T20 World Cup 2022: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಪಾಕಿಸ್ತಾನ್ ವಿರುದ್ಧ ರೋಚಕ ಗೆಲುವಿನ ಮೂಲಕ ಟೀಮ್ ಇಂಡಿಯಾ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ-ಪಾಕ್ ನಡುವಣ ಪಂದ್ಯದ ವೇಳೆ ಟೀಮ್ ಇಂಡಿಯಾ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಈ ವೇಳೆ ಭಾರತೀಯ ಆಟಗಾರರನ್ನು ಭೇಟಿಯಾಗಲು ಯತ್ನಿಸಿದ್ದರು. ಇದರಿಂದ ಕೆಲ ಕ್ಷಣಗಳ ಕಾಲ ಪಂದ್ಯವನ್ನು ನಿಲ್ಲಿಸಬೇಕಾಯಿತು.
ಅತ್ತ ಭದ್ರತಾ ಸಿಬ್ಬಂದಿಗಳು ಟೀಮ್ ಇಂಡಿಯಾ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಪಂದ್ಯಕ್ಕೆ ಅಡ್ಡಿಪಡಿಸಿದ ಕಾರಣ ಆತನ ಮೇಲೆ ಸುಮಾರು 6 ಲಕ್ಷ ರೂ. ದಂಡ ವಿಧಿಸಲು ಮುಂದಾಗಿತ್ತು. ಆದರೆ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿ ವಿರುದ್ಧ ಟೀಮ್ ಇಂಡಿಯಾ ಆಟಗಾರರು ಯಾವುದೇ ದೂರು ನೀಡಲಿಲ್ಲ. ಇದರಿಂದ ಆತನನ್ನು ಯಾವುದೇ ದೂರಿಲ್ಲದ ಕಾರಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮೈದಾನಕ್ಕೆ ನುಗ್ಗಿದ ಅಭಿಮಾನಿಯ ಹೇಳಿಕೆಯನ್ನು ಆಧರಿಸಿ ಆಯಾ ತಂಡಗಳು ದೂರು ನೀಡಬಹುದಾಗಿದೆ. ಈ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸುವವರಿಗೆ ದಂಡ ವಿಧಿಸಿ, ಇಂತಹ ಘಟನೆಗಳನ್ನು ತಡೆಯಲು ನಿಯಮಗಳನ್ನು ರೂಪಿಸಲಾಗಿದೆ. ಇದಾಗ್ಯೂ ಟೀಮ್ ಇಂಡಿಯಾ ಅಭಿಮಾನಿ ವಿರುದ್ಧ ಯಾವುದೇ ಕ್ರಮಕೊಳ್ಳುವಂತೆ ಭಾರತ ತಂಡದವರು ಸೂಚಿಸಿಲ್ಲ. ಹೀಗಾಗಿ ಮೈದಾನಕ್ಕೆ ನುಗ್ಗಿದ ಕ್ರಿಕೆಟ್ ಫ್ಯಾನ್ 6 ಲಕ್ಷ ರೂ. ದಂಡ ಕಟ್ಟಿಸಿಕೊಳ್ಳುವುದರಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಪಾಕಿಸ್ತಾನ್ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ ಅಕ್ಟೋಬರ್ 27 ರಂದು 2ನೇ ಪಂದ್ಯವಾಡಲಿದೆ. ಸಿಡ್ನಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೆದರ್ಲ್ಯಾಂಡ್ಸ್ ವಿರುದ್ಧ ಕಣಕ್ಕಿಳಿಯಲಿದೆ.
Published On - 7:32 pm, Tue, 25 October 22