IND vs PAK: ‘ಟೀಂ ಇಂಡಿಯಾವನ್ನು ನೋಡಿ ಕಲಿಯಿರಿ’; ಪಿಸಿಬಿ ವಿರುದ್ಧ ಕೆರಳಿ ಕೆಂಡವಾದ ಪಾಕ್ ಮಾಧ್ಯಮಗಳು

|

Updated on: Jun 10, 2024 | 10:17 PM

IND vs PAK, T20 World Cup 2024: ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ, ಟಿ20 ವಿಶ್ವಕಪ್‌ನ ಪ್ರತಿ ಪಂದ್ಯದ ನಂತರ, ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಪದಕವನ್ನು ನೀಡಲಾಗುತ್ತದೆ. ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಪಂದ್ಯದಲ್ಲಿ 3 ಕ್ಯಾಚ್ ಹಿಡಿದ ರಿಷಬ್ ಪಂತ್​ಗೆ ಈ ಪದಕ ನೀಡಿದ್ದಾರೆ.

IND vs PAK: ‘ಟೀಂ ಇಂಡಿಯಾವನ್ನು ನೋಡಿ ಕಲಿಯಿರಿ’; ಪಿಸಿಬಿ ವಿರುದ್ಧ ಕೆರಳಿ ಕೆಂಡವಾದ ಪಾಕ್ ಮಾಧ್ಯಮಗಳು
ರವಿಶಾಸ್ತ್ರಿ, ರಿಷಬ್ ಪಂತ್
Follow us on

2024ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಭಾರತ ತಂಡ ಪಾಕಿಸ್ತಾನ ತಂಡವನ್ನು (India vs Pakistan) 6 ರನ್‌ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೇವಲ 119 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡಕ್ಕೆ ಪೂರ್ಣ 20 ಓವರ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಭಾರತದ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 113 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಬ್ ಪಂತ್ (Rishabh Pant) ಬ್ಯಾಟಿಂಗ್ ಜೊತೆಗೆ ಕೀಪಿಂಗ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ಕೀಪಿಂಗ್​ನಲ್ಲಿ 3 ಕ್ಯಾಚ್ ಹಿಡಿದ ಪಂತ್​ಗೆ ಬೆಸ್ಟ್ ಫೀಲ್ಡರ್ ಅವಾರ್ಡ್ ಕೂಡ ಲಭಿಸಿತು.

ಪಂತ್​ಗೆ ಬೆಸ್ಟ್ ಫೀಲ್ಡರ್ ಅವಾರ್ಡ್

ವಾಸ್ತವವಾಗಿ ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ, ಟಿ20 ವಿಶ್ವಕಪ್‌ನ ಪ್ರತಿ ಪಂದ್ಯದ ನಂತರ, ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಪದಕವನ್ನು ನೀಡಲಾಗುತ್ತದೆ. ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಫೀಲ್ಡಿಂಗ್ ಕೋಚ್ ದಿಲೀಪ್ ಅವರು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಪದಕ ನೀಡುವಂತೆ ಮನವಿ ಮಾಡಿದರು. ಪಂದ್ಯದಲ್ಲಿ 3 ಕ್ಯಾಚ್ ಹಿಡಿದ ರಿಷಬ್ ಪಂತ್​ಗೆ ಈ ಪದಕ ನೀಡಿದ ರವಿಶಾಸ್ತ್ರಿ, ‘ರಿಷಬ್ ಪಂತ್ ಅಪಘಾತದ ಸುದ್ದಿ ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು. ನಂತರ ಅವರನ್ನು ಆಸ್ಪತ್ರೆಯಲ್ಲಿ ನೋಡಿದಾಗ ಅವರ ಸ್ಥಿತಿ ಹದಗೆಟ್ಟಿತ್ತು. ಭಾರತ ಮತ್ತು ಪಾಕಿಸ್ತಾನದಂತಹ ದೊಡ್ಡ ಪಂದ್ಯಗಳಲ್ಲಿ ಫಿಟ್ ಆಗಿರುವುದು ಮತ್ತು ಪ್ರದರ್ಶನ ನೀಡುವುದು ತಂಡಕ್ಕೆ ಒಳ್ಳೆಯದು. ಬ್ಯಾಟಿಂಗ್‌ನಲ್ಲಿ ನೀವು ಏನು ಮಾಡುತ್ತೀರಿ ಎಂಬುದು ಎಲ್ಲರಿಗೂ ತಿಳಿದಿದೆ. ನೀವು ಎಷ್ಟು ಶ್ರಮಿಸಿದ್ದೀರಿ ಎಂಬುದಕ್ಕೆ ಇದು ಸಾಕ್ಷಿ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ’ ಎಂದರು.

