T20 World Cup 2022: ಪರ್ತ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸೋಲನುಭವಿಸಿದೆ. ಇದರೊಂದಿಗೆ ಆಡಿದ ಮೂರು ಪಂದ್ಯಗಳಲ್ಲಿ 2 ಜಯ, 1 ಸೋಲಿನೊಂದಿಗೆ ಭಾರತ ತಂಡವು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದೆ. ಇನ್ನು ಟೀಮ್ ಇಂಡಿಯಾಗೆ ಉಳಿದಿರುವುದು ಕೇವಲ 2 ಪಂದ್ಯ ಮಾತ್ರ. ಅಂದರೆ ಬಾಂಗ್ಲಾದೇಶ್ ಹಾಗೂ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಪಂದ್ಯಗಳನ್ನಾಡಬೇಕಿದ್ದು, ಈ ಎರಡೂ ಪಂದ್ಯಗಳಲ್ಲಿ ಟೀಮ್ ಭಾರತ ಭರ್ಜರಿಯಾಗಿ ಜಯಗಳಿಸಿ ಸೆಮಿಫೈನಲ್ಗೇರಬಹುದು.
ಏಕೆಂದರೆ ಸದ್ಯ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವು 3 ಪಂದ್ಯಗಳಿಂದ ಕಲೆಹಾಕಿರುವುದು ಕೇವಲ 5 ಪಾಯಿಂಟ್ ಮಾತ್ರ. ಅಂದರೆ ಜಿಂಬಾಬ್ವೆ ವಿರುದ್ಧದ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಹೀಗಾಗಿ ಸೌತ್ ಆಫ್ರಿಕಾಗೆ 1 ಪಾಯಿಂಟ್ ಮಾತ್ರ ಲಭಿಸಿತ್ತು. ಅದರಂತೆ ಇದೀಗ ಸೌತ್ ಆಫ್ರಿಕಾ ತಂಡವು 3 ಪಂದ್ಯಗಳಿಂದ ಒಟ್ಟು 5 ಪಾಯಿಂಟ್ ಹೊಂದಿದೆ.
ಇನ್ನುಳಿದ ಎರಡು ಪಂದ್ಯಗಳನ್ನು ಸೌತ್ ಆಫ್ರಿಕಾ ಗೆದ್ದರೂ 9 ಪಾಯಿಂಟ್ ಆಗಲಿದೆ. ಇತ್ತ ಟೀಮ್ ಇಂಡಿಯಾ ಕೊನೆಯ 2 ಪಂದ್ಯಗಳನ್ನು ಗೆದ್ದರೆ 8 ಪಾಯಿಂಟ್ಗಳೊಂದಿಗೆ 2ನೇ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿ ಕೊಡಬಹುದು. ಹೀಗಾಗಿ ಮುಂದಿನ ಎರಡು ಪಂದ್ಯಗಳು ಭಾರತದ ಪಾಲಿಗೆ ತುಂಬಾ ಮಹತ್ವದ್ದು.
ಒಂದು ವೇಳೆ ಟೀಮ್ ಇಂಡಿಯಾ ಮುಂದಿನ 2 ಪಂದ್ಯಗಳಲ್ಲಿ 1 ರಲ್ಲಿ ಸೋತರೂ ಬಾಂಗ್ಲಾದೇಶ್ ಅಥವಾ ಜಿಂಬಾಬ್ವೆ ತಂಡಗಳಿಗೂ ಸೆಮಿಫೈನಲ್ಗೇರುವ ಅವಕಾಶ ದೊರೆಯಲಿದೆ. ಅಂದರೆ ಉಳಿದ ತಂಡಗಳು 6 ಪಾಯಿಂಟ್ ಕಲೆಹಾಕಿದರೆ ನೆಟ್ ರನ್ ರೇಟ್ ಅನ್ನು ಅವಲಂಭಿಸಬೇಕಾಗುತ್ತದೆ.
ಹೀಗಾಗಿ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ಗೇರಲು ಪ್ರಯತ್ನಿಸಬಹುದು. ಇದರಿಂದ ನೆಟ್ ರನ್ ರೇಟ್ ಕೂಡ ಲೆಕ್ಕಕ್ಕೆ ಬರುವುದಿಲ್ಲ. ಹಾಗಾಗಿ ಮುಂದಿನ 2 ಪಂದ್ಯಗಳು ಭಾರತ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎಂದೇ ಹೇಳಬಹುದು.
ಭಾರತ ತಂಡ:
ರೋಹಿತ್ ಶರ್ಮಾ (ನಾಯಕ) , ದಿನೇಶ್ ಕಾರ್ತಿಕ್, ಕೆಎಲ್ ರಾಹುಲ್ , ವಿರಾಟ್ ಕೊಹ್ಲಿ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್ , ರವಿಚಂದ್ರನ್ ಅಶ್ವಿನ್ , ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ , ಅರ್ಷದೀಪ್ ಸಿಂಗ್ , ರಿಷಭ್ ಪಂತ್ , ದೀಪಕ್ ಹೂಡಾ, ಹರ್ಷಲ್ ಪಟೇಲ್. ಯುಜ್ವೇಂದ್ರ ಚಹಾಲ್.