Virat Kohli: ಸಚಿನ್ ಅಷ್ಟೇ ಬಾಕಿ, ದ್ರಾವಿಡ್‌ಗೆ ಸಡ್ಡು ಹೊಡೆದ ಕಿಂಗ್ ಕೊಹ್ಲಿ
T20 World Cup 2022: ಈ ಭರ್ಜರಿ ಇನಿಂಗ್ಸ್ ಮೂಲಕ ವಿರಾಟ್ ತಮ್ಮ ವಿರಾಟ ರೂಪ ದರ್ಶನ ಮಾಡಿದ್ದಲ್ಲದೇ ಹಲವು ವಿಶ್ವ ದಾಖಲೆಯನ್ನು ಕೂಡ ಬರೆದಿದ್ದರು. ಅದರಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿರುವುದು ವಿಶೇಷ.
Updated on: Oct 25, 2022 | 10:54 PM

ಮೆಲ್ಬೋರ್ನ್ನಲ್ಲಿ ಭಾನುವಾರ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನ ರೂವಾರಿ ಕಿಂಗ್ ಕೊಹ್ಲಿ. ಕೇವಲ 53 ಎಸೆತಗಳಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ಈ ಭರ್ಜರಿ ಇನಿಂಗ್ಸ್ ಮೂಲಕ ವಿರಾಟ್ ತಮ್ಮ ವಿರಾಟ ರೂಪ ದರ್ಶನ ಮಾಡಿದ್ದಲ್ಲದೇ ಹಲವು ವಿಶ್ವ ದಾಖಲೆಯನ್ನು ಕೂಡ ಬರೆದಿದ್ದರು. ಅದರಲ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿರುವುದು ವಿಶೇಷ.

ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 664 ಪಂದ್ಯಗಳಲ್ಲಿ 34,357 ರನ್ ಕಲೆಹಾಕಿದ್ದಾರೆ.

ಇದರ ಬಳಿಕ 2ನೇ ಸ್ಥಾನದಲ್ಲಿದ್ದದ್ದು ರಾಹುಲ್ ದ್ರಾವಿಡ್. ಟೀಮ್ ಇಂಡಿಯಾ ಮಹಾ ಗೋಡೆ ದ್ರಾವಿಡ್ 404 ಪಂದ್ಯಗಳಿಂದ ಒಟ್ಟು 24,064 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು.

ಆದರೀಗ ಇದೀಗ ಈ ದಾಖಲೆಯನ್ನು ದಾಟಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಂದರೆ ವಿರಾಟ್ ಕೊಹ್ಲಿ 471 ಪಂದ್ಯಗಳಿಂದ ಒಟ್ಟು 24,078 ರನ್ ಬಾರಿಸಿ ಸಚಿನ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ 2ನೇ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಈ ಮೂಲಕ ರಾಹುಲ್ ದ್ರಾವಿಡ್ ಅವರನ್ನು 3ನೇ ಸ್ಥಾನಕ್ಕೆ ದೂಡಿ ವಿರಾಟ್ ಕೊಹ್ಲಿ ಭಾರತೀಯ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದಾಗ್ಯೂ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿಗೆ 10,279 ರನ್ಗಳ ಅವಶ್ಯಕತೆಯಿದೆ.

ಆದರೆ ಐಸಿಸಿ ಟೂರ್ನಿಗಳಲ್ಲಿ ಅತ್ಯಧಿಕ 50+ ರನ್ ಬಾರಿಸಿದ ವಿಶ್ವ ದಾಖಲೆಯನ್ನು ಕೂಡ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ಐಸಿಸಿ ಟೂರ್ನಿಗಳಲ್ಲಿ ಒಟ್ಟು 23 ಬಾರಿ 50+ ಸ್ಕೋರ್ ಕಲೆಹಾಕಿದ್ದಾರೆ. ಇದೀಗ ಕಿಂಗ್ ಕೊಹ್ಲಿ ಐಸಿಸಿ ಟೂರ್ನಿಯಲ್ಲಿ ಒಟ್ಟು 24 ಬಾರಿ 50+ ಸ್ಕೋರ್ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
