: ರಾಹುಲ್ ತ್ರಿಪಾಠಿ KKR ತಂಡದ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಬ್ಯಾಟರ್. 16 ಇನ್ನಿಂಗ್ಸ್‌ಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ತ್ರಿಪಾಠಿ 140.28 ರ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 397 ರನ್‌ಗಳನ್ನು ಬಾರಿಸಿದ್ದರು.
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕೂಡ ಈ ಸೀಸನ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. 14 ಇನ್ನಿಂಗ್ಸ್‌ಗಳಲ್ಲಿ 40.33 ಸರಾಸರಿಯಲ್ಲಿ 484 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ. ಅಂದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ಗಿಂತ ಸ್ಯಾಮ್ಸನ್ ಉತ್ತಮ ಆಯ್ಕೆಯಾಗಿತ್ತು.
ಐಪಿಎಲ್ನ ದ್ವಿತಿಯಾರ್ಧದಲ್ಲಿ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಯುಎಇನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ಗಾಯದ ಕಾರಣ ಅಯ್ಯರ್ ಅವರನ್ನು ನೇರವಾಗಿ ಟೀಮ್ ಇಂಡಿಯಾ ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಆದರೆ ಅಯ್ಯರ್ ಸೀಮಿತ ಓವರ್‌ಗಳಲ್ಲಿ ಭಾರತದ ಪರ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. T20I ಗಳಲ್ಲಿ 133.81 ಸ್ಟ್ರೈಕ್ ರೇಟ್ ಹೊಂದಿರುವ ಅಯ್ಯರ್ ಕೂಡ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಆಯ್ಕೆಯಾಗಿತ್ತು.
ಪಂಜಾಬ್ ಕಿಂಗ್ಸ್ ತಂಡವು ಕೆಎಲ್ ರಾಹುಲ್ ಮೇಲೆ ಕೇಂದ್ರೀಕೃತವಾಗಿರುವಾಗ, ತಂಡದ ಮತ್ತೋರ್ವ ಸ್ಟಾರ್ ಬ್ಯಾಟರ್ ಮಯಾಂಕ್ ಅಗರ್ವಾಲ್ ಹೆಚ್ಚಿನವರ ಗಮನಕ್ಕೆ ಬರಲಿಲ್ಲ. ಅಗರ್ವಾಲ್ ಈ ಬಾರಿಯ ಐಪಿಎಲ್ನ 12 ಪಂದ್ಯಗಳಲ್ಲಿ 441 ರನ್‌ಗಳನ್ನು ಬಾರಿಸಿದ್ದರು. ಅದು ಕೂಡ 140 ಸ್ಟ್ರೈಕ್ ರೇಟ್‌ನಲ್ಲಿ ಎಂಬುದು ವಿಶೇಷ. ಅಷ್ಟೇ ಅಲ್ಲದೆ 4 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದರು. ಹೀಗಾಗಿ ಮಯಾಂಕ್ ಕೂಡ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಬ್ಯಾಟರ್ ಆಗಿದ್ದರು.
ಆಲ್ ರೌಂಡರ್ – ಅಕ್ಷರ್ ಪಟೇಲ್: ಅಕ್ಷರ್ ಪಟೇಲ್ ಐಪಿಎಲ್ 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಅಕ್ಷರ್ ಪಟೇಲ್ ಕೂಡ ಒಬ್ಬರು. ಡೆಲ್ಲಿ ಪರ ಅಕ್ಷರ್ 12 ಪಂದ್ಯಗಳಲ್ಲಿ 6.65 ರ ಎಕನಾಮಿಯಲ್ಲಿ 15 ವಿಕೆಟ್ ಪಡೆದಿದ್ದರು. ಹೀಗಾಗಿ ಪಟೇಲ್ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಚ್ಚರಿ ಎಂಬಂತೆ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಮೀಸಲು ಆಟಗಾರರ ಪಟ್ಟಿಗೆ ವರ್ಗಾಯಿಸಲಾಗಿತ್ತು.
