T20 World Cup 2021: ಟಿ20 ವಿಶ್ವಕಪ್​ಗೆ ಹೊಸ ನಿಯಮ ಪರಿಚಯಿಸಿದ ಐಸಿಸಿ

| Updated By: ಝಾಹಿರ್ ಯೂಸುಫ್

Updated on: Aug 17, 2021 | 3:54 PM

T20 World Cup 2021 New Rules: ಈ ಹಿಂದೆ ಮಹಿಳಾ ಟಿ20 ವಿಶ್ವಕಪ್​ ವೇಳೆ ಐಸಿಸಿ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ಘೋಷಿಸಿತ್ತು. ಆ ನಿಯಮದಂತೆ ಮಳೆಯ ಕಾರಣ ಪಂದ್ಯಕ್ಕೆ ಅಡಚಣೆಯಾದರೆ ಕೆಲ ಓವರ್​ಗಳ ಕಡಿತ ಮಾಡಲಾಗುತ್ತದೆ.

T20 World Cup 2021: ಟಿ20 ವಿಶ್ವಕಪ್​ಗೆ ಹೊಸ ನಿಯಮ ಪರಿಚಯಿಸಿದ ಐಸಿಸಿ
ಇನ್ನು ಭಾರತದ ಮೊದಲ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಜೊತೆ ಎಂಬುದು ವಿಶೇಷ. ಈ ಪಂದ್ಯವು ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
Follow us on

ಯುಎಇ-ಒಮಾನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು (T20 World Cup 2021 Schedule) ಐಸಿಸಿ (ICC) ಪ್ರಕಟಿಸಿದೆ. ಅದರಂತೆ ಅಕ್ಟೋಬರ್ 17 ರಿಂದ ಚುಟುಕು ಕದನಕ್ಕೆ ಚಾಲನೆ ಸಿಗಲಿದ್ದು, ಮೊದಲ ಸುತ್ತಿನಲ್ಲಿ 8 ತಂಡಗಳ ನಡುವೆ ಅರ್ಹತಾ ಪಂದ್ಯಗಳು ನಡೆಯಲಿವೆ. ಎ ಮತ್ತು ಗ್ರೂಪ್ ಬಿ ನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಮಾತ್ರ ಸೂಪರ್ 12 ಪ್ರವೇಶಿಸುತ್ತವೆ. ಇನ್ನು ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದ್ದು, ಭಾರತ (Team India) ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ.

ಅರ್ಹತಾ ಸುತ್ತಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್, ನಮೀಬಿಯಾ, ಓಮಾನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳು ಸೆಣಸಲಿದೆ. ಇನ್ನು ಸೂಪರ್ 12ನಲ್ಲಿ ಒಟ್ಟು 12 ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿವೆ. ಈ ಗುಂಪಿನಲ್ಲಿನ ಅಗ್ರಸ್ಥಾನ ಪಡೆಯುವ 4 ತಂಡಗಳು ಸೆಮಿಫೈನಲ್ ಆಡಲಿದೆ.

ನವೆಂಬರ್ 10 ರಂದು ಮೊದಲ ಸೆಮಿಫೈನಲ್ ಅಬುಧಾಬಿಯಲ್ಲಿ ನಡೆಯಲಿದೆ. ಇನ್ನು ಎರಡನೇ ಸೆಮಿಫೈನಲ್ ನವೆಂಬರ್ 11 ರಂದು ದುಬೈನಲ್ಲಿ ಜರುಗಲಿದೆ. ಈ ಎರಡು ಸೆಮಿಫೈನಲ್​ಗಳಿಗೂ ಈ ಬಾರಿ ಐಸಿಸಿ ಮೀಸಲು ದಿನವನ್ನು ಘೋಷಿಸಿದೆ. ಅಂದರೆ ಮಳೆಯಿಂದ ಅಥವಾ ಇನ್ನಿತರ ಅಡಚಣೆ ಉಂಟಾದರೆ, ಮರುದಿನ ಪಂದ್ಯವನ್ನು ಆಡಲಿದೆ. ಹಾಗೆಯೇ ಫೈನಲ್ ಪಂದ್ಯಕ್ಕೂ ಮೀಸಲು ದಿನ ನಿಗದಿ ಪಡಿಸಲಾಗಿದ್ದು, ಅದರಂತೆ ನವೆಂಬರ್ 14 ರಂದು ಫೈನಲ್ ನಡೆಯದಿದ್ದರೆ ಮರುದಿನ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಹೀಗಾಗಿ ಪಂದ್ಯಕ್ಕೆ ಯಾವುದೇ ರೀತಿಯ ಅಡಚಣೆ ಏರ್ಪಟ್ಟರೂ ಮರುದಿನ ಪಂದ್ಯವಾಡಬಹುದಾಗಿದೆ.

ಈ ಹಿಂದೆ ಮಹಿಳಾ ಟಿ20 ವಿಶ್ವಕಪ್​ ವೇಳೆ ಐಸಿಸಿ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ಘೋಷಿಸಿತ್ತು. ಆ ನಿಯಮದಂತೆ ಮಳೆಯ ಕಾರಣ ಪಂದ್ಯಕ್ಕೆ ಅಡಚಣೆಯಾದರೆ ಕೆಲ ಓವರ್​ಗಳ ಕಡಿತ ಮಾಡಲಾಗುತ್ತದೆ. ಇದಾಗ್ಯೂ ಪಂದ್ಯ ಮುಂದುವರೆಸಲು ಸಾಧ್ಯವಾಗದಿದ್ದರೆ, ಇಡೀ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಇದೇ ಮಾದರಿಯಲ್ಲಿ ಐಸಿಸಿ ಈ ಬಾರಿಯ ಟಿ20 ವಿಶ್ವಕಪ್​ಗೂ ಮೀಸಲು ದಿನವನ್ನು ಘೋಷಿಸಿದೆ.

