T20 World Cup 2024: ಕೇವಲ 58 ರನ್​ಗೆ ಆಲೌಟ್: ಅಫ್ಘಾನಿಸ್ತಾನ್ ತಂಡಕ್ಕೆ ಅಮೋಘ ಜಯ

|

Updated on: Jun 04, 2024 | 9:39 AM

T20 World Cup 2024: ಟಿ20 ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಅಫ್ಘಾನಿಸ್ತಾನ್ ತಂಡವು ಶುಭಾರಂಭ ಮಾಡಿದೆ. ಉಗಾಂಡ ವಿರುದ್ಧ ನಡೆದ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅಫ್ಘಾನ್ ಬ್ಯಾಟರ್​ಗಳು 183 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಉಗಾಂಡ ಕೇವಲ ಎರಡಂಕಿ ಮೊತ್ತಕ್ಕೆ ಆಲೌಟ್ ಆಗಿದೆ.

T20 World Cup 2024: ಕೇವಲ 58 ರನ್​ಗೆ ಆಲೌಟ್: ಅಫ್ಘಾನಿಸ್ತಾನ್ ತಂಡಕ್ಕೆ ಅಮೋಘ ಜಯ
Afghanistan vs Uganda
Follow us on

T20 World Cup 2024: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉಗಾಂಡ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡಕ್ಕೆ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 154 ರನ್​ಗಳ ಜೊತೆಯಾಟವಾಡಿದ ಬಳಿಕ ಇಬ್ರಾಹಿಂ ಝದ್ರಾನ್ (74) ಮಸಾಬ ಎಸೆತದಲ್ಲಿ ಬೌಲ್ಡ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗುರ್ಬಾಝ್ 45 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 76 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ನಬಿ 14 ರನ್ ಬಾರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್​ ಕಲೆಹಾಕಿತು.

184 ರನ್​ಗಳ ಗುರಿಯನ್ನು ಬೆನ್ನತ್ತಿದ ಉಗಾಂಡ ತಂಡಕ್ಕೆ ಆರಂಭಿಕ ಆಘಾತನ ನೀಡುವಲ್ಲಿ ಅಫ್ಘಾನ್ ಬೌಲರ್​ಗಳು ಯಶಸ್ವಿಯಾಗಿದ್ದರು. ಕೇವಲ 18 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಉರುಳಿಸಿದ ಅಫ್ಘಾನ್ ಬೌಲರ್​ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಆಘಾತದಿಂದ ಪಾರಾಗುವ ಮುನ್ನವೇ ಉಗಾಂಡ ತಂಡಕ್ಕೆ ಎಡಗೈ ವೇಗಿ ಫಝಲ್​ಹಕ್ ಫಾರೂಖಿ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದ್ದರು. ಪರಿಣಾಮ ಉಗಾಂಡ ತಂಡವು 16 ಓವರ್​ಗಳಲ್ಲಿ 58 ರನ್​ಗಳಿಸಿ ಸರ್ವಪತನ ಕಂಡಿತು.

ಅಫ್ಘಾನಿಸ್ತಾನ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಫಝಲ್ಹಕ್ ಫಾರೂಖಿ 4 ಓವರ್​ಗಳಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಪಡೆದಿದ್ದಾರೆ.

ಈ ಅಮೋಘ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ಶುಭಾರಂಭ ಮಾಡಿದೆ. ಅಲ್ಲದೆ ಜೂನ್ 8 ರಂದು ನಡೆಯಲಿರುವ ತನ್ನ 2ನೆ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.

ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಗುಲ್ಬದಿನ್ ನೈಬ್ , ಅಜ್ಮತುಲ್ಲಾ ಒಮರ್ಜಾಯ್ , ಮೊಹಮ್ಮದ್ ನಬಿ , ನಜೀಬುಲ್ಲಾ ಝದ್ರಾನ್ , ಕರೀಂ ಜನತ್ , ರಶೀದ್ ಖಾನ್ (ನಾಯಕ) , ಮುಜೀಬ್ ಉರ್ ರಹಮಾನ್ , ನವೀನ್-ಉಲ್-ಹಕ್ , ಫಝಲ್​ಹಕ್ ಫಾರೂಖಿ.

ಇದನ್ನೂ ಓದಿ: T20 World Cup 2024: ಕೇವಲ 88 ರನ್​ಗಳಿಸಿದ ಆಟಗಾರನಿಗೆ ಪಾಕ್​ ತಂಡದಲ್ಲಿ ಸ್ಥಾನ..!

ಉಗಾಂಡ ಪ್ಲೇಯಿಂಗ್ 11: ಸೈಮನ್ ಸ್ಸೆಸಾಜಿ (ವಿಕೆಟ್ ಕೀಪರ್) , ರೋಜರ್ ಮುಕಾಸಾ , ರೋನಕ್ ಪಟೇಲ್ , ರಿಯಾಜತ್ ಅಲಿ ಷಾ , ದಿನೇಶ್ ನಕ್ರಾಣಿ , ರಾಬಿನ್ಸನ್ ಒಬುಯಾ , ಅಲ್ಪೇಶ್ ರಾಮ್ಜಾನಿ , ಬ್ರಿಯಾನ್ ಮಸಾಬ (ನಾಯಕ) , ಬಿಲಾಲ್ ಹಸನ್ , ಕಾಸ್ಮಾಸ್ ಕ್ಯೆವುಟಾ , ಹೆನ್ರಿ ಸ್ಸೆನ್ಯಾಂಡೋ.

 

Published On - 9:28 am, Tue, 4 June 24