ಟಿ20 ವಿಶ್ವಕಪ್‌ನ (T20 World Cup 2022) ಅರ್ಹತಾ ಸುತ್ತಿನಲ್ಲೇ ನಮೀಬಿಯಾ ವಿರುದ್ಧ ಮುಗ್ಗರಿಸಿರುವ ಲಂಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗದ ಬೌಲರ್ ದಿಲ್ಶಾನ್ ಮಧುಶಂಕ ಇಂಜುರಿಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮಧುಶಂಕ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಹೀಗಾಗಿ ತಂಡದಿಂದ ಹೊರಗುಳಿಯಬೇಕಿದೆ. ಆದಾಗ್ಯೂ, ಶ್ರೀಲಂಕಾ ಅವರ ಬದಲಿಗೆ ಬೇರೆ ಆಟಗಾರನ್ನು ಆಯ್ಕೆ ಮಾಡಿದ್ದು, ಇಂಜುರಿಗೊಂಡಿರುವ ಮಧುಶಂಕ ಬದಲಿಗೆ ಬಿನೂರ ಫೆರ್ನಾಂಡೊ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಫರ್ನಾಂಡೊ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿ ಒಪ್ಪಿಗೆ ನೀಡಿದ್ದು, ಟಿ20 ವಿಶ್ವಕಪ್‌ನ ಸ್ಪರ್ಧಾತ್ಮಕ ತಾಂತ್ರಿಕ ಸಮಿತಿಯು ಶ್ರೀಲಂಕಾ ತಂಡದಲ್ಲಿ ಗಾಯಗೊಂಡಿರುವ ವೇಗದ ಬೌಲರ್ ದಿಲ್ಶನ್ ಮಧುಶಂಕ ಅವರ ಬದಲಿಗೆ ಬಿನೂರಾ ಫರ್ನಾಂಡೋ ಅವರನ್ನು ಸೇರಿಸಿಕೊಳ್ಳಲು ಅನುಮೋದಿಸಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಫರ್ನಾಂಡೊ ತಂಡವನ್ನು ಸೇರಿಕೊಳ್ಳಲಿದ್ದಾರೆ
ಈಗಾಗಲೇ ಫರ್ನಾಂಡೋ ತಂಡವನ್ನು ಸೇರಿಕೊಳ್ಳಲು ಶ್ರೀಲಂಕಾದಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಟಿ20 ವಿಶ್ವಕಪ್ ಆಡುತ್ತಿರುವ ತಂಡಗಳಲ್ಲಿ ಯಾವುದೇ ಆಟಗಾರನ ಬದಲಿಗೆ ಇನ್ನೊಬ್ಬ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಮುನ್ನ ಸ್ಪರ್ಧೆಯ ತಾಂತ್ರಿಕ ಸಮಿತಿಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ವಿಶ್ವಕಪ್‌ಗೆ ಪ್ರತಿ ತಂಡಗಳು 15 ಸದಸ್ಯರ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಜೊತೆಗೆ ಈ 15 ಸದಸ್ಯರ ತಂಡವನ್ನು ಹೊರತುಪಡಿಸಿ, ಪ್ರತಿ ತಂಡವು ನಾಲ್ವರು ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ಮುಖ್ಯ ತಂಡದಲ್ಲಿ ಯಾರದರೂ ಒಬ್ಬ ಆಟಗಾರ ಇಂಜುರಿಗೊಂಡರೆ, ಅವನ ಸ್ಥಾನಕ್ಕೆ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಆಟಗಾರ ಆಯ್ಕೆಯಾಗುತ್ತಾನೆ.
ಭಾರತವನ್ನು ಕಾಡಿದ್ದ ಮಧುಶಂಕ
ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡವನ್ನು ಲಂಕಾ ಬೌಲರ್ ಮಧುಶಂಕ ಇನ್ನಿಲ್ಲದಂತೆ ಕಾಡಿದ್ದರು. ಸೆಪ್ಟೆಂಬರ್ 6 ರಂದು ನಡೆದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 24 ರನ್ ನೀಡಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂರು ವಿಕೆಟ್‌ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಸೇರಿದ್ದರು. ಜೊತೆಗೆ ದೀಪಕ್ ಹೂಡಾ ಕೂಡ ಮಧುಶಂಕಗೆ ಬಲಿಪಶು ಆಗಿದ್ದರು.
ವಿಶ್ವಕಪ್ನಲ್ಲಿ ಲಂಕಾಗೆ ಸೋಲಿನ ಆರಂಭ
ಶ್ರೀಲಂಕಾ ತಂಡದ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ್ದು, ತನ್ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ನಮೀಬಿಯಾ ಲಂಕಾ ತಂಡವನ್ನು ಬಾರಿ ಅಂತರದಲ್ಲಿ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ ಏಳು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ತಂಡ 19 ಓವರ್‌ಗಳಲ್ಲಿ 108 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 4:46 pm, Sun, 16 October 22