Team India: ಟೀಮ್ ಇಂಡಿಯಾ ಆರಂಭಿಕರು ಯಾರು? ಮೌನ ಮುರಿದ ರಾಹುಲ್ ದ್ರಾವಿಡ್
T20 World Cup 2024: ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಎದುರಾಳಿ ಪಾಕಿಸ್ತಾನ್. ಹೀಗಾಗಿ ಜೂನ್ 9 ರಂದು ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇದಾದ ಬಳಿಕ ಯುಎಸ್ಎ ಮತ್ತು ಕೆನಡಾ ತಂಡಗಳ ವಿರುದ್ಧ ಭಾರತ ತಂಡ ಕಣಕ್ಕಿಳಿಯಲಿದೆ.
T20 World Cup 2024: ಟಿ20 ವಿಶ್ವಕಪ್ 2024 ಕ್ಕಾಗಿ ಭಾರತ ತಂಡವು ಭರ್ಜರಿ ಸಿದ್ಧತೆಯಲ್ಲಿದೆ. ಜೂನ್ 5 ರಂದು ನಡೆಯಲಿರುವ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ. ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 741 ರನ್ ಬಾರಿಸಿ ಮಿಂಚಿದ್ದರು. ಹೀಗಾಗಿ ರೋಹಿತ್ ಶರ್ಮಾ ಜೊತೆ ಕಿಂಗ್ ಕೊಹ್ಲಿ ಇನಿಂಗ್ಸ್ ಆರಂಭಿಸುವುದು ಉತ್ತಮ ಎಂಬ ಅಭಿಪ್ರಾಯಗಳನ್ನು ಮಾಜಿ ಕ್ರಿಕೆಟಿಗರು ಮುಂದಿಟ್ಟಿದ್ದರು.
ಇತ್ತ ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದರು. ಇದೇ ವೇಳೆ ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಾಣಿಸಿಕೊಂಡಿದ್ದರು. ಅತ್ತ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಟ್ಟು ಸ್ಯಾಮ್ಸನ್ಗೆ ಅವಕಾಶ ನೀಡಲಾಗಿದ್ದರೂ, ಕಲೆಹಾಕಿದ್ದು ಕೇವಲ ಒಂದು ರನ್ ಮಾತ್ರ. ಹೀಗಾಗಿ ಸಂಜು ಸ್ಯಾಮ್ಸನ್ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎಂದೇ ಹೇಳಬಹುದು.
ವಿರಾಟ್ ಕೊಹ್ಲಿ vs ಯಶಸ್ವಿ ಜೈಸ್ವಾಲ್:
ಪ್ರಸ್ತುತ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ನಡುವೆ ನೇರ ಪೈಪೋಟಿ ಇದೆ. ಈ ಪೈಪೋಟಿ ಇರುವುದನ್ನು ಖುದ್ದು ರಾಹುಲ್ ದ್ರಾವಿಡ್ ಕೂಡ ಒಪ್ಪಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯನ್ನು ರಾಹುಲ್ ದ್ರಾವಿಡ್ ಅವರ ಮುಂದಿಡಲಾಗಿದ್ದು, ಈ ವೇಳೆ ಸದ್ಯಕ್ಕೆ ಯಾರೆಂಬುದನ್ನು ಬಹಿರಂಗಪಡಿಸುವುದಿಲ್ಲ ಎಂಬ ಜಾಣ ಉತ್ತರ ನೀಡಿದ್ದಾರೆ.
ನಮ್ಮ ಬಳಿ ಹಲವು ಆಯ್ಕೆಗಳಿವೆ. ಹೀಗಾಗಿ ನಾವು ಇನ್ನೂ ನಮ್ಮ ಆರಂಭಿಕ ಜೋಡಿ ಯಾರೆಂಬುದನ್ನು ಬಹಿರಂಗಪಡಿಸಲು ಬಯಸುತ್ತಿಲ್ಲ. ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಓಪನರ್ ಆಗಿ ಆಡಿದ್ದಾರೆ.
ಹೀಗಾಗಿ ನಮ್ಮ ಬಳಿ ಮೂರು ಆಯ್ಕೆಗಳಿವೆ. ಈ ಆಯ್ಕೆಗಳನ್ನು ಗಮನದಲ್ಲಿಟ್ಟುಕೊಂಡೇ ನಾವು ತಂಡವನ್ನು ಆಯ್ಕೆ ಮಾಡಿದ್ದೇವೆ. ನಾವು ಈ ಪಂದ್ಯಗಳ ಪರಿಸ್ಥಿತಿಗಳು ಮತ್ತು ಸಂಯೋಜನೆಯನ್ನು ಆಧರಿಸಿ ನಮಗೆ ಬೇಕಾದ ಆರಂಭಿಕ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಎಂದು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ: T20 World Cup 2024 Schedule: ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಹೀಗಾಗಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದರಂತೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದರೆ ಅಚ್ಚರಿಪಡಬೇಕಿಲ್ಲ.