T20 World Cup 2024: ಭಾರತ ವಿರುದ್ಧ ಸೋತರೂ ಪಾಕ್ ತಂಡಕ್ಕಿದೆ ಸೂಪರ್​ 8 ಗೇರುವ ಅವಕಾಶ..!

|

Updated on: Jun 09, 2024 | 4:30 PM

IND vs PAK, T20 World Cup 2024: ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾವನ್ನು ಗೆಲುವಿನ ಫೇವರಿಟ್ ಎಂದು ಪರಿಗಣಿಸಲಾಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಅದು ತಂಡದ ಎರಡನೇ ಸೋಲು ಆಗಲಿದ್ದು, ಸೂಪರ್-8ಗೆ ಅರ್ಹತೆ ಪಡೆಯುವುದು ಕಷ್ಟವಾಗಲಿದೆ. ಆದರೆ, ಭಾರತ ವಿರುದ್ಧ ಸೋತರೂ ಪಾಕಿಸ್ತಾನ ತಂಡ ಸೂಪರ್ 8 ಹಂತಕ್ಕೆ ತಲುಪುವ ಅವಕಾಶ ಹೊಂದಿದೆ.

T20 World Cup 2024: ಭಾರತ ವಿರುದ್ಧ ಸೋತರೂ ಪಾಕ್ ತಂಡಕ್ಕಿದೆ ಸೂಪರ್​ 8 ಗೇರುವ ಅವಕಾಶ..!
ಪಾಕಿಸ್ತಾನ ತಂಡ
Follow us on

2024 ರ ಟಿ20 ವಿಶ್ವಕಪ್​ನಲ್ಲಿ (T20 World Cup 2024) ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದ್ದ ದಿನ ಅಂತಿಮವಾಗಿ ಬಂದಿದೆ. ಭಾನುವಾರ, ಜೂನ್ 9 ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ (Nassau County International Cricket Stadium) ಭಾರತ ಮತ್ತು ಪಾಕಿಸ್ತಾನ (India vs Pakistan) ಮುಖಾಮುಖಿಯಾಗುತ್ತಿವೆ. ಲೀಗ್​ನಲ್ಲಿ ಭಾರತ ಗೆಲುವಿನ ಶುಭಾರಂಭ ಮಾಡಿದ್ದರೆ, ಅಮೆರಿಕ ವಿರುದ್ಧ ಸೋಲಿನ ಮುಖಭಂಗದೊಂದಿಗೆ ಪಾಕಿಸ್ತಾನ ತಂಡ ಈ ಪಂದ್ಯಕ್ಕೆ ಕಾಲಿಡುತ್ತಿದೆ. ಹೀಗಿರುವಾಗ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾವನ್ನು ಗೆಲುವಿನ ಫೇವರಿಟ್ ಎಂದು ಪರಿಗಣಿಸಲಾಗುತ್ತಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಸೋತರೆ ಅದು ತಂಡದ ಎರಡನೇ ಸೋಲು ಆಗಲಿದ್ದು, ಸೂಪರ್-8ಗೆ ಅರ್ಹತೆ ಪಡೆಯುವುದು ಕಷ್ಟವಾಗಲಿದೆ. ಆದರೆ, ಭಾರತ ವಿರುದ್ಧ ಸೋತರೂ ಪಾಕಿಸ್ತಾನ ತಂಡ ಸೂಪರ್ 8 ಹಂತಕ್ಕೆ ತಲುಪುವ ಅವಕಾಶ ಹೊಂದಿದೆ.

ಪಾಕಿಸ್ತಾನ ಸೋತರೆ ಏನಾಗಬಹುದು?

ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಇವುಗಳನ್ನು ತಲಾ 5ರ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎ ಗುಂಪಿನ ಭಾಗವಾಗಿವೆ. ಇವೆರಡರ ಹೊರತಾಗಿ ಅಮೆರಿಕ, ಕೆನಡಾ ಮತ್ತು ಐರ್ಲೆಂಡ್ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಸದ್ಯ ಈ ಮೂರು ತಂಡಗಳು ತಲಾ 2 ಪಂದ್ಯಗಳನ್ನು ಆಡಿದ್ದು, ಇಂದು ನಡೆಯುವ ಪಂದ್ಯದ ನಂತರ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಕೂಡ ಎರಡು ಪಂದ್ಯಗಳನ್ನು ಆಡಿದಂತ್ತಾಗುತ್ತದೆ. ಈ ಗುಂಪಿನಲ್ಲಿ ಅಮೆರಿಕ ಆಡಿರುವ 2 ಪಂದ್ಯಗಳಲ್ಲಿ ಎರಡನ್ನು ಗೆದ್ದು 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ತಂಡ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಕೆನಡಾ ತಂಡ 2 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಉಳಿದಿವೆ.

ಒಂದು ವೇಳೆ ಪಾಕ್ ತಂಡ ಭಾರತದ ವಿರುದ್ಧ ಸೋತರೆ, ಭಾರತ ಕೂಡ 4 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಆದರೆ ಪಾಕಿಸ್ತಾನ ತಂಡ ತನ್ನ ಸ್ಥಾನದಲ್ಲಿ ಉಳಿಯುತ್ತದೆ ಅಥವಾ ಕೊನೆಯ ಸ್ಥಾನಕ್ಕೆ ಕುಸಿಯುತ್ತದೆ. ಈ ಪಂದ್ಯದ ನಂತರ, ಎಲ್ಲಾ ತಂಡಗಳು ಇನ್ನ 2 ಪಂದ್ಯಗಳನ್ನು ಆಡಬೇಕಾಗುತ್ತದೆ. ಅಂದರೆ ಉಳಿದ ಎರಡೂ ಪಂದ್ಯಗಳಲ್ಲು ಗೆದ್ದರೂ, ಪಾಕಿಸ್ತಾನ ಗರಿಷ್ಠ 4 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಗುತ್ತದೆ. ಆದರೆ ಈಗಾಗಲೇ ಟೀಮ್ ಇಂಡಿಯಾ ಹಾಗೂ ಅಮೆರಿಕ 4 ಅಂಕಗಳನ್ನು ಹೊಂದಿವೆ. ಇದಲ್ಲದೇ ಇಬ್ಬರ ನೆಟ್ ರನ್ ರೇಟ್ ಕೂಡ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಸೂಪರ್-8ಗೆ ಹೋಗುವುದು ಕಷ್ಟ.

ಪಾಕಿಸ್ತಾನ ಅರ್ಹತೆ ಪಡೆಯುವುದು ಹೇಗೆ?

ಭಾರತ ವಿರುದ್ಧ ಸೋತ ನಂತರ, ಪಾಕಿಸ್ತಾನ ಖಂಡಿತವಾಗಿಯೂ ಪಂದ್ಯಾವಳಿಯಿಂದ ಹೊರಗುಳಿಯುವ ಅಪಾಯದಲ್ಲಿದೆ. ಆದರೆ ಇದರ ಹೊರತಾಗಿಯೂ ಅದು ಈ ಪಂದ್ಯದಲ್ಲಿ ಉಳಿಯಬಹುದಾಗಿದೆ. ಇದಕ್ಕಾಗಿ ಪಾಕ್ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಐರ್ಲೆಂಡ್ ಮತ್ತು ಕೆನಡಾ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಗೆಲ್ಲಬೇಕಾಗುತ್ತದೆ. ಅಷ್ಟೇ ಅಲ್ಲದೆ ತನ್ನ ನೆಟ್ ರನ್ ರೇಟ್​ ಸುಧಾರಿಸಲು ದೊಡ್ಡ ಅಂತರದಿಂದ ಗೆಲ್ಲಲೇಬೇಕು.

ಒಂದು ವೇಳೆ ಭಾರತ ವಿರುದ್ಧ ಪಾಕಿಸ್ತಾನ ಸೋತು, ಅಮೆರಿಕ ಉಳಿದ 2 ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಅದು 6 ಅಂಕ ಸಂಪಾದಿಸಿದಂತ್ತಾಗುತ್ತದೆ. ಇದರಿಂದ ಪಾಕಿಸ್ತಾನ ತಂಡ ಲೀಗ್​ನಿಂದ ಹೊರಬೀಳಲಿದೆ. ಆದ್ದರಿಂದ ಅಮೆರಿಕ ತಂಡ ಭಾರತ ಮತ್ತು ಐರ್ಲೆಂಡ್ ವಿರುದ್ಧ ದೊಡ್ಡ ಅಂತರದಿಂದ ಸೋಲಬೇಕಿದೆ. ಇದು ಸಂಭವಿಸಿದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ತಲಾ 4 ಅಂಕಗಳನ್ನು ಹೊಂದಿದ್ದು, ನೆಟ್ ರನ್ ರೇಟ್ ಉತ್ತಮವಾಗಿರುವ ತಂಡ ಸೂಪರ್ 8 ಹಂತಕ್ಕೇರಲಿದೆ. ಅಂದರೆ ಪಾಕಿಸ್ತಾನ ತಂಡ ಉಳಿದ 2 ಪಂದ್ಯಗಳನ್ನು ಗೆಲ್ಲುವುದಲ್ಲದೆ, ತನ್ನ ನೆಟ್ ರನ್​ರೇಟ್​ ಅನ್ನು ಭಾರತ ಹಾಗೂ ಅಮೆರಿಕಕ್ಕಿಂತ ಉತ್ತಮಗೊಳಿಸಬೇಕಿದೆ. ಹಾಗಿದ್ದಾಗ ಮಾತ್ರ ಪಾಕಿಸ್ತಾನ ತಂಡ ಸೂಪರ್-8ಗೆ ಅರ್ಹತೆ ಪಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