IND vs ENG: 5 ಓವರ್, ಸೂಪರ್ ಓವರ್ ಇಲ್ಲ: ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?
T20 World Cup 2024: ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಮಾಡಲಾಗಿಲ್ಲ. ಬದಲಾಗಿ ಹೆಚ್ಚುವರಿ 250 ನಿಮಿಷಗಳನ್ನು ಬಳಸಲಾಗುತ್ತದೆ. ಅಂದರೆ ಪಂದ್ಯಕ್ಕೆ ನಿಗದಿ ಮಾಡಲಾಗಿರುವ ಸಮಯದ ಬಳಿಕ ಮ್ಯಾಚ್ ಆಯೋಜಿಸಲು 250 ನಿಮಿಷಗಳವರೆಗೆ ಕಾಯಲಿದ್ದಾರೆ. ಈ ಅವಧಿಯೊಳಗೆ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ.
T20 World Cup 2024: ಟಿ20 ವಿಶ್ವಕಪ್ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವನ್ನು ಸೋಲಿಸಿ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶಿಸಲಿದೆ. ಇನ್ನು ಗುರುವಾರ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಇದರಿಂದ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿ ಮಾಡಲಾಗಿಲ್ಲ. ಬದಲಾಗಿ ಹೆಚ್ಚುವರಿ 250 ನಿಮಿಷಗಳನ್ನು ನೀಡಲಾಗುತ್ತದೆ. ಅಂದರೆ ಪಂದ್ಯಕ್ಕೆ ನಿಗದಿ ಮಾಡಲಾಗಿರುವ ಸಮಯದ ಬಳಿಕ 4 ಗಂಟೆ 16 ನಿಮಿಷಗಳನ್ನು ಹೆಚ್ಚುವರಿಯಾಗಿ ಬಳಸಲಾಗುತ್ತದೆ.
ಇದರ ನಡುವೆ ಪಂದ್ಯವನ್ನು ಆಯೋಜಿಸಲು ಐಸಿಸಿ ಕೆಲ ನಿಯಮಗಳನ್ನು ರೂಪಿಸಿದೆ. ಈ ನಿಯಮದಂತೆ ಮೊದಲಿಗೆ ಓವರ್ಗಳ ಕಡಿತದೊಂದಿಗೆ ಮ್ಯಾಚ್ ಪೂರ್ಣಗೊಳಿಸಲು ಮುಂದಾಗಲಿದ್ದಾರೆ. ಇಲ್ಲಿ ಓವರ್ಗಳ ಕಡಿತಕ್ಕೆ ಕಟ್ ಆಫ್ ಟೈಮ್ ಯಾವಾಗ? ಆ ಬಳಿಕ ಪಂದ್ಯ ಮುಂದುವರೆಸುವುದು ಹೇಗೆ ಎಂದು ನೋಡುವುದಾದರೆ…
- ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದ ಆರಂಭಿಕ ಸಮಯ ರಾತ್ರಿ 8 ಗಂಟೆ (ಭಾರತೀಯ ಕಾಲಮಾನ).
- ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡಚಣೆಯಾದರೆ ಭಾರತೀಯ ಕಾಲಮಾನ 12.10 AM ರವರೆಗೆ ಯಾವುದೇ ಓವರ್ ಕಡಿತ ಮಾಡಲಾಗುವುದಿಲ್ಲ. ಬದಲಾಗಿ ಉಭಯ ತಂಡಗಳು ತಲಾ 20 ಓವರ್ಗಳ ಇನಿಂಗ್ಸ್ ಆಡಲಿದೆ.
- 12.10 AM ಬಳಿಕ ಪ್ರತಿ ಐದು ನಿಮಿಷಕ್ಕೆ ಒಂದು ಓವರ್ನಂತೆ ಓವರ್ಗಳನ್ನು ಕಡಿತ ಮಾಡಲಾಗುತ್ತದೆ. ಇಲ್ಲಿ ಮಳೆಯ ಪ್ರಮಾಣವನ್ನು ಸಹ ಪರಿಗಣನೆಗೆ ತೆಗೆದುಕೊಂಡು ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ ಓವರ್ಗಳನ್ನು ಕಡಿತ ಮಾಡಬಹುದು.
- ಓವರ್ಗಳ ಕಡಿತದೊಂದಿಗೆ ಪಂದ್ಯವನ್ನು ಪೂರ್ಣಗೊಳಿಸಲು ಕನಿಷ್ಠ 10 ಓವರ್ಗಳ ಮ್ಯಾಚ್ ನಡೆಯಲೇಬೇಕು. ಅಂದರೆ ಐಸಿಸಿಯ ಹೊಸ ನಿಯಮದಂತೆ ಸೆಮಿಫೈನಲ್ನಲ್ಲಿ ಫಲಿತಾಂಶ ನಿರ್ಧರಿಸಲು ತಲಾ ಹತ್ತು ಓವರ್ಗಳ ಇನಿಂಗ್ಸ್ ಆಡಬೇಕಾಗುತ್ತದೆ.
