T20 World Cup 2024: ಮೈ ಮರೆತರೆ ಟೀಮ್ ಇಂಡಿಯಾ ಹೊರಕ್ಕೆ..!

T20 World Cup 2024: ಪ್ರಸ್ತುತ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ 4 ಅಂಕಗಳೊಂದಿಗೆ +2.425 ನೆಟ್ ರನ್ ರೇಟ್ ಹೊಂದಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 2 ಅಂಕಗಳೊಂದಿಗೆ +0.223 ನೆಟ್ ರನ್ ಕಲೆಹಾಕಿದೆ. ಹಾಗೆಯೇ 2 ಅಂಕಗಳೊಂದಿಗೆ -0.650 ನೆಟ್ ರನ್ ರೇಟ್ ಹೊಂದಿರುವ ಅಫ್ಘಾನಿಸ್ತಾನ್ ತಂಡವು ಮೂರನೇ ಸ್ಥಾನದಲ್ಲಿದೆ.

T20 World Cup 2024: ಮೈ ಮರೆತರೆ ಟೀಮ್ ಇಂಡಿಯಾ ಹೊರಕ್ಕೆ..!
IND-AFG-AUS

Updated on: Jun 23, 2024 | 12:29 PM

t20 World Cup 2024: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಪಂದ್ಯಗಳು ರಣರೋಚಕ ಘಟ್ಟದತ್ತ ಸಾಗುತ್ತಿದೆ. ಗ್ರೂಪ್-1 ರಲ್ಲಿ ಕಣಕ್ಕಿಳಿದಿರುವ 4 ತಂಡಗಳಲ್ಲಿ ಮೂರು ತಂಡಗಳು ಸೆಮಿಫೈನಲ್​ ರೇಸ್​ನಲ್ಲಿದೆ. ಅದರಲ್ಲೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವು ಕ್ವಾರ್ಟರ್ ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಜೂನ್ 24 ರಂದು ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ನೇರವಾಗಿ ಸೆಮಿ ಫೈನಲ್​ಗೆ ಪ್ರವೇಶಿಸಲಿದೆ. ಒಂದು ವೇಳೆ ಈ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದರೆ ನೆಟ್​ ರನ್ ರೇಟ್ ಗಣನೆಗೆ ಬರಲಿದೆ.

ಪ್ರಸ್ತುತ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ 4 ಅಂಕಗಳೊಂದಿಗೆ +2.425 ನೆಟ್ ರನ್ ರೇಟ್ ಹೊಂದಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 2 ಅಂಕಗಳೊಂದಿಗೆ +0.223 ನೆಟ್ ರನ್ ಕಲೆಹಾಕಿದೆ. ಹಾಗೆಯೇ 2 ಅಂಕಗಳೊಂದಿಗೆ -0.650 ನೆಟ್ ರನ್ ರೇಟ್ ಹೊಂದಿರುವ ಅಫ್ಘಾನಿಸ್ತಾನ್ ತಂಡವು ಮೂರನೇ ಸ್ಥಾನದಲ್ಲಿದೆ. ಇನ್ನು 2 ಪಂದ್ಯಗಳಲ್ಲೂ ಸೋಲನುಭವಿಸಿರುವ ಬಾಂಗ್ಲಾದೇಶ್ ತಂಡ -2.489 ನೆಟ್ ರನ್ ರೇಟ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಸೆಮಿಫೈನಲ್ ಹಾದಿ:

  • ಭಾರತ ತಂಡವು ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ ನೇರವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.
  • ಆಸ್ಟ್ರೇಲಿಯಾ ತಂಡ ಭಾರತ ತಂಡಕ್ಕೆ ಸೋಲುಣಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ತಂಡದ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ.
  • ಒಂದು ವೇಳೆ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಅಫ್ಘಾನಿಸ್ತಾನ್ ತಂಡ ಬಾಂಗ್ಲಾದೇಶ್ ವಿರುದ್ಧ ಗೆದ್ದು ಸೆಮಿಫೈನಲ್​ ಹಂತಕ್ಕೇರಬಹುದು.
  • ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನು ಸೋಲಿಸಿ ಉತ್ತಮ ನೆಟ್ ರನ್ ರೇಟ್​ನೊಂದಿಗೆ ಅಗ್ರಸ್ಥಾನಕ್ಕೇರಿದರೆ, ಭಾರತ ತಂಡವನ್ನು ನೆಟ್​ ರನ್ ರೇಟ್ ಮೂಲಕ ಹಿಂದಿಕ್ಕಿ ಸೆಮಿಫೈನಲ್​ಗೇರುವ ಅವಕಾಶ ಅಫ್ಘಾನಿಸ್ತಾನ್ ತಂಡಕ್ಕಿದೆ.

