ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup 2024) 2ನೇ ಪಂದ್ಯದಲ್ಲಿ ಪಪುವಾ ನ್ಯೂ ಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ ಪ್ರಯಾಸದ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ರೋವ್ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂಗಿನಿಯಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 34 ರನ್ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ಗೆ ಮರಳಿದ್ದರು. ಇದಾಗ್ಯೂ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೆಸೆ ಬೌ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಏಕಾಂಗಿಯಾಗಿ ತಂಡಕ್ಕೆ ಆಸರೆಯಾದ ಸೆಸೆ ಬೌ 43 ಎಸೆತಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 50 ರನ್ ಬಾರಿಸಿ ಅಲ್ಜಾರಿ ಜೋಸೆಫ್ಗೆ ವಿಕೆಟ್ ಒಪ್ಪಿಸಿದರು. ಈ ಅರ್ಧಶತಕದ ನೆರವಿನಿಂದ ಪಪುವಾ ನ್ಯೂ ಗಿನಿಯಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ ಕಲೆಹಾಕಿತು.
137 ರನ್ಗಳ ಸಾಧಾರಣ ಸವಾಲು ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಪಪುವಾ ನ್ಯೂಗಿನಿಯಾ ಬೌಲರ್ ಅಲೀ ನಾವೊ ಯಶಸ್ವಿಯಾದರು. ