Virat Kohli: ವಿರಾಟ್ ಕೊಹ್ಲಿಗೆ ಕಿಂಗ್ ಯಾರೆಂದು ತೋರಿಸ್ತೀನಿ ಎಂದಿದ್ದ ಬ್ಯಾಟರ್ ಶೂನ್ಯಕ್ಕೆ ಔಟ್..!
T20 World Cup 2024: ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಸೂಪರ್-8 ಹಂತಕ್ಕೇರಿದೆ. ಇನ್ನು ಲೀಗ್ ಹಂತದಲ್ಲಿ ಭಾರತ ತಂಡಕ್ಕೆ ಒಂದು ಪಂದ್ಯವಿದ್ದು, ಶನಿವಾರ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆನಡಾ ತಂಡವನ್ನು ಎದುರಿಸಲಿದೆ.
T20 World Cup 2024: ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಿರೀಕ್ಷೆಯಂತೆ ಜಯ ಸಾಧಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್ಎ ತಂಡ 20 ಓವರ್ಗಳಲ್ಲಿ 110 ರನ್ ಕಲೆಹಾಕಿದ್ದರು. ಈ ಗುರಿಯನ್ನು ಟೀಮ್ ಇಂಡಿಯಾ 18.2 ಓವರ್ಗಳಲ್ಲಿ ಚೇಸ್ ಮಾಡಿತ್ತು. ಈ ಗೆಲುವಿನ ಬಳಿಕ ಅತೀ ಹೆಚ್ಚು ಸುದ್ದಿಯಾಗಿದ್ದು ಯುಎಸ್ಎ ತಂಡದ ಆರಂಭಿಕ ಬ್ಯಾಟರ್ ಶಯಾನ್ ಜಹಾಂಗೀರ್. ಇದಕ್ಕೆ ಕಾರಣ 2023 ರಲ್ಲಿ ಶಯಾನ್ ನೀಡಿದ್ದ ಹೇಳಿಕೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಅರ್ಹತಾ ಪಂದ್ಯಗಳ ವೇಳೆ ಮಾತನಾಡಿದ್ದ ಶಯಾನ್ ಜಹಾಂಗೀರ್, ವಿರಾಟ್ ಕೊಹ್ಲಿ ವಿರುದ್ಧ ಆಡುವುದು ಮತ್ತು ಅವರಿಗೆ ಕಿಂಗ್ ಯಾರು ಎಂಬುದನ್ನು ತೋರಿಸಿಕೊಡುವುದು ನನ್ನ ಕನಸುಗಳಲ್ಲಿ ಒಂದಾಗಿದೆ ಎಂದಿದ್ದರು. ಈ ಪೋಸ್ಟ್ ಭಾರತ ಮತ್ತು ಯುಎಸ್ಎ ನಡುವಣ ಪಂದ್ಯಕ್ಕೂ ಮುನ್ನ ವೈರಲ್ ಆಗಿತ್ತು.
ಈ ವೈರಲ್ ಬೆನ್ನಲ್ಲೇ ಕಿಂಗ್ ಕೊಹ್ಲಿ ಅಭಿಮಾನಿಗಳು ಶಯಾನ್ ಜಹಾಂಗೀರ್ ಅವರ ಬ್ಯಾಟಿಂಗ್ ವೀಕ್ಷಿಸಲು ಕಾದು ಕುಳಿತಿದ್ದರು. ಆದರೆ ಅರ್ಷದೀಪ್ ಸಿಂಗ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಶಯಾನ್ (0) ಎಲ್ಬಿಡಬ್ಲ್ಯೂ ಆಗಿ ಶೂನ್ಯಕ್ಕೆ ಔಟಾಗಿದ್ದರು.
ಇದೀಗ ಶಯಾನ್ ಜಹಾಂಗೀರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಕಿಂಗ್ ಕೊಹ್ಲಿಗೆ ಯಾರು ಕಿಂಗ್ ಎಂದು ತೋರಿಸಲು ಹೋಗಿ ಗೋಲ್ಡನ್ ಡಕ್ಗೆ ಔಟಾಗಿದ್ದೀರಾ ಎಂದು ಕಿಚಾಯಿಸಲಾಗುತ್ತಿದೆ. ಅತ್ತ ಇಂತಹ ಕಿಚಾಯಿಸುವಿಕೆ ಅಮೆರಿಕನ್ ಕ್ರಿಕೆಟಿಗ ಜಸ್ಕರನ್ ಮಲ್ಹೋತ್ರಾ ಕೂಡ ಕೈ ಜೋಡಿಸಿದ್ದು ಅಚ್ಚರಿ.
ಈ ಕುರಿತಾದ ಪೋಸ್ಟ್ವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಜಸ್ಕರನ್ ಮಲ್ಹೋತ್ರಾ, ಶಯಾನ್ ಜಹಾಂಗೀರ್ಗೆ ಬಾಯಿ ಮುಚ್ಚಿಕೊಂಡಿರುವಂತೆ ಪರೋಕ್ಷವಾಗಿ ಸೂಚಿಸಿದ್ದರು. ಆದರೆ ಈ ಪೋಸ್ಟ್ ಗಮನಿಸಿದ ಮತ್ತೋರ್ವ ಯುಎಸ್ಎ ಕ್ರಿಕೆಟಿಗ ಅಲಿ ಖಾನ್ ಅಸಮಾಧಾನ ಹೊರಹಾಕಿದ್ದಾರೆ.
ಜಸ್ಕರನ್ ಮಲ್ಹೋತ್ರಾ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಯುಎಸ್ಎ ವೇಗಿ ಅಲಿ ಖಾನ್, ಇನ್ನೊಬ್ಬ ಆಟಗಾರನನ್ನು ದ್ವೇಷಿಸುವ ಮನಸ್ಥಿತಿಯನ್ನು ಮಾಜಿ ಸಹ ಆಟಗಾರನಿಂದ ನಾನು ನಿರೀಕ್ಷಿಸಿರಲಿಲ್ಲ. ಇದು ವೃತ್ತಿಪರತೆಯಲ್ಲ ಎಂದು ಅಲಿ ಖಾನ್ ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ಜಸ್ಕರನ್ ಮಲ್ಹೋತ್ರಾ ಈ ಟ್ರೋಲ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: Virat Kohli: ಐಪಿಎಲ್ನಲ್ಲಿ ಮೆರೆದಾಟ, ಅಮೆರಿಕದಲ್ಲಿ ಪರದಾಟ..!
ಒಟ್ಟಿನಲ್ಲಿ ವಿರಾಟ್ ಕೊಹ್ಲಿಗೆ ಕಿಂಗ್ ಯಾರೆಂದು ತೋರಿಸಲು ಮುಂದಾಗಿದ್ದ ಶಯಾನ್ ಜಹಾಂಗೀರ್ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ. ಈ ಶೂನ್ಯದೊಂದಿಗೆ ಇದೀಗ ಯುಎಸ್ಎ ತಂಡದ ಆರಂಭಿಕ ಆಟಗಾರ ಭಾರೀ ಟ್ರೋಲ್ಗೆ ಒಳಗಾಗಿದ್ದಾರೆ.