T20 World Cup 2024: ಆರೋನ್ ಜೋನ್ಸ್ ಸಿಡಿಲಬ್ಬರ: ಅಮೆರಿಕಗೆ ಐತಿಹಾಸಿಕ ಜಯ
T20 World Cup 2024: ಟಿ20 ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ಆತಿಥೇಯ ಯುಎಸ್ಎ ತಂಡವು ಶುಭಾರಂಭ ಮಾಡಿದೆ. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 10 ಸಿಕ್ಸ್ ಮತ್ತು 4 ಫೋರ್ಗಳೊಂದಿಗೆ ಅಜೇಯ 94 ರನ್ ಬಾರಿಸುವ ಮೂಲಕ ಆರೋನ್ ಜೋನ್ಸ್ ಗೆಲುವಿನ ರೂವಾರಿ ಎನಿಸಿಕೊಂಡರು.
ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup 2024) ಮೊದಲ ಪಂದ್ಯದಲ್ಲಿ ಯುಎಸ್ಎ (ಅಮೆರಿಕ) ತಂಡ ಭರ್ಜರಿ ಜಯ ಸಾಧಿಸಿದೆ. ಕೆನಡಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆನಡಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಜಾನ್ಸನ್ ಮತ್ತು ನವನೀತ್ ಧಲಿವಾಲ್ ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟವಾಡಿದರು. ಆದರೆ ಪವರ್ ಪ್ಲೇನ ಕೊನೆಯ ಓವರ್ನ 2ನೇ ಎಸೆತದಲ್ಲಿ ಆರೋನ್ ಜಾನ್ಸನ್ (23) ವಿಕೆಟ್ ಪಡೆಯುವಲ್ಲಿ ಹರ್ಮೀತ್ ಸಿಂಗ್ ಯಶಸ್ವಿಯಾಗಿದ್ದಾರೆ. ಇದಾಗ್ಯೂ ಕೆನಡಾ ತಂಡ ಮೊದಲ 6 ಓವರ್ಗಳಲ್ಲಿ 50 ರನ್ ಕಲೆಹಾಕಿತು.
ಈ ಹಂತದಲ್ಲಿ ಜೊತೆಗೂಡಿದ ನವನೀತ್ ಮತ್ತು ನಿಕೋಲಸ್ ಕೀರ್ಟನ್ ಅರ್ಧಶತಕದ ಜೊತೆಯಾಟವಾಡಿದರು. ಇದರ ನಡುವೆ ನವನೀತ್ ಧಲಿವಾಲ್ 44 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 61 ರನ್ ಬಾರಿಸಿದರೆ, ನಿಕೋಲಸ್ ಕೀರ್ಟನ್ 31 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 51 ರನ್ ಸಿಡಿಸಿದರು.
ಇನ್ನು ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 32 ರನ್ ಬಾರಿಸಿದರು. ಈ ಮೂಲಕ ಕೆನಡಾ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿತು.
195 ರನ್ಗಳ ಕಠಿಣ ಗುರಿ ಬೆನ್ನತ್ತಿದ ಯುಎಸ್ಎ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಸ್ಟೀವನ್ ಟೇಲರ್ (0) ಶೂನ್ಯಕ್ಕೆ ಔಟಾದರೆ, ನಾಯಕ ಮೊನಾಕ್ ಪಟೇಲ್ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಆಂಡ್ರೀಸ್ ಗೌಸ್ ಮತ್ತು ಆರೋನ್ ಜೋನ್ಸ್ 131 ರನ್ಗಳ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ 46 ಎಸೆತಗಳಲ್ಲಿ 3 ಸಿಕ್ಸ್ ಮತ್ತು 7 ಫೋರ್ಗಳೊಂದಿಗೆ 65 ರನ್ ಬಾರಿಸಿದ ಆಂಡ್ರೀಸ್ ಗೌಸ್ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಆರೋನ್ ಜೋನ್ಸ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 40 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 94 ರನ್ ಬಾರಿಸಿದರು. ಈ ಮೂಲಕ ಯುಎಸ್ಎ ತಂಡ ಕೇವಲ 17.4 ಓವರ್ಗಳಲ್ಲಿ ಗುರಿಯನ್ನು ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: T20 World Cup 2024 Schedule: ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಅಮೆರಿಕಗೆ ಐತಿಹಾಸಿಕ ಜಯ:
ಈ ಭರ್ಜರಿ ಗೆಲುವಿನೊಂದಿಗೆ ಯುಎಸ್ಎ ಗರಿಷ್ಠ ಸ್ಕೋರ್ ಚೇಸ್ ಮಾಡಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಅಮೆರಿಕ ತಂಡವು 169 ರನ್ಗಳನ್ನು ಚೇಸ್ ಮಾಡಿರುವುದು ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯುಎಸ್ಎ ತಂಡ ಯಶಸ್ವಿಯಾಗಿದೆ.
ಕೆನಡಾ (ಪ್ಲೇಯಿಂಗ್ XI): ಆರೋನ್ ಜಾನ್ಸನ್, ನವನೀತ್ ಧಲಿವಾಲ್, ಪರ್ಗತ್ ಸಿಂಗ್, ನಿಕೋಲಸ್ ಕಿರ್ಟನ್, ಶ್ರೇಯಸ್ ಮೊವ್ವ (ವಿಕೆಟ್ ಕೀಪರ್), ದಿಲ್‌ಪ್ರೀತ್ ಸಿಂಗ್, ಸಾದ್ ಬಿನ್ ಜಾಫರ್ (ನಾಯಕ), ನಿಖಿಲ್ ದತ್ತಾ, ದಿಲ್ಲನ್ ಹೇಲಿಗರ್, ಕಲೀಂ ಸನಾ, ಜೆರೆಮಿ ಗಾರ್ಡನ್.
ಇದನ್ನೂ ಓದಿ: T20 World Cup 2024: ಕೆನಡಾ ಪರ ಕಣಕ್ಕಿಳಿದ ಕನ್ನಡಿಗ..!
ಯುಎಸ್ಎ (ಪ್ಲೇಯಿಂಗ್ XI): ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರೋನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಜಸ್ದೀಪ್ ಸಿಂಗ್, ಅಲಿ ಖಾನ್, ಸೌರಭ್ ನೇತ್ರವಲ್ಕರ್.
Published On - 9:31 am, Sun, 2 June 24