T20 World Cup 2024: 6 ಬ್ಯಾಟರ್ಸ್​ಗಳು ಒಂದೇ ರೀತಿ ಔಟ್! ಹೀಗೊಂದು ದಾಖಲೆ ಸೃಷ್ಟಿ

|

Updated on: Jun 03, 2024 | 5:14 PM

T20 World Cup 2024: ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಕೈಚೆಲ್ಲಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದು ಇದೇ ಮೊದಲು.

T20 World Cup 2024: 6 ಬ್ಯಾಟರ್ಸ್​ಗಳು ಒಂದೇ ರೀತಿ ಔಟ್! ಹೀಗೊಂದು ದಾಖಲೆ ಸೃಷ್ಟಿ
ನಮೀಬಿಯಾ- ಒಮಾನ್
Follow us on

2024 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಇಂದು ನಡೆದ ಮೂರನೇ ಪಂದ್ಯದಲ್ಲಿ ಒಮಾನ್ ತಂಡವನ್ನು ಸೂಪರ್ ಓವರ್​ನಲ್ಲಿ ಮಣಿಸಿದ ನಮೀಬಿಯಾ (Namibia vs Oman) ತಂಡ ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡ, ನಮೀಬಿಯಾ ಬೌಲರ್​ಗಳ ದಾಳಿಗೆ ನಲುಗಿ 109 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನಮೀಬಿಯಾ ಕೂಡ ಈ ಅಲ್ಪ ಗುರಿ ಬೆನ್ನಟ್ಟಲು ಹರಸಾಹಸ ಪಡಬೇಕಾಯಿತು. ಅಂತಿಮವಾಗಿ ಪಂದ್ಯ ಸೂಪರ್ ಓವರ್​ ಮೂಲಕ ಅಂತ್ಯಗೊಂಡಿತು. ಇದು ಪಂದ್ಯದ ಪಲಿತಾಂಶವಾದರೆ, ಇದೇ ಪಂದ್ಯ ಪುರುಷರ ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ನಡೆಯದ ಘಟನೆಗೆ ಸಾಕ್ಷಿಯಾಯಿತು. ಒಮಾನ್ ತಂಡದ 6 ಬ್ಯಾಟ್ಸ್‌ಮನ್​ಗಳು ಒಂದೇ ರೀತಿಯಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಕೈಚೆಲ್ಲಿದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಒಂದು ಇನ್ನಿಂಗ್ಸ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳು ಎಲ್‌ಬಿಡಬ್ಲ್ಯೂ ಆಗಿ ಔಟಾಗಿದ್ದು ಇದೇ ಮೊದಲು.

ಎಲ್‌ಬಿಡಬ್ಲ್ಯೂಗೆ ಬಲಿಯಾದ 6 ಬ್ಯಾಟ್ಸ್‌ಮನ್‌ಗಳು!

ನಮೀಬಿಯಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡದ6 ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು (ಕಶ್ಯಪ್ ಪ್ರಜಾಪತಿ, ಅಕಿಬ್ ಇಲ್ಯಾಸ್, ಕಲೀಮುಲ್ಲಾ), ನಮೀಬಿಯಾ ಬೌಲರ್ ರೂಬೆನ್ ಟ್ರಂಪೆಲ್‌ಮನ್ ಅವರ ಬೌಲಿಂಗ್​ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರೆ, ಎರಾಸ್ಮಸ್, ಡೇವಿಡ್ ವೀಸಾ ಮತ್ತು ಬರ್ನಾರ್ಡ್ ತಲಾ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಎಲ್‌ಬಿಡಬ್ಲ್ಯು ಮಾಡಿದರು. ನಮೀಬಿಯಾ ಪರ ಮಾರಕ ದಾಳಿ ನಡೆಸಿದ ರುಬೆನ್ ಟ್ರಂಪೆಲ್‌ಮನ್ 4 ಓವರ್‌ಗಳಲ್ಲಿ 21 ರನ್ ನೀಡಿ 4 ವಿಕೆಟ್ ಪಡೆದರೆ, ಡೇವಿಡ್ ವಿಸಾ 3.4 ಓವರ್‌ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು.

ಮೊದಲ 2 ಎಸೆತಗಳಲ್ಲಿ 2 ವಿಕೆಟ್

ಇದಲ್ಲದೆ ಈ ಪಂದ್ಯದಲ್ಲಿ ನಮೀಬಿಯಾ ಪರ ಬೌಲಿಂಗ್ ದಾಳಿ ಆರಂಭಿಸಿದ ರುಬೆನ್ ಟ್ರಂಪೆಲ್‌ಮನ್ ಮೊದಲ ಎರಡು ಎಸೆತಗಳಲ್ಲಿ ಒಮಾನ್​ನ ಇಬ್ಬರು ಬ್ಯಾಟರ್​ಗಳನ್ನು ಶೂನ್ಯಕ್ಕೆ ಪೆವಿಲಿಯನ್​ಗಟ್ಟಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ ಮೊದಲ ಬೌಲರ್ ಎಂಬ ದಾಖಲೆಯನ್ನು ರುಬೆನ್ ಟ್ರಂಪೆಲ್‌ಮನ್ ಬರೆದರು. ಕುತೂಹಲಕಾರಿ ಸಂಗತಿಯೆಂದರೆ ಈ ಇಬ್ಬರು ಬ್ಯಾಟರ್​ಗಳು ಎಲ್‌ಬಿಡಬ್ಲ್ಯೂ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿ ತಮ್ಮ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Mon, 3 June 24