ಮೆಲ್ಬೋರ್ನ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ (India Vs Pakistan) ನಡುವಿನ ಟಿ20 ವಿಶ್ವಕಪ್ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಪಡೆ 2022ರ ಟಿ20 ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ (Virat Kohli) ಗೆಲುವಿನ ಹೀರೋ ಎನಿಸಕೊಂಡರು. ಸಂಕಷ್ಟದ ಸಮಯದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ಕಟ್ಟಿದ ವಿರಾಟ್, ಅಜೇಯ 82 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ (Hardik Pandya) 40 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಕೊನೆಯ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡ ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ಅಶ್ವಿನ್ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದರು. ಅಜೇಯ 82 ರನ್ ಗಳಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: IND vs PAK: ಪಾಕ್ ವಿರುದ್ಧ ಟಾಸ್ ಗೆದ್ದ ಭಾರತ: ರೋಹಿತ್ ಪಡೆಯ ಪ್ಲೇಯಿಂಗ್ XI ಇಲ್ಲಿದೆ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿಸಿದ ಪಾಕಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಬಾಬರ್ ಎರಡನೇ ಓವರ್ನಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮತ್ತೊಬ್ಬ ಆರಂಭಿಕ ರಿಜ್ವಾನ್ 4 ರನ್ಗಳಿಸಿ ಅರ್ಷದೀಪ್ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಎರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ವೇಳೆ ಇಫ್ತಿಕರ್ 34 ಎಸೆತಗಳಲ್ಲಿ 51 ರನ್ ಗಳಿಸಿದರೆ, ಮಸೂದ್ ಅಜೇಯ 52 ರನ್ ಗಳಿಸಿದರು. ಇವರಿಬ್ಬರ 81 ರನ್ ಜೊತೆಯಾಟ ಪಾಕಿಸ್ತಾನವನ್ನು 150 ರ ಗಡಿ ದಾಟುವಂತೆ ಮಾಡಿತು.
ರೋಹಿತ್ ಪಡೆಯ ಅದ್ಭುತ ಬೌಲಿಂಗ್
ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅದ್ಭುತ ಬೌಲಿಂಗ್ ಮಾಡಿದರು. ಇಬ್ಬರ ಖಾತೆಯಲ್ಲಿ ತಲಾ 3 ವಿಕೆಟ್‌ಗಳು ಬಿದ್ದವು. ಅದೇ ಸಮಯದಲ್ಲಿ ಶಮಿ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ 21 ರನ್ ಬಿಟ್ಟುಕೊಟ್ಟು ಸ್ವಲ್ಪ ದುಬಾರಿ ಎನಿಸಿಕೊಂಡರು.
ಭಾರತದ ಅಗ್ರ ಕ್ರಮಾಂಕ ವಿಫಲ
160 ರನ್ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭವೂ ಕೂಡ ತೀರ ಕಳಪೆಯಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಕೇವಲ 4 ರನ್ ಗಳಿಸಿ ಔಟಾದರೆ ನಾಯಕ ರಾಹುಲ್ ಕೂಡ ಅಷ್ಟೇ ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಸೂರ್ಯಕುಮಾರ್ ಯಾದವ್ ಕೂಡ ಇದಷ್ಟು ಸಮಯ ಸ್ಫೋಟಕ ಬ್ಯಾಟಿಂಗ್ ಮಾಡಿ, ಕೇವಲ 15 ರನ್ ಗಳಿಸಿ ಔಟಾದರು. ಈ ವಿಕೆಟ್ ಬಳಿಕ ಬಂದ ಅಕ್ಷರ್ ಪಟೇಲ್ ಕೂಡ ಕೇವಲ 2 ರನ್ ಗಳಿಸಿ ರನೌಟ್ ಆದರು.
ಆದರೆ 4 ವಿಕೆಟ್ ಉರುಳಿದ ನಂತರ ಜೊತೆಯಾದ ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕದ ಜೊತೆಯಾಟದ ಮೂಲಕ ಭಾರತವನ್ನು ಗೆಲುವಿನ ಟ್ರ್ಯಾಕ್ಗೆ ಮರಳಿಸಿದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕವನ್ನು ಸಹ ಪೂರೈಸಿದರು. ಅಂತಿಮವಾಗಿ ಈ ಇಬ್ಬರ ನಡುವೆ ಶತಕದ ಜೊತೆಯಾಟವು ಬಂತು. ಆದರೆ ಗೆಲುವಿನ ದಡ ಸೇರಿಸಬೇಕಿದ್ದ ಪಾಂಡ್ಯ 20 ನೇ ಓವರ್ ಮೊದಲ ಎಸೆತದಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಪಾಂಡ್ಯ ಔಟಾದ ನಂತರ ಬಂದ ಕಾರ್ತಿಕ್ ಕೂಡ ಕೇವಲ 1 ರನ್ ಗಳಿಗೆ ಸುಸ್ತಾದರು. ಕಾರ್ತಿಕ್ ವಿಕೆಟ್ ಬಳಿಕ ಬಂದ ಅಶ್ವಿನ್ ಒಂದು ರನ್ ಗಳಿಸಿ ಅಜೇಯರಾಗಿ ಉಳಿದಲ್ಲದೆ ಗೆಲುವಿನ ರನ್ ಬಾರಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Sun, 23 October 22