T20 World Cup 2021: ಟೀಮ್ ಇಂಡಿಯಾ ಸೋಲಿಗೆ ಟಾಸ್ ಕಾರಣ..!
T20 World Cup 2021: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳು ಬದಲಾಗಲಿದ್ದು, ಅದರಂತೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ನಿಂದ ಟೀಮ್ ಇಂಡಿಯಾ ಹೊರಬಿದ್ದ ಬೆನ್ನಲ್ಲೇ ಇದೀಗ ತಂಡದ ಪ್ರದರ್ಶನದ ಬಗ್ಗೆ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಐಸಿಸಿ ಟೂರ್ನಿಯಲ್ಲಿ ಭಾರತ ತಂಡವು 9 ವರ್ಷಗಳ ಬಳಿಕ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಭಾರತ ತಂಡದ ಕಳಪೆ ಪ್ರದರ್ಶನ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಇತ್ತ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ನೀಡಿರುವ ಸಮಜಾಯಿಷಿವೊಂದು ಇದೀಗ ಎಲ್ಲರ ಅಚ್ಚರಿಕೆಗೆ ಕಾರಣವಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ವೈಫಲ್ಯದ ಬಗ್ಗೆ ಮಾತನಾಡಿದ ಭರತ್ ಅರುಣ್, ತಂಡದ ಸೋಲಿಗೆ ಟಾಸ್ ಹಾಗೂ ಬಯೋಬಬಲ್ ಕಾರಣವೆಂದು ಹೇಳಿದ್ದಾರೆ.
ಭಾರತ ತಂಡವು ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ವಿರುದ್ದ ಟಾಸ್ ಸೋತ ಕಾರಣ ಜಯ ಸಾಧಿಸಲು ಸಾಧ್ಯವಾಗಿಲ್ಲ. ಏಕೆಂದರೆ ದೊಡ್ಡ ಮಟ್ಟದ ಪಂದ್ಯಾವಳಿಯಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತವು ಮೊದಲು ಬ್ಯಾಟಿಂಗ್ ಮಾಡಿದ ವೇಳೆ ಪಿಚ್ ಬೌಲರುಗಳಿಗೆ ಅನುಕೂಲಕರವಾಗಿತ್ತು. ಆದರೆ ಆ ಬಳಿಕ ಇಬ್ಬನಿಯಿಂದಾಗಿ ನಮ್ಮ ಬೌಲರುಗಳು ಯಶಸ್ಸು ಸಾಧಿಸಲಾಗಿಲ್ಲ ಎಂದು ಭರತ್ ಅರುಣ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ತಂಡದಲ್ಲಿ ಆಟಗಾರರು ಕಳೆದ 6 ತಿಂಗಳಿಂದ ಬಯೋಬಬಲ್ನಲ್ಲಿದ್ದಾರೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಆರಂಭವಾಗಿತ್ತು. ಇದರಿಂದ ಆಟಗಾರರು ಸಂಪೂರ್ಣ ಆಯಾಸಗೊಂಡಿದ್ದರು. ಐಪಿಎಲ್ ಹಾಗೂ ಟಿ20 ವಿಶ್ವಕಪ್ ನಡುವೆ ಟೀಮ್ ಇಂಡಿಯಾ ಆಟಗಾರರಿಗೆ ತುಸು ವಿಶ್ರಾಂತಿ ಸಿಕ್ಕಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಭರತ್ ಅರುಣ್ ತಿಳಿಸಿದರು.
ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳು ಬದಲಾಗಲಿದ್ದು, ಅದರಂತೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಇನ್ನು ಬೌಲಿಂಗ್ ಕೋಚ್ ಹಾಗೂ ಇನ್ನಿತರ ಸಿಬ್ಬಂದಿಗಳ ಆಯ್ಕೆಯಲ್ಲಿ ರಾಹುಲ್ ದ್ರಾವಿಡ್ ಅವರ ಪಾತ್ರ ಪ್ರಮುಖವಾಗಲಿದೆ. ಹೀಗಾಗಿ ಪ್ರಸ್ತುತ ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಸ್ಥಾನದಲ್ಲಿ ಹೊಸಬರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
(T20 World Cup 2021: Bowling Coach Bharat Arun Blames Bubble Fatigue And Toss)