ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕಿಸ್ತಾನ ತಂಡದ ಹೋರಾಟ ಮುಂದುವರಿದಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲನ್ನನುಭವಿಸಿದ ಪಾಕ್ ತಂಡ ಉಳಿದೆರಡು ಪಂದ್ಯಗಳಲ್ಲಿ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಆಫ್ರಿಕಾ ವಿರುದ್ಧ ಗೆದ್ದ ಪಾಕ್ ತಂಡಕ್ಕೆ ಸೆಮಿಫೈನಲ್ಗೇರುವ ಕೊನೆಯ ಅವಕಾಶ ದೊರೆತಂದಾಗಿದೆ. ಆದರೆ ಪಾಕಿಸ್ತಾನಕ್ಕೆ (Pakistan) ಸೆಮಿಫೈನಲ್ ಹಾದಿ ಅಷ್ಟು ಸುಲಭವಲ್ಲ. ಏಕೆಂದರೆ ಪಾಕ್ ತಂಡ ಕೊನೆಯ ಪಂದ್ಯ ಗೆದ್ದರೂ, ಉಳಿದ ತಂಡಗಳ ಪಲಿತಾಂಶದ ಮೇಲೆ ಅದರ ಸೇಮಿಸ್ ಹಾದಿ ನಿರ್ಧಾರಗೊಳ್ಳಲಿದೆ. ಮೊದಲು ಭಾರತ ನಂತರ ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರು ಸೋತಿತ್ತು. ಹೀಗಾಗಿ ತಂಡಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೆ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡವನ್ನು ಘೋಷಿಸಿದಾಗಿನಿಂದ, ಮಾಜಿ ಕ್ರಿಕೆಟಿಗರು ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಪರಿಣಿತರ ಪ್ರಶ್ನೆಗಳಿಗೆ ತಕ್ಕಂತೆ ತಂಡವು ಅಷ್ಟೇನೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅದರ ಒತ್ತಡ ಈಗ ತಂಡ ಮತ್ತು ಆಟಗಾರರ ಮೇಲೆ ಗೋಚರಿಸುತ್ತದೆ.
ಫಖರ್ ಜಮಾ ಬದಲಿಗೆ ಆಸಿಫ್ ಅಲಿ ಆಯ್ಕೆ
ಪಾಕಿಸ್ತಾನದ ಎಡಗೈ ಬ್ಯಾಟ್ಸ್‌ಮನ್ ಫಖರ್ ಜಮಾನ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರಿಂದ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ಅವರ ಸ್ಥಾನಕ್ಕೆ ಆಸಿಫ್ ಅಲಿ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಆಸಿಫ್ ಅಲಿಗೆ ವಿಶ್ವಕಪ್‌ನಲ್ಲಿ ಇನ್ನೂ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.
ಚೆಂಡು ಬ್ಯಾಟಿಗೆ ತಾಗಲಿಲ್ಲ
ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ನೆಟ್ಸ್ನಲ್ಲಿ ಅಭ್ಯಾಸ ನಡೆಸಿತ್ತು. ಈ ಅಭ್ಯಾಸ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪಾಕ್ ಬ್ಯಾಟರ್ ಆಸಿಫ್ ಅಲಿ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ವೇಗದ ಎಸೆತಗಳಿಗೆ ಅಲಿಗೆ ಬ್ಯಾಟ್‌ನಲ್ಲಿ ಚೆಂಡನ್ನು ಮಿಡಲ್ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಎಲ್ಲಾ ಚೆಂಡುಗಳು ಆಸಿಫ್ ಅಲಿ ದೇಹಕ್ಕೆ ತಗುಲಿತ್ತಿದ್ದವು.
ಇದರಿಂದ ಸಿಟ್ಟಿಗೆದ್ದ ಆಸಿಫ್ ಅಲಿ ತನ್ನ ಬ್ಯಾಟನ್ನು ಕೈಯಿಂದ ಬೀಸಾಡಿದರು. ಆದರೆ ಸ್ವಲ್ಪ ಹೊತ್ತಿನ ನಂತರ ಸಮಾದಾನ ಮಾಡಿಕೊಂಡ ಅಲಿ, ಅದೇ ಬ್ಯಾಟ್ ಅನ್ನು ಎತ್ತಿಕೊಂಡು ಮತ್ತೆ ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ಮುಂದುವರೆಸಿದರು. ಆಸಿಫ್ ಅಲಿ ಬ್ಯಾಟ್ ಎಸೆದ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ಇದು ಪಾಕಿಸ್ತಾನ ತಂಡದ ಮೇಲಿನ ಒತ್ತಡವನ್ನು ತೋರಿಸುತ್ತದೆ ಎಂದು ಹಲವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
Asif Ali throws away his bat in disgust while struggling in the nets pic.twitter.com/xPjFfkuMT9
— Ghumman (@emclub77) November 2, 2022
ಆಫ್ರಿಕಾ ವಿರುದ್ಧ ಗೆದ್ದ ಪಾಕಿಸ್ತಾನ
ಇಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ಬಲಿಷ್ಠ ಆಫ್ರಿಕಾ ತಂಡವನ್ನು 33 ರನ್ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಇಫ್ತಿಕರ್ ಹಾಗೂ ಶಾದಾಬ್ ಅವರ ಸ್ಫೋಟಕ ಅರ್ಧಶಕತದ ನೆರವಿನಿಂದ 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕ್ ಬೌಲರ್ಗಳ ದಾಳಿಗೆ ಸಿಲುಕಿದ ಆಫ್ರಿಕಾ ಬ್ಯಾಟರ್ಗಳು ಹೆಚ್ಚು ರನ್ಗಳಿಸಲಾಗದೆ ಬೇಗನೇ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ ಆಫ್ರಿಕಾ ತಂಡ 9 ವಿಕೆಟ್ ಕಳೆದುಕೊಂಡು ಕೇವಲ 108 ರನ್ ಗಳಿಸಲಷ್ಟೇ ಶಕ್ತವಾಯಿತು.
Published On - 7:03 pm, Thu, 3 November 22