T20 World Cup 2024: ಕೆನಡಾ ಪರ ಅಬ್ಬರಿಸಿದ ದಾವಣಗೆರೆ ಹುಡುಗ

| Updated By: ಆಯೇಷಾ ಬಾನು

Updated on: Jun 02, 2024 | 1:58 PM

Shreyas Movva: ಶ್ರೇಯಸ್ ಮೋವಾ ಕೆನಡಾ ಪರ 2021 ರಲ್ಲಿ ಪಾದಾರ್ಪಣೆ ಮಾಡಿದ್ದರು. ಟಿ20 ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಕನ್ನಡಿಗ, ಕೆನಡಾ ಪರ ಈವರೆಗೆ 6 ಒಡಿಐ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 73 ರನ್​ ಗಳಿಸಿದ್ದಾರೆ. ಅಲ್ಲದೆ ಜೂನ್ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯದಲ್ಲೂ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಮೋವಾ.

T20 World Cup 2024: ಕೆನಡಾ ಪರ ಅಬ್ಬರಿಸಿದ ದಾವಣಗೆರೆ ಹುಡುಗ
Shreyas Movva
Follow us on

T20 World Cup 2024: ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಕರುನಾಡ ಕುವರ ಅಬ್ಬರಿಸಿದ್ದಾರೆ. ಆದರೆ ಅದು ಭಾರತದ ಪರವಲ್ಲ ಎಂಬುದಷ್ಟೇ ವ್ಯತ್ಯಾಸ. ಅಂದರೆ ಕೆನಡಾ ತಂಡದಲ್ಲೊಬ್ಬ ಕನ್ನಡಿಗನಿದ್ದಾನೆ. ಹೆಸರು ಶ್ರೇಯಸ್ ಮೋವಾ (Shreyas Movva). ದಾವಣಗೆರೆ ಮೂಲದವರಾದ ಶ್ರೇಯಸ್ ಇದೀಗ ಕೆನಡಾ ರಾಷ್ಟ್ರೀಯ ತಂಡದ ಆಟಗಾರ. ಅದರಂತೆ ಟಿ20 ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಶ್ರೇಯಸ್ ಮೋವಾ ಕೆನಡಾ ಪರ ಕಣಕ್ಕಿಳಿದಿದ್ದರು.

ಯುಎಸ್​ಎ ವಿರುದ್ಧದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶ್ರೇಯಸ್ ಕೇವಲ 16 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 32 ರನ್ ಬಾರಿಸಿ ಮಿಂಚಿದ್ದಾರೆ. ಅಂತಿಮ ಓವರ್​ಗಳ ವೇಳೆ ಶ್ರೇಯಸ್ ಮೋವಾ ನೀಡಿದ ಕೊಡುಗೆಯಿಂದ ಕೆನಡಾ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್​ ಗಳಿಸಲು ಸಾಧ್ಯವಾಯಿತು.

ಯಾರು ಈ ಶ್ರೇಯಸ್ ಮೋವಾ?

ಈ ಮೇಲೆ ಹೇಳಿದಂತೆ ಶ್ರೇಯಸ್ ಮೋವಾ ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಮೂಲದವರು. ಎಂಜಿ.‌ವಾಸುದೇವ ರೆಡ್ಡಿ ಹಾಗೂ ಎನ್.ಯಶೋಧಾ ದಂಪತಿ ಪುತ್ರರಾಗಿರುವ ಶ್ರೇಯಸ್ ಈ ಹಿಂದೆ ಕರ್ನಾಟಕ ಪರ ಅಂಡರ್ 16 ಮತ್ತು ಅಂಡರ್ 19 ಪಂದ್ಯಗಳನ್ನಾಡಿದ್ದರು. ಅಲ್ಲದೆ KSCA ತರಬೇತುದಾರ ಪಿ.ವಿ.ನಾಗರಾಜ್ ಬಳಿ ತರಬೇತಿಯನ್ನು ಪಡೆದಿದ್ದರು.

ಇದಾದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ತೆರಳಿದ ಶ್ರೇಯಸ್ ಮೋವಾ ಇದೀಗ ಅಲ್ಲೇ ಸೆಟಲ್ ಆಗಿದ್ದಾರೆ. ಅಲ್ಲದೆ ಕೆನಡಾ ಪೌರತ್ವದೊಂದಿಗೆ ರಾಷ್ಟ್ರೀಯ ತಂಡದಲ್ಲೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕೆನಡಾ ಪರ ಚೊಚ್ಚಲ ವಿಶ್ವಕಪ್ ಆಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಇದೀಗ ಶ್ರೇಯಸ್ ಮೋವಾ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೆನಡಾ ತಂಡದ ಪ್ರಮುಖ ಆಟಗಾರ:

ಶ್ರೇಯಸ್ ಮೋವಾ ಕೆನಡಾ ಪರ 2021 ರಲ್ಲಿ ಪಾದಾರ್ಪಣೆ ಮಾಡಿದ್ದರು. ಟಿ20 ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಕನ್ನಡಿಗ, ಕೆನಡಾ ಪರ ಈವರೆಗೆ 6 ಒಡಿಐ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 73 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: Aaron Jones: ಆರೋನ್ ಜೋನ್ಸ್ ತೂಫಾನ್​ಗೆ ಹಳೆಯ ವಿಶ್ವ ದಾಖಲೆಗಳು ಉಡೀಸ್

ಹಾಗೆಯೇ ಇದುವರೆಗೆ ಆಡಿದ 7 ಏಕದಿನ ಪಂದ್ಯಗಳಿಂದ 98 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪ್ರಸ್ತುತ ಕೆನಡಾ ಟಿ20 ತಂಡದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಜೂನ್ 15 ರಂದು ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕೆನಡಾ ಪರ ಶ್ರೇಯಸ್ ಮೋವಾ ಅವರನ್ನು ಎದುರು ನೋಡಬಹುದು.