T20 World Cup 2022: ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನ್ (India vs Pakistan) ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಇದೀಗ 2ನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಿಡ್ನಿಗೆ ಬಂದಿಳಿದಿದೆ. ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದ ಭಾರತೀಯ ಆಟಗಾರರು ಸಿಡ್ನಿಯಲ್ಲಿ ಅಭ್ಯಾಸವನ್ನು ಆರಂಭಿಸಿದ್ದಾರೆ. ಆದರೆ ಈ ಅಭ್ಯಾಸದ ವೇಳೆ ಪಾಕಿಸ್ತಾನ್ ವೇಗಿ ಕೂಡ ಕಾಣಿಸಿಕೊಂಡಿರುವುದು ವಿಶೇಷ.
ಅಂದರೆ ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಜೂನಿಯರ್ ನೆಟ್ ಬೌಲರ್ ಆಗಿ ಕಾಣಿಸಿಕೊಂಡರು. ಪಾಕಿಸ್ತಾನ್ ಎ ತಂಡದ ಬೌಲರ್ ಆಗಿರುವ ಇರ್ಫಾನ್ ಸದ್ಯ ಆಸ್ಟ್ರೇಲಿಯಾದಲ್ಲಿ ನ್ಯೂ ಸೌತ್ ವೇಲ್ಸ್‌ನ ವೆಸ್ಟರ್ನ್ ಸಬರ್ಬ್ ಡಿಸ್ಟ್ರಿಕ್ಟ್ ಪರ ಗ್ರೇಡ್ ಕ್ರಿಕೆಟ್ ಆಡುತ್ತಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸಕ್ಕಾಗಿ ಟೀಮ್ ಇಂಡಿಯಾ ಮೊಹಮ್ಮದ್ ಇರ್ಫಾನ್ ಅವರನ್ನು ಬಳಸಿಕೊಂಡಿದೆ. ಈ ಹಿಂದೆ ಆಸ್ಟ್ರೇಲಿಯಾದ ತಂಡ ನೆಟ್ ಬೌಲರ್ ಆಗಿಯೂ ಪಾಕ್ ವೇಗಿ ಕಾಣಿಸಿಕೊಂಡಿದ್ದರು. ಇದೀಗ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಮೊಹಮ್ಮದ್ ಇರ್ಫಾನ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯುತ್ತಮ ವೇಗ ಹಾಗೂ ಬೌಲಿಂಗ್ ಮೂಲಕ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಅವರ ಗಮನ ಸೆಳೆದಿದ್ದಾರೆ.
ನಾನು ಎತ್ತರ ಇರುವ ಕಾರಣ ನನ್ನ ಎಸೆತಗಳನ್ನು ಎದುರಿಸುವುದು ಬ್ಯಾಟ್ಸ್ಮನ್ಗಳಿಗೆ ಕಷ್ಟವಾಗುತ್ತದೆ. ನಾನು ಕೂಡ ಸಾಧ್ಯವಾದಷ್ಟು ಬ್ಯಾಟ್ಸ್ಮನ್ಗಳನ್ನು ಕಾಡಲು ಯತ್ನಿಸುತ್ತೇನೆ. ಅದೇ ರೀತಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೂ ಬೌಲಿಂಗ್ ಮಾಡಿದ್ದೇನೆ. ಇಬ್ಬರೂ ಕೂಡ ನನ್ನ ಬೌಲಿಂಗ್ ಬಗ್ಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು ಎಂದು ಮೊಹಮ್ಮದ್ ಇರ್ಫಾನ್ ಖುಷಿ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಲಾಹೋರ್ ಖಲಂದರ್ಸ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಿರುವ ಮೊಹಮ್ಮದ್ ಇರ್ಫಾನ್, ಬಿಗ್ ಬ್ಯಾಷ್ ಲೀಗ್ನಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾದಲ್ಲೇ ಕ್ರಿಕೆಟ್ ಕೆರಿಯರ್ ಮುಂದುವರೆಸಲು ಬಯಸಿದ್ದಾರೆ.
ಇದನ್ನೂ ಓದಿ: India vs Pakistan: ಕ್ಲೀನ್ ಬೌಲ್ಡ್, 3 ರನ್: ಐಸಿಸಿ ನಿಯಮ ಮತ್ತು ವಿವಾದ
ನನ್ನ ಕ್ರಿಕೆಟ್ ಕೆರಿಯರ್ ರೂಪಿಸಲು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದರಿಂದ ಸಿಗುವ ಹಣದಿಂದ ನನ್ನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದೇನೆ. ಇದೀಗ ಟೀಮ್ ಇಂಡಿಯಾದ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದೇನೆ. ಇದೇ ವೇಳೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನನ್ನ ಬೌಲಿಂಗ್ ಅನ್ನು ಹೊಗಳಿದರು. ಅಷ್ಟೇ ಅಲ್ಲದೆ ರೋಹಿತ್ ಭಾಯ್ ನನ್ನ ಭವಿಷ್ಯಕ್ಕೆ ಶುಭವಾಗಲಿ ಹಾರೈಸಿದರು ಎಂದು ಮೊಹಮ್ಮದ್ ಇರ್ಫಾನ್ ಸಂತಸ ವ್ಯಕ್ತಪಡಿಸಿದ್ದಾರೆ.
Published On - 6:10 pm, Tue, 25 October 22