T20 World Cup 2024: ಕೇವಲ 58 ರನ್ಗೆ ಆಲೌಟ್: ಅಫ್ಘಾನಿಸ್ತಾನ್ ತಂಡಕ್ಕೆ ಅಮೋಘ ಜಯ
T20 World Cup 2024: ಟಿ20 ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸುವ ಮೂಲಕ ಅಫ್ಘಾನಿಸ್ತಾನ್ ತಂಡವು ಶುಭಾರಂಭ ಮಾಡಿದೆ. ಉಗಾಂಡ ವಿರುದ್ಧ ನಡೆದ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಅಫ್ಘಾನ್ ಬ್ಯಾಟರ್ಗಳು 183 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಉಗಾಂಡ ಕೇವಲ ಎರಡಂಕಿ ಮೊತ್ತಕ್ಕೆ ಆಲೌಟ್ ಆಗಿದೆ.
T20 World Cup 2024: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಉಗಾಂಡ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡಕ್ಕೆ ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 154 ರನ್ಗಳ ಜೊತೆಯಾಟವಾಡಿದ ಬಳಿಕ ಇಬ್ರಾಹಿಂ ಝದ್ರಾನ್ (74) ಮಸಾಬ ಎಸೆತದಲ್ಲಿ ಬೌಲ್ಡ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗುರ್ಬಾಝ್ 45 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 76 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ನಬಿ 14 ರನ್ ಬಾರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.
184 ರನ್ಗಳ ಗುರಿಯನ್ನು ಬೆನ್ನತ್ತಿದ ಉಗಾಂಡ ತಂಡಕ್ಕೆ ಆರಂಭಿಕ ಆಘಾತನ ನೀಡುವಲ್ಲಿ ಅಫ್ಘಾನ್ ಬೌಲರ್ಗಳು ಯಶಸ್ವಿಯಾಗಿದ್ದರು. ಕೇವಲ 18 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಉರುಳಿಸಿದ ಅಫ್ಘಾನ್ ಬೌಲರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಆಘಾತದಿಂದ ಪಾರಾಗುವ ಮುನ್ನವೇ ಉಗಾಂಡ ತಂಡಕ್ಕೆ ಎಡಗೈ ವೇಗಿ ಫಝಲ್ಹಕ್ ಫಾರೂಖಿ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದ್ದರು. ಪರಿಣಾಮ ಉಗಾಂಡ ತಂಡವು 16 ಓವರ್ಗಳಲ್ಲಿ 58 ರನ್ಗಳಿಸಿ ಸರ್ವಪತನ ಕಂಡಿತು.
ಅಫ್ಘಾನಿಸ್ತಾನ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಫಝಲ್ಹಕ್ ಫಾರೂಖಿ 4 ಓವರ್ಗಳಲ್ಲಿ ಕೇವಲ 9 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ನವೀನ್ ಉಲ್ ಹಕ್ ಹಾಗೂ ರಶೀದ್ ಖಾನ್ ತಲಾ 2 ವಿಕೆಟ್ ಪಡೆದಿದ್ದಾರೆ.
ಈ ಅಮೋಘ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ಶುಭಾರಂಭ ಮಾಡಿದೆ. ಅಲ್ಲದೆ ಜೂನ್ 8 ರಂದು ನಡೆಯಲಿರುವ ತನ್ನ 2ನೆ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಗುಲ್ಬದಿನ್ ನೈಬ್ , ಅಜ್ಮತುಲ್ಲಾ ಒಮರ್ಜಾಯ್ , ಮೊಹಮ್ಮದ್ ನಬಿ , ನಜೀಬುಲ್ಲಾ ಝದ್ರಾನ್ , ಕರೀಂ ಜನತ್ , ರಶೀದ್ ಖಾನ್ (ನಾಯಕ) , ಮುಜೀಬ್ ಉರ್ ರಹಮಾನ್ , ನವೀನ್-ಉಲ್-ಹಕ್ , ಫಝಲ್ಹಕ್ ಫಾರೂಖಿ.
ಇದನ್ನೂ ಓದಿ: T20 World Cup 2024: ಕೇವಲ 88 ರನ್ಗಳಿಸಿದ ಆಟಗಾರನಿಗೆ ಪಾಕ್ ತಂಡದಲ್ಲಿ ಸ್ಥಾನ..!
ಉಗಾಂಡ ಪ್ಲೇಯಿಂಗ್ 11: ಸೈಮನ್ ಸ್ಸೆಸಾಜಿ (ವಿಕೆಟ್ ಕೀಪರ್) , ರೋಜರ್ ಮುಕಾಸಾ , ರೋನಕ್ ಪಟೇಲ್ , ರಿಯಾಜತ್ ಅಲಿ ಷಾ , ದಿನೇಶ್ ನಕ್ರಾಣಿ , ರಾಬಿನ್ಸನ್ ಒಬುಯಾ , ಅಲ್ಪೇಶ್ ರಾಮ್ಜಾನಿ , ಬ್ರಿಯಾನ್ ಮಸಾಬ (ನಾಯಕ) , ಬಿಲಾಲ್ ಹಸನ್ , ಕಾಸ್ಮಾಸ್ ಕ್ಯೆವುಟಾ , ಹೆನ್ರಿ ಸ್ಸೆನ್ಯಾಂಡೋ.
Published On - 9:28 am, Tue, 4 June 24