Kieron Pollard: ಇಂಗ್ಲೆಂಡ್ ಪರ ಹೊಸ ಇನಿಂಗ್ಸ್ ಆರಂಭಿಸಿದ ಕೀರನ್ ಪೊಲಾರ್ಡ್
T20 World Cup 2024: 36 ವರ್ಷದ ಕೀರನ್ ಪೊಲಾರ್ಡ್ ವೆಸ್ಟ್ ಇಂಡೀಸ್ ಪರ 101 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 83 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಪೊಲಾರ್ಡ್ ಒಟ್ಟು 1569 ರನ್ ಕಲೆಹಾಕಿದ್ದಾರೆ. ಹಾಗೆಯೇ 42 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಪೊಲಾರ್ಡ್ 2012 ರ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಇದೀಗ ಹೊಸ ಹುದ್ದೆಯೊಂದಿಗೆ ವಿಂಡೀಸ್ ಕ್ರಿಕೆಟಿಗ ಹೊಸ ಇನಿಂಗ್ಸ್ ಆರಂಭಿಸಿರುವುದು ವಿಶೇಷ.
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕೀರನ್ ಪೊಲಾರ್ಡ್ (Kieron Pollard) ಇಂಗ್ಲೆಂಡ್ ಪರ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಕೂಡ ಬ್ಯಾಟಿಂಗ್ ಸಲಹೆಗಾರನಾಗಿ ಎಂಬುದು ವಿಶೇಷ. ಅಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪೊಲಾರ್ಡ್ ಇಂಗ್ಲೆಂಡ್ ತಂಡದ ಸಲಹೆಗಾರನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಟಿ20 ವಿಶ್ವಕಪ್ 2024ರ ಬಹುತೇಕ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ. ಇದಕ್ಕಾಗಿ ಸ್ಥಳೀಯ ಪರಿಸ್ಥಿತಿಗಳ ಒಳನೋಟಗಳ ಸಲಹೆಗಳನ್ನು ಪಡೆಯಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪೊಲಾರ್ಡ್ ಅವರನ್ನು ಬ್ಯಾಟಿಂಗ್ ಸಲಹೆಗಾರನಾಗಿ ನೇಮಿಸಿಕೊಂಡಿದೆ. ಅದರಂತೆ ಟಿ20 ವಿಶ್ವಕಪ್ ಮುಕ್ತಾಯದವರೆಗೆ ಪೊಲಾರ್ಡ್ ಇಂಗ್ಲೆಂಡ್ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಇದಕ್ಕೂ ಮುನ್ನ ಪೊಲಾರ್ಡ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪ್ರಮುಖ ಹುದ್ದೆಯೊಂದಿಗೆ ಕಾಣಿಸಿಕೊಂಡಿರುವುದು ವಿಶೇಷ.
ಇಂಗ್ಲೆಂಡ್ ತಂಡವು ಜೂನ್ 4 ರಂದು ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪೊಲಾರ್ಡ್ ಗರಡಿಯಲ್ಲಿ ಇಂಗ್ಲೆಂಡ್ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ಈ ಮೂಲಕ ಮೊದಲ ಪಂದ್ಯದಲ್ಲೇ ಅಬ್ಬರಿಸಲು ತಯಾರಿ ಆರಂಭಿಸಿದ್ದಾರೆ.
ಇಂಗ್ಲೆಂಡ್ ಟಿ20 ವಿಶ್ವಕಪ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.
ಇದನ್ನೂ ಓದಿ: T20 World Cup 2024: ಕೇವಲ ಎರಡೇ ಎರಡು ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ರೂಬೆನ್
ಇಂಗ್ಲೆಂಡ್ ತಂಡದ ಪಂದ್ಯಗಳ ವೇಳಾಪಟ್ಟಿ:
ದಿನಾಂಕ | ಪಂದ್ಯಗಳು | ಸಮಯ (IST) | ಸ್ಥಳ |
ಜೂನ್ 04, 2024 | ಇಂಗ್ಲೆಂಡ್ vs ಸ್ಕಾಟ್ಲೆಂಡ್ | 8:00 PM | ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ |
ಜೂನ್ 08, 2024 | ಇಂಗ್ಲೆಂಡ್ vs ಆಸ್ಟ್ರೇಲಿಯಾ | 10:30 PM | ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ |
ಜೂನ್ 13, 2024 | ಇಂಗ್ಲೆಂಡ್ vs ಒಮಾನ್ | 12:30 AM | ನಾರ್ತ್ ಸೌಂಡ್, ಆಂಟಿಗುವಾ |
ಜೂನ್ 15, 2024 | ಇಂಗ್ಲೆಂಡ್ vs ನಮೀಬಿಯಾ | 10:30 PM | ನಾರ್ತ್ ಸೌಂಡ್, ಆಂಟಿಗುವಾ |