- ಒಂದು ವೇಳೆ ಮೊದಲು ಬ್ಯಾಟಿಂಗ್ ಮಾಡಿದ ತಂಡ 20 ಓವರ್ಗಳನ್ನು ಆಡಿದ್ದರೆ, ದ್ವಿತೀಯ ಇನಿಂಗ್ಸ್ನಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ಕನಿಷ್ಠ 10 ಓವರ್ಗಳ ಪಂದ್ಯವನ್ನು ಆಯೋಜಿಸಬೇಕಾಗುತ್ತದೆ.
- ನಾಕೌಟ್ ಹಂತದಲ್ಲಿ ಫಲಿತಾಂಶ ನಿರ್ಧರಿಸಲು 5 ಓವರ್ಗಳ ಪಂದ್ಯ ಅಥವಾ ಸೂಪರ್ ಓವರ್ಗಳನ್ನು ಆಡಿಸುವುದಿಲ್ಲ ಎಂದು ಐಸಿಸಿ ಈ ಹಿಂದೆಯೇ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಓವರ್ಗಳ ಮ್ಯಾಚ್ ನಡೆಯುವುದಿಲ್ಲ ಎಂದೇ ಹೇಳಬಹುದು. ಇದಾಗ್ಯೂ ಪಂದ್ಯ ಟೈ ಆದರೆ ಮಾತ್ರ ಸೂಪರ್ ಓವರ್ ಆಡಿಸಲಾಗುತ್ತದೆ.
- ಇನ್ನು 10 ಓವರ್ಗಳ ಪಂದ್ಯವನ್ನು ಆರಂಭಿಸಲು ಕೂಡ ಸಮಯ ನಿಗದಿ ಮಾಡಲಾಗಿದೆ. ಓವರ್ ಕಟ್ ಆಫ್ ಟೈಮ್ 12.10 ಆಗಿರುವುದರಿಂದ 10 ಓವರ್ಗಳ ಪಂದ್ಯವು 1.44 AM ಗಂಟೆಯಿಂದ ಶುರುವಾಗಬೇಕು.
- ಒಂದು ವೇಳೆ 1.44 AM ರಿಂದ 10 ಓವರ್ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಿದ್ದರೆ, ಫೀಲ್ಡ್ ಅಂಪೈರ್ ಮತ್ತು ಮ್ಯಾಚ್ ರೆಫರಿ ಚರ್ಚಿಸಿ ಪಂದ್ಯವನ್ನು ರದ್ದುಗೊಳಿಸಲಿದ್ದಾರೆ.
- ಪಂದ್ಯವು ರದ್ದಾದರೆ ಸೂಪರ್-8 ಸುತ್ತಿನ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವು ಫೈನಲ್ಗೆ ಅರ್ಹತೆ ಪಡೆಯಲಿದೆ. ಇಲ್ಲಿ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ದರೆ, ಗ್ರೂಪ್-2 ಅಂಕ ಪಟ್ಟಿಯಲ್ಲಿ ಇಂಗ್ಲೆಂಡ್ ದ್ವಿತೀಯ ಸ್ಥಾನದಲ್ಲಿದೆ.
- ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಮಳೆಯ ಕಾರಣ ರದ್ದಾದರೆ, ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸುವುದು ಖಚಿತ.
ಮೀಸಲು ದಿನ ಯಾಕಿಲ್ಲ?
ಸಾಮಾನ್ಯವಾಗಿ ಐಸಿಸಿ ಟೂರ್ನಿಯ ಸೆಮಿಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ನೀಡಲಾಗಿರುತ್ತದೆ. ಅದರಂತೆ ಈ ಬಾರಿಯ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ ಮಾಡಲಾಗಿತ್ತು. ಆದರೆ ದ್ವಿತೀಯ ಪಂದ್ಯಕ್ಕೆ ಮೀಸಲು ದಿನವನ್ನು ನೀಡಲಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿರುವುದು.
ಇದನ್ನೂ ಓದಿ: South Africa: ವಿಶ್ವಕಪ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೌತ್ ಆಫ್ರಿಕಾ
ಅಂದರೆ ಜೂನ್ 27 ರಂದು ದ್ವಿತೀಯ ಸೆಮಿಫೈನಲ್ ನಡೆಯಲಿದ್ದು, ಈ ಪಂದ್ಯಕ್ಕೆ ಮೀಸಲು ದಿನವನ್ನಾಗಿ ಜೂನ್ 28 ರನ್ನು ನಿಗದಿ ಮಾಡಬೇಕಿತ್ತು. ಇದರಿಂದ ದ್ವಿತೀಯ ಸೆಮಿಫೈನಲ್ ಆಡುವ ತಂಡ ಸೆಮಿಫೈನಲ್ ಮುಕ್ತಾಯದ ಬೆನ್ನಲ್ಲೇ ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಬೇಕಾಗುತ್ತದೆ. ಹೀಗಾಗಿ ದ್ವಿತೀಯ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಮೀಸಲು ದಿನದ ಬದಲು ಹೆಚ್ಚುವರಿ 250 ನಿಮಿಷಗಳ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲು ಐಸಿಸಿ ಮುಂದಾಗಿದೆ.