ಅದರಂತೆ ಒಂದು ವೇಳೆ ಪಂದ್ಯದ ಆರಂಭವಾಗಿ 6 ಓವರ್​ಗಳಲ್ಲೇ ಅಡಚಣೆ ಉಂಟಾದರೆ, ಪಂದ್ಯದ ಸಮಯವನ್ನು ಪರಿಗಣನೆಗೆ ತೆಗೆದುಕೊಂಡು 5 ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಉಭಯ ತಂಡಗಳು 20 ಓವರ್​ಗಳ ಬದಲಾಗಿ 15 ಓವರ್​ಗಳನ್ನು ಆಡಬೇಕಾಗುತ್ತದೆ. ಇದಾಗ್ಯೂ ಒಂದು ಓವರ್​ ಮುಗಿಯುವ ಮುನ್ನ ಮತ್ತೆ ಮಳೆ ಬಂದರೆ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗುತ್ತದೆ. ಮರುದಿನ ಹೊಸದಾಗಿ 20 ಓವರ್​ಗಳ ಪಂದ್ಯವನ್ನು ಶುರು ಮಾಡಲಾಗುತ್ತದೆ.

ಒಂದು ವೇಳೆ ಓವರ್​ ಕಡಿತದ (15 ಓವರ್​) ಬಳಿಕ ಪಂದ್ಯ ಶುರುವಾಗಿ ಒಂದೆರೆಡು ಓವರ್ ಆಡಿದ ನಂತರ ಮತ್ತೆ ಅಡಚಣೆ ಉಂಟಾದರೆ, ಪಂದ್ಯವನ್ನು ಮರುದಿನಕ್ಕೆ ಮುಂದೂಡಲಾಗುತ್ತದೆ. ಆದರೆ ಮೀಸಲು ದಿನದಲ್ಲಿ ಮತ್ತೆ ಹೊಸದಾಗಿ ಪಂದ್ಯವನ್ನು ಆರಂಭಿಸಲಾಗುವುದಿಲ್ಲ. ಬದಲಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಎಷ್ಟು ಓವರ್ ಆಡಿರುತ್ತಾರೋ ಅಲ್ಲಿಂದ ಪಂದ್ಯ ಮುಂದುವರೆಯಲಿದೆ. ಈ ನಿಯಮ ಮೊದಲು ಬ್ಯಾಟಿಂಗ್ ಮಾಡಿದ ತಂಡ 6ಕ್ಕಿಂತ ಅಧಿಕ ಓವರ್ ಆಡಿದ್ದರೆ ಮಾತ್ರ ಅನ್ವಯವಾಗಲಿದೆ. ಇದೇ ನಿಯಮ ಸೆಮಿಫೈನಲ್ ಹಾಗೂ ಫೈನಲ್​ಗೂ ಅನ್ವಯಿಸಲಿದೆ.

ಟಿ20 ವಿಶ್ವಕಪ್​ ಟೂರ್ನಿಗೆ ಅಕ್ಟೋಬರ್ 17 ರಂದು ಚಾಲನೆ ಸಿಗಲಿದ್ದು, ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಆರು ದಿನಗಳು ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 23 ರಿಂದ ಟೂರ್ನಿಯ ಮೊದಲ ಸೂಪರ್ 12 ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದೆ. ಹಾಗೆಯೇ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 24 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜರುಗಲಿದೆ.

ಗ್ರೂಪ್-1 ತಂಡಗಳು ಹೀಗಿವೆ:
ಇಂಗ್ಲೆಂಡ್
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
ವೆಸ್ಟ್ ಇಂಡೀಸ್
ಅರ್ಹತಾ ಸುತ್ತಿನ ಗ್ರೂಪ್ ಎ1 ತಂಡ
ಅರ್ಹತಾ ಸುತ್ತಿನ ಗ್ರೂಪ್ ಬಿ2 ತಂಡ

ಗ್ರೂಪ್-2 ತಂಡಗಳು ಹೀಗಿವೆ:
ಭಾರತ
ಪಾಕಿಸ್ತಾನ
ನ್ಯೂಜಿಲೆಂಡ್
ಅಪ್ಘಾನಿಸ್ತಾನ
ಅರ್ಹತಾ ಸುತ್ತಿನ ಗ್ರೂಪ್ ಎ2 ತಂಡ
ಅರ್ಹತಾ ಸುತ್ತಿನ ಗ್ರೂಪ್ ಬಿ1 ತಂಡ

ಅರ್ಹತಾ ಸುತ್ತಿನ ತಂಡಗಳು ಹೀಗಿವೆ:
ಗ್ರೂಪ್ ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ
ಗ್ರೂಪ್ ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್

ಇದನ್ನೂ ಓದಿ: T20 World Cup 2021: ಟಿ20 ವಿಶ್ವಕಪ್​ಗೆ ಅಫ್ಘಾನಿಸ್ತಾನ್ ತಂಡ ಅನುಮಾನ

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