2024 ರ ಟಿ20 ವಿಶ್ವಕಪ್ನಲ್ಲಿ (T20 World Cup 2024) ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯದಲ್ಲೇ ಅಮೆರಿಕ (Pakistan vs America) ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಯುಎಸ್ಎ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ತಂಡವು ಸಾಕಷ್ಟು ಅಪಹಾಸ್ಯಕ್ಕೊಳಗಾಗುತ್ತಿದೆ. ಇದಲ್ಲದೆ ಮೊದಲ ಪಂದ್ಯದಲ್ಲೇ ಸೋತಿರುವ ಬಾಬರ್ ಪಡೆ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಅಪಾಯದಲ್ಲಿದೆ. ಏಕೆಂದರೆ ಅಮೆರಿಕ ಎರಡು ಪಂದ್ಯಗಳಲ್ಲಿ ಎರಡನ್ನು ಗೆದ್ದಿದೆ ಮತ್ತು ಟೀಂ ಇಂಡಿಯಾ (Team India) ತನ್ನ ಮೊದಲ ಪಂದ್ಯವನ್ನೂ ಗೆದ್ದಿದೆ. ಈಗ ಪಾಕಿಸ್ತಾನ ಕೂಡ ಟೀಂ ಇಂಡಿಯಾ ವಿರುದ್ಧ ಸೋತರೆ ಸೂಪರ್-8 ತಲುಪುವುದು ಕಷ್ಟವಾಗಲಿದೆ. ಇದೆಲ್ಲದರ ನಡುವೆ ಇದೀಗ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಭುಗಿಲೆದ್ದಿದೆ. ಅದೆನೆಂದರೆ ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ (Haris Rauf) ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಅಮೆರಿಕ ಆಟಗಾರ ಗಂಭೀರ ಆರೋಪ ಹೊರಿಸಿದ್ದಾರೆ.
ಪಾಕಿಸ್ತಾನ ಮತ್ತು ಯುಎಸ್‌ಎ ನಡುವಿನ ಪಂದ್ಯದ ನಂತರ, ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಮೆರಿಕದ ಅನುಭವಿ ಕ್ರಿಕೆಟಿಗ ರಸ್ಟಿ ಥೆರಾನ್, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ವಿರುದ್ಧ ಚೆಂಡು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ರಸ್ಟಿ ಥರಾನ್ ಟ್ವೀಟ್ ಮಾಡಿ ‘ಹ್ಯಾರಿಸ್ ರೌಫ್ ತನ್ನ ಬೆರಳಿನ ಉಗುರಿನಿಂದ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ್ದಾರೆ. ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಹ್ಯಾರಿಸ್ ರೌಫ್ ಇಷ್ಟೆಲ್ಲ ಮಾಡಿದ್ದಾರೆ. ರನ್‌ಅಪ್‌ನಲ್ಲಿ ಹೋಗುವಾಗ ಹ್ಯಾರಿಸ್ ತನ್ನ ಹೆಬ್ಬೆರಳಿನ ಉಗುರಿನಿಂದ ಚೆಂಡನ್ನು ಉಜ್ಜಿದ್ದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಹೀಗಾಗಿ ಈ ಬಗ್ಗೆ ಐಸಿಸಿ ಸೂಕ್ತ ತನಿಖೆ ನಡೆಸಬೇಕೆಂದು ಬರೆದುಕೊಂಡಿದ್ದಾರೆ.
@ICC are we just going to pretend Pakistan aren’t scratching the hell out of this freshly changed ball? Reversing the ball that’s just been changed 2 overs ago? You can literally see Harris Rauf running his thumb nail over the ball at the top of his mark. @usacricket #PakvsUSA
— Rusty Theron (@RustyTheron) June 6, 2024
ಪ್ರಸ್ತುತ ಬಾಲ್ ಟ್ಯಾಂಪರಿಂಗ್ ಆರೋಪ ಹೊತ್ತುಕೊಂಡಿರುವ ಹ್ಯಾರಿಸ್ ರೌಫ್, ನಿರ್ಣಾಯಕ ಹಂತದಲ್ಲೇ ಮಾಡಿದ ಎಡವಟ್ಟಿನಿಂದ ತಂಡದ ಸೋಲಿಗೆ ಕಾರಣರಾದರು. ವಾಸ್ತವವಾಗಿ ಈ ಪಂದ್ಯದಲ್ಲಿ ಅಮೆರಿಕ ಗೆಲ್ಲಲು ಕೊನೆಯ ಓವರ್ನ ಕೊನೆಯ ಎಸೆತದಲ್ಲಿ 5 ರನ್ ಬೇಕಿತ್ತು. ಇಡೀ ಪಂದ್ಯದಲ್ಲೇ ತನ್ನ ಕಳಪೆ ಲೈನ್ ಅಂಡ್ ಲೆಂಗ್ತ್ನಿಂದಾಗಿ ನಾಯಕ ಬಾಬರ್ ಕೋಪಕ್ಕೆ ಗುರಿಯಾಗಿದ್ದ ರೌಫ್, ಕೊನೆಯ ಓವರ್ನಲ್ಲೂ ಅದೇ ತಪ್ಪು ಮಾಡಿದರು. ಈ ಓವರ್ನಲ್ಲಿ ಫುಲ್ ಟಾಸ್ ಎಸೆದು ಸಿಕ್ಸರ್ ಹೊಡೆಸಿಕೊಂಡ ರೌಫ್, ಕೊನೆಯ ಎಸೆತದಲ್ಲೂ ಇದೇ ತಪ್ಪನ್ನು ಪುನರಾವರ್ತಿಸಿದರು. ಇದರ ಲಾಭ ಪಡೆದ ಅಮೆರಿಕ ಬ್ಯಾಟರ್ ನಿತೀಶ್ ಕುಮಾರ್ ಕೊನೆಯ ಎಸೆತವನ್ನು ಬೌಂಡರಿಗಟ್ಟಿದರು. ಹೀಗಾಗಿ ಪಂದ್ಯ ಟೈ ಆಗುವ ಮೂಲಕ ಸೂಪರ್ ಓವರ್ನತ್ತ ಸಾಗಿತು.
T20 World Cup 2024: ಸೊನ್ನೆ ಸುತ್ತಿದ ಹತಾಶೆ; ಕೆಣಕಿದ ಅಭಿಮಾನಿಯೊಂದಿಗೆ ಜಗಳಕ್ಕಿಳಿದ ಪಾಕ್ ಬ್ಯಾಟರ್! ವಿಡಿಯೋ ನೋಡಿ
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಕಲೆಹಾಕಿತು. ಪಾಕ್ ಪರ ಬೌಲಿಂಗ್ ಮಾಡಿದ ಮೊಹಮ್ಮದ್ ಅಮಿರ್ ಕೇವಲ 1 ಬೌಂಡರಿ ನೀಡಿದರಾದರೂ, ವೈಡ್ ಮೂಲಕವೇ 7 ರನ್ ಬಿಟ್ಟುಕೊಟ್ಟರು. ಇದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ನಂತರ ಈ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಇಫ್ತಿಕರ್ ಅಹಮದ್ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಆದರೆ ಸೂಪರ್ ಓವರ್ನ ಮೂರನೇ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು. ಎರಡನೇ ಬ್ಯಾಟರ್ ಆಗಿ ಕಣಕ್ಕಿಳಿದ ಶಾದಾಬ್ ಖಾನ್ಗೆ ಬಿಗ್ ಶಾಟ್ಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Fri, 7 June 24