ಸ್ಪಿನ್ನರ್ – ಯುಜುವೇಂದ್ರ ಚಹಲ್: ಯುಎಇನಲ್ಲಿ ಮಿಂಚಿದ ಅತ್ಯಂತ ಯಶಸ್ವಿ ಸ್ಪಿನ್ನರ್ ಎಂದರೆ ಯುಜುವೇಂದ್ರ ಚಹಲ್. ಯುಎಇನಲ್ಲಿ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಚಹಲ್ 6.13 ರ ಆರ್ಥಿಕತೆಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಈ ವಿಶ್ವಕಪ್ ಆರಂಭಕ್ಕೂ ಮುನ್ನ ಚಹಲ್ ಟೀಮ್ ಇಂಡಿಯಾ ಭಾಗವಾಗಿದ್ದರು. ಇದಾಗ್ಯೂ ಅವರನ್ನು ಟೀಮ್ ಇಂಡಿಯಾ ಟಿ20 ತಂಡಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿಕೆ ಕಾರಣವಾಗಿತ್ತು.
ವೇಗದ ಬೌಲರ್‌ಗಳು – ಹರ್ಷಲ್ ಪಟೇಲ್, ಅವೇಶ್ ಖಾನ್ ಮತ್ತು ದೀಪಕ್ ಚಹರ್: ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಐಪಿಎಲ್ 2021 ರಲ್ಲಿ ಕ್ರಮವಾಗಿ 32 ಮತ್ತು 24 ವಿಕೆಟ್‌ಗಳನ್ನು ಉರುಳಿಸಿ ಅತ್ಯಂತ ಯಶಸ್ವಿ ಬೌಲರ್‌ಗಳು ಎನಿಸಿಕೊಂಡಿದ್ದರು. ಇನ್ನೊಂದೆಡೆ ಸಿಎಸ್ಕೆ ತಂಡದ ವೇಗಿ ದೀಪಕ್ ಚಹರ್ ಐಪಿಎಲ್ನ ಪವರ್ಪ್ಲೇನಲ್ಲಿನ ಅತ್ಯಂತ ಯಶಸ್ವಿ ಬೌಲರ್ ಆಗಿ ಮಿಂಚಿದ್ದರು. ಇದಾಗ್ಯೂ ದೀಪಕ್ ಚಹರ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ವಿಕೆಟ್ ಟೇಕರ್ಗಳಾಗಿ ಮಿಂಚಿದ್ದ ಹರ್ಷಲ್ ಪಟೇಲ್ ಹಾಗೂ ಅವೇಶ್ ಖಾನ್ಗೆ ಚಾನ್ಸ್ ನೀಡಲಿಲ್ಲ. ಇದೀಗ ಆಟಗಾರರ ಫಾರ್ಮ್ ಪರಿಗಣಿಸದೇ ಕೆಲ ಆಟಗಾರರನ್ನು ಆಯ್ಕೆ ಮಾಡಿರುವುದೇ ಈಗ ಟೀಮ್ ಇಂಡಿಯಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೀಗಾಗಿಯೇ ಪರ್ಯಾಯ ಆಟಗಾರರ ಪ್ಲೇಯಿಂಗ್ 11 ಕೂಡ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ. ಅದರಂತೆ ಭರ್ಜರಿ ಫಾರ್ಮ್ನಲ್ಲಿದ್ದ ಕೆಲ ಆಟಗಾರರನ್ನು ಒಳಗೊಂಡ ಪರ್ಯಾಯ ಪ್ಲೇಯಿಂಗ್ ಇಲೆವೆನ್ ಹೀಗಿದೆ.
1. ರುತುರಾಜ್ ಗಾಯಕ್ವಾಡ್
2. ವೆಂಕಟೇಶ್ ಅಯ್ಯರ್
3. ರಾಹುಲ್ ತ್ರಿಪಾಠಿ
4. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
5. ಶ್ರೇಯಸ್ ಅಯ್ಯರ್ (ನಾಯಕ)
6. ಮಯಾಂಕ್ ಅಗರ್ವಾಲ್
7. ಅಕ್ಷರ್ ಪಟೇಲ್
8. ದೀಪಕ್ ಚಹರ್
9. ಅವೇಶ್ ಖಾನ್
10. ಹರ್ಷಲ್ ಪಟೇಲ್
11. ಯುಜ್ವೇಂದ್ರ ಚಹಲ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(T20 World Cup 2021: An alternate Indian XI)