ಯಾರದು ಸೆಹ್ವಾಗ್?; ಬಾಂಗ್ಲಾ ಆಟಗಾರ ಶಕೀಬ್ ಉದ್ಧಟತನಕ್ಕೆ ಟೀಂ ಇಂಡಿಯಾ ಫ್ಯಾನ್ಸ್ ಗರಂ

T20 World Cup 2024: ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಕೀಬ್ ಬಳಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿಗಾರರು ಶಕೀಬ್‌ ಬಳಿ ಅಭಿಪ್ರಾಯ ಕೇಳಿದರು. ಇದಕ್ಕೆ ಅಸಡ್ಡೆಯ ಉತ್ತರ ನೀಡಿದ ಶಕೀಬ್, “ಯಾರು?” ಎಂದು ಉತ್ತರಿಸಿದರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಯಾರದು ಸೆಹ್ವಾಗ್?; ಬಾಂಗ್ಲಾ ಆಟಗಾರ ಶಕೀಬ್ ಉದ್ಧಟತನಕ್ಕೆ ಟೀಂ ಇಂಡಿಯಾ ಫ್ಯಾನ್ಸ್ ಗರಂ
ಶಕೀಬ್ ಅಲ್ ಹಸನ್, ವೀರೇಂದ್ರ ಸೆಹ್ವಾಗ್
Follow us
ಪೃಥ್ವಿಶಂಕರ
|

Updated on: Jun 14, 2024 | 6:31 PM

ಬಾಂಗ್ಲಾದೇಶ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ (Shakib al Hasan) ತಮ್ಮ ಆಲ್‌ರೌಂಡರ್ ಆಟದಿಂದ ಕ್ರಿಕೆಟ್ ಲೋಕದಲ್ಲಿ ಎಷ್ಟು ಹೆಸರು ಮಾಡಿದ್ದಾರೋ, ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಅಷ್ಟೇ ಸದಾ ಚರ್ಚೆಯಲ್ಲಿರುತ್ತಾರೆ. ಶಕೀಬ್ ಅಲ್ ಹಸನ್ ಸುತ್ತ ಒಂದಿಲ್ಲೊಂದು ವಿವಾದಗಳು ಸದಾ ತಳುಕು ಹಾಕಿಕೊಂಡಿರುತ್ತವೆ. ಅದು ಕ್ರಿಕೆಟ್ ಮೈದಾನವಾಗಿರಬಹುದು ಅಥವಾ ಮೈದಾನದಿಂದ ಹೊರಗಿರಬಹುದು. ಅಂಪೈರ್ ನಿರ್ಧಾರದ ವಿರುದ್ಧ ಗರಂ ಆಗಿ ಶಕೀಬ್, ವಿಕೆಟ್‌ಗಳನ್ನು ಕಿತ್ತು ಬಿಸಾಡಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ನಂತರ ಶಕೀಬ್ ನಡೆಯ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ವಿವಾದಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಶಕೀಬ್ ಇದೀಗ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ (Virender Sehwag) ಬಗ್ಗೆ ನೀಡಿರುವ ಅಸಡ್ಡೆಯ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಯಾರದು ಸೆಹ್ವಾಗ್?; ಶಕೀಬ್ ಉದ್ಧಟತನ

ವಾಸ್ತವವಾಗಿ ಜೂನ್ 13 ರಂದು ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ನಡುವೆ ವಿಶ್ವಕಪ್ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಬಾಂಗ್ಲಾದೇಶ 25 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಕೀಬ್ ಬಳಿ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿ ವರದಿಗಾರರು ಶಕೀಬ್‌ ಬಳಿ ಅಭಿಪ್ರಾಯ ಕೇಳಿದರು. ಇದಕ್ಕೆ ಅಸಡ್ಡೆಯ ಉತ್ತರ ನೀಡಿದ ಶಕೀಬ್, “ಯಾರು?” ಎಂದು ಉತ್ತರಿಸಿದರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಶಕೀಬ್ ಕಾಲೆಳೆದಿದ್ದ ಸೆಹ್ವಾಗ್

ಕೆಲವು ದಿನಗಳ ಹಿಂದೆ ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, ಶಕೀಬ್ ಇನ್ನು ಮುಂದೆ ಟಿ20 ಕ್ರಿಕೆಟ್‌ಗೆ ಆಯ್ಕೆಯಾಗಬಾರದು. ಶಕೀಬ್ ಅವರ ನಿವೃತ್ತಿಯ ಸಮಯ ಬಹಳ ಹಿಂದೆಯೇ ಬಂದಿತ್ತು. ಶಕೀಬ್ ತಂಡದ ನಾಯಕ ಮತ್ತು ಹಿರಿಯ ಆಟಗಾರ. ಆದರೆ ಅವರ ಪ್ರಸ್ತುತ ಅಂಕಿಅಂಶಗಳನ್ನು ನೋಡಿದರೆ ಅವರು ನಾಚಿಕೆಪಡಬೇಕು. ಹೀಗಾಗಿ ಶಕೀಬ್ ಅವರೇ ಈ ಮಾದರಿಯಿಂದ ನಿವೃತ್ತಿ ಘೋಷಿಸಬೇಕೆಂದು ಹೇಳಿದ್ದರು.

ಸೂಪರ್-8 ಸುತ್ತಿಗೆ ಬಾಂಗ್ಲಾದೇಶ

ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ ಸೂಪರ್-8 ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಡಿ ಗುಂಪಿನಲ್ಲಿ ಬಾಂಗ್ಲಾದೇಶ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶಕ್ಕೆ ಇನ್ನು ಒಂದು ಪಂದ್ಯ ಬಾಕಿ ಉಳಿದಿದ್ದು, ಶಕೀಬ್ ಪಡೆ ಈ ಪಂದ್ಯದಲ್ಲಿ ಗೆದ್ದರೆ ಸೂಪರ್-8 ಗೆ ಅರ್ಹತೆ ಪಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