ಟಿ20 ವಿಶ್ವಕಪ್ ಗೆದ್ದು ಬೀಗಿರುವ ಟೀಮ್ ಇಂಡಿಯಾ (Team India) ಗುರುವಾರ ಭಾರತಕ್ಕೆ ಬಂದಿಳಿಯಲಿದೆ. ವಿಶ್ವಕಪ್ ಫೈನಲ್ ಬಳಿಕ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡ ಭಾರತ ತಂಡವನ್ನು ಕರೆತರಲು ಇದೀಗ ಏರ್ ಇಂಡಿಯಾದ ವಿಶೇಷ ಚಾರ್ಟರ್ಡ್ ಫ್ಲೈಟ್ ತೆರಳಿದೆ. ಅದರಂತೆ ಗುರುವಾರ ಮುಂಜಾನೆ ಟೀಮ್ ಇಂಡಿಯಾ ಆಟಗಾರರು ದೆಹಲಿಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಟಿ20 ವಿಶ್ವಕಪ್ ಫೈನಲ್ ಮುಕ್ತಾಯದ ಬೆನ್ನಲ್ಲೇ ಬಾರ್ಬಡೋಸ್ನಲ್ಲಿ ಚಂಡಮಾರುತ ಆರಂಭವಾಗಿತ್ತು. ಬಿರುಗಾಳಿ ಸಹಿತದ ಭಾರೀ ಮಳೆಯಿಂದಾಗಿ ವಿಮಾನಯಾನಗಳು ಬಂದ್ ಆಗಿದ್ದವು. ಅಲ್ಲದೆ ಬಹುತೇಕ ವಿಮಾನ ನಿಲ್ದಾಣಗಳು ತನ್ನ ಸೇವಾ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಟೀಮ್ ಇಂಡಿಯಾದ ಹಿಂತಿರುಗುವಿಕೆಯು ವಿಳಂಬವಾಗಿದೆ.
ಟೀಮ್ ಇಂಡಿಯಾ ಆಟಗಾರರನ್ನು ತವರಿಗೆ ಕರೆತರಲು ಇದೀಗ ಬಿಸಿಸಿಐ ವಿಶೇಷ ಏರ್ ಇಂಡಿಯಾ ವಿಮಾನ ವ್ಯವಸ್ಥೆಯನ್ನು ಮಾಡಿದೆ. ಈ ವಿಮಾನದಲ್ಲಿ ಭಾರತೀಯ ಆಟಗಾರರು ಜೊತೆಗೆ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡ ಭಾರತೀಯ ಪತ್ರಕರ್ತರು ಸಹ ಆಗಮಿಸಲಿದ್ದಾರೆ.
ಭಾರತಕ್ಕೆ ಆಗಮಿಸಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ. ಇದಾದ ಬಳಿಕ ಮುಂಬೈ ನಗರದ ಪ್ರಮುಖ ರಸ್ತೆಗಳಲ್ಲಿ ಓಪನ್ ಬಸ್ನಲ್ಲಿ ಟಿ20 ವಿಶ್ವಕಪ್ನೊಂದಿಗೆ ಟೀಮ್ ಇಂಡಿಯಾ ಆಟಗಾರರು ಪ್ರದಕ್ಷಿಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಒಂದೆಡೆ ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಆಗಮನವಾಗುತ್ತಿದ್ದರೆ, ಮತ್ತೊಂದೆಡೆ ಝಿಂಬಾಬ್ವೆ ವಿರುದ್ಧದ ಸರಣಿಗಾಗಿ ಭಾರತದ ಯುವ ಪಡೆ ತೆರಳಿದೆ. ಜುಲೈ 6 ರಿಂದ ಹರಾರೆಯಲ್ಲಿ ಶುರುವಾಗಲಿರುವ 5 ಪಂದ್ಯಗಳ ಟಿ20 ಸರಣಿಗಾಗಿ ಭಾರತ ಟಿ20 ತಂಡ ತೆರಳಿದೆ. ಈ ಸರಣಿಯಿಂದ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಹೊರಗುಳಿದಿದ್ದಾರೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಸರಣಿಗೆ ಯುವ ಪಡೆಯನ್ನು ಆಯ್ಕೆ ಮಾಡಲಾಗಿದೆ.
15 ಸದಸ್ಯರ ಈ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದು, ಮೊದಲೆರಡು ಪಂದ್ಯಗಳಿಗೆ ಟಿ20 ವಿಶ್ವಕಪ್ ಬಳಗದಲ್ಲಿ ಕಾಣಿಸಿಕೊಂಡಿರುವ ಶಿವಂ ದುಬೆ, ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಅಲಭ್ಯರಾಗಲಿದ್ದಾರೆ. ಇನ್ನು ಈ ಮೂವರು ಆಟಗಾರರು 3ನೇ ಪಂದ್ಯದ ವೇಳೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: Virat Kohli: 20 ಮಿಲಿಯನ್ ಲೈಕ್ಸ್: ದಾಖಲೆ ಬರೆದ ಕಿಂಗ್ ಕೊಹ್ಲಿ
ಝಿಂಬಾಬ್ವೆ ಟಿ20 ಸರಣಿಗೆ ಟೀಮ್ ಇಂಡಿಯಾ: ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ , ಹರ್ಷಿತ್ ರಾಣಾ. ಶಿವಂ ದುಬೆ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್.