T20 World Cup 2022: ಟಿ20 ವಿಶ್ವಕಪ್ನಲ್ಲಿನ ಹೈವೋಲ್ಟೇಜ್ ಕದನಕ್ಕೆ ಟೀಮ್ ಇಂಡಿಯಾ (Team India) ಭರ್ಜರಿ ಸಿದ್ಧತೆಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಈಗಾಗಲೇ ಪ್ಲೇಯಿಂಗ್ ಇಲೆವೆನ್ ಅನ್ನು ಕೂಡ ಸಂಯೋಜಿಸಲಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ. ಟೀಮ್ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನ್ ವಿರುದ್ಧದ (India vs Pakistan) ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ನಾವು ಕಣಕ್ಕಿಳಿಯುವ ಬಳಗವನ್ನು ರೂಪಿಸಿದ್ದೇವೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಪಾಕ್ ವಿರುದ್ಧ ಆಡಲಿರುವ ಆಟಗಾರರಿಗೆ ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ. ಏಕೆಂದರೆ ಅಂತಿಮ ಕ್ಷಣದ ನಿರ್ಧಾರಗಳ ಬಗ್ಗೆ ನನಗೆ ನಂಬಿಕೆಯಿಲ್ಲ. ಹೀಗಾಗಿ ಈಗಾಗಲೇ ಪ್ಲೇಯಿಂಗ್ ಇಲೆವೆನ್ ಅನ್ನು ರೂಪಿಸಿರುವುದಾಗಿ ಹಿಟ್ಮ್ಯಾನ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ 11 ಆಟಗಾರರಿಗೆ ಈಗಾಗಲೇ ತಿಳಿಸಿದ್ದೇವೆ. ಇದರಿಂದ ಅವರು ಕೂಡ ಪಂದ್ಯಕ್ಕಾಗಿ ತಯಾರಿ ನಡೆಸಲು ಅನುಕೂಲವಾಗಲಿದೆ. ಅಲ್ಲದೆ ಮಹತ್ವದ ಪಂದ್ಯಕ್ಕೂ ಮುನ್ನ ಚೆನ್ನಾಗಿ ತಯಾರಿ ನಡೆಸಬೇಕೆಂದು ಬಯಸುತ್ತೇನೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದ ಆಟಗಾರರಿಗೆ ಮಾಹಿತಿ ನೀಡಿದ್ದೇನೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇದರೊಂದಿಗೆ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ ರೂಪಿಸಿರುವುದು ಬಹಿರಂಗವಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅದು ಕೂಡ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ. ಹೀಗಾಗಿ ಈ ತಂಡಗಳ ವಿರುದ್ಧ ಕಣಕ್ಕಿಳಿಯುವ ಆಟಗಾರರೇ ಪಾಕಿಸ್ತಾನ್ ವಿರುದ್ಧ ಆಡಬಹುದು.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
Published On - 7:31 pm, Sun, 16 October 22