ಮೈಮರೆತರೆ ಟೀಮ್ ಇಂಡಿಯಾ ಹೊರಕ್ಕೆ:

ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದರೆ, ಅಫ್ಘಾನಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರುವ ಅವಕಾಶ ಹೆಚ್ಚಾಗಲಿದೆ. ಏಕೆಂದರೆ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಲಿದೆ.

ಇದರಿಂದ ಎಷ್ಟು ರನ್​ಗಳ ಅಂತರದಿಂದ ಗೆಲ್ಲಬೇಕೆಂಬ ಸ್ಪಷ್ಟ ಚಿತ್ರಣ ಅಫ್ಘಾನಿಸ್ತಾನ್ ತಂಡದ ಮುಂದಿರಲಿದೆ. ಈ ಮೂಲಕ ನೆಟ್ ರನ್ ರೇಟ್​ ಮೂಲಕ ಭಾರತ ಅಥವಾ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್​ಗೇರುವ ಅವಕಾಶ ಅಫ್ಘಾನಿಸ್ತಾನ್ ತಂಡಕ್ಕೆ ಇರಲಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋಲುವ ಸಂದರ್ಭ ಎದುರಾದರೆ ನೆಟ್ ರನ್ ರೇಟ್ ಕುಸಿಯದಂತೆ ನೋಡಿಕೊಳ್ಳಬೇಕಾಗುತ್ತದೆ.

ಟೀಮ್ ಇಂಡಿಯಾ ಏನು ಮಾಡಬೇಕು?

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ನೇರವಾಗಿ ಸೆಮಿಫೈನಲ್​ಗೇರಲಿದೆ. ಒಂದು ವೇಳೆ ಟೀಮ್ ಇಂಡಿಯಾ ಆಸೀಸ್ ವಿರುದ್ಧ ಸೋಲುವ ಪರಿಸ್ಥಿತಿ ಎದುರಾದರೆ ಹೀನಾಯ ಸೋಲನ್ನು ತಪ್ಪಿಸಿಕೊಳ್ಳಬೇಕು. ಈ ಮೂಲಕ ನೆಟ್ ರನ್ ರೇಟ್​ ಕುಸಿಯದಂತೆ ನೋಡಿಕೊಳ್ಳಬೇಕಿದೆ.

ಭಾರತ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿದರೆ ಟಿ20 ವಿಶ್ವಕಪ್​ನಿಂದ ಹೊರಬೀಳುವ ಸಾಧ್ಯತೆಯಿದೆ. ಏಕೆಂದರೆ ಕೊನೆಯ ಪಂದ್ಯದ ಮೂಲಕ ದ್ವಿತೀಯ ಸ್ಥಾನಕ್ಕೇರುವ ಅವಕಾಶ ಅಫ್ಘಾನಿಸ್ತಾನ್ ತಂಡಕ್ಕಿದೆ. ಹೀಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕು ಅಥವಾ ಹೀನಾಯ ಸೋಲನ್ನು ತಪ್ಪಿಸಿಕೊಳ್ಳಬೇಕು.

ಇದನ್ನೂ ಓದಿ:

ಈ ಮೂಲಕ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬೇಕು. ಇದರಿಂದ ಭಾರತದ ವಿರುದ್ಧ ಗೆದ್ದರೂ ಆಸ್ಟ್ರೇಲಿಯಾ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೇ ಇರಲಿದೆ. ಅತ್ತ ಬಾಂಗ್ಲಾದೇಶ್ ವಿರುದ್ಧ ಅಫ್ಘಾನಿಸ್ತಾನ್ ಅಮೋಘ ಗೆಲುವು ದಾಖಲಿಸಿ, ಉತ್ತಮ ನೆಟ್ ರನ್​ ರೇಟ್​ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಬಹುದು. ಈ ಮೂಲಕ ಅಫ್ಘಾನಿಸ್ತಾನ್ ತಂಡ ಸೆಮಿಫೈನಲ್​ಗೆ ಪ್ರವೇಶಿಸಬಹುದು.

ಇದನ್ನೂ ಓದಿ: Virat Kohli: ದಾಖಲೆಗಳ ಸರದಾರನ ಹೆಸರಿಗೆ 3 ವಿಶ್ವ ದಾಖಲೆ ಸೇರ್ಪಡೆ

ಅಂದರೆ ಇಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಬೇಕು. ಇಲ್ಲ ಹೀನಾಯಕ ಸೋಲನ್ನು ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಒಂದು ವೇಳೆ ಅಂತಿಮ ಪಂದ್ಯದಲ್ಲಿ ವಿಶ್ವ ಚಾಂಪಿಯನ್ನರ ವಿರುದ್ಧ ಭಾರತ ಮೈಮರೆತರೆ ಟಿ20 ವಿಶ್ವಕಪ್​ನಿಂದಲೇ ಹೊರಬೀಳಬಹುದು.

 

 

Published On - 10:54 am, Sun, 23 June 24