ಯಾರಾದರೂ ಇದ್ದಾರೆಯೇ?- ಪಾಕ್ ಮಾಧ್ಯಮಗಳು

ಇದು ಒಂದೆಡೆಯಾದರೆ, ರವಿಶಾಸ್ತ್ರಿ ರಿಷಬ್ ಪಂತ್‌ಗೆ ಅತ್ಯುತ್ತಮ ಫೀಲ್ಡರ್‌ ಪದಕ ನೀಡಿ ಗೌರವಿಸುತ್ತಿರುವ ವಿಡಿಯೋ ಪಾಕಿಸ್ತಾನಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದ್ದು, ಇದಾದ ಬಳಿಕ ಅಲ್ಲಿನ ಮಾಧ್ಯಮಗಳು ಪಿಸಿಬಿಯನ್ನು ತರಾಟೆಗೆ ತೆಗೆದುಕೊಂಡಿವೆ. ಪಾಕಿಸ್ತಾನಿ ಪತ್ರಕರ್ತ ಎಹ್ತಿಶಾಮ್ ಉಲ್ ಹಕ್ ಅವರು ಪಂತ್ ಅವರ ವೀಡಿಯೊವನ್ನು ಟ್ವೀಟ್ ಮಾಡಿದ್ದು, ‘ಪಾಕಿಸ್ತಾನದ ಡ್ರೆಸ್ಸಿಂಗ್ ರೂಂಗೆ ಈ ರೀತಿ ಬಂದು ಆಟಗಾರರನ್ನು ಪ್ರೋತ್ಸಾಹಿಸುವ ಯಾರಾದರೂ ಇದ್ದಾರೆಯೇ?. ನಾವು ಅಂತಹ ಯಾರನ್ನಾದರೂ ಹೊಂದಿದ್ದೇವೆಯೇ?. ಈ ದೇಶ ಕ್ರಿಕೆಟ್ ದಿಗ್ಗಜರಿಂದ ತುಂಬಿದೆ ಆದರೆ ಕ್ರಿಕೆಟ್ ರಾಜಕಾರಣಿಗಳ ಕೈಯಲ್ಲಿದೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

42 ರನ್ ಚಚ್ಚಿದ ರಿಷಬ್ ಪಂತ್

ಪಾಕಿಸ್ತಾನದ ವಿರುದ್ಧ ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಆಟಗಾರನೆನಿಸಿಕೊಂಡ ರಿಷಬ್ ಪಂತ್ 42 ರನ್​ಗಳ ಕಾಣಿಕೆ ನೀಡಿದರು. ಪಂತ್ ಅವರ ಈ ಆಟದಿಂದಲೇ ಭಾರತ ತಂಡ 100 ಪ್ಲಸ್ ರನ್ ದಾಟಲು ಸಾಧ್ಯವಾಯಿತು. ಪಂತ್ ಬಿಟ್ಟರೆ ಯಾವುದೇ ಆಟಗಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇನ್ನು ಬ್ಯಾಟಿಂಗ್ ಜೊತೆಗೆ ಕೀಪಿಂಗ್​ನಲ್ಲಿ ಮಿಂಚಿದ ಪಂತ್, ಫಖರ್ ಜಮಾನ್, ಇಮಾದ್ ವಾಸಿಮ್ ಮತ್ತು ಶಾದಾಬ್ ಖಾನ್ ಅವರ ಕ್ಯಾಚ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Mon, 10 June 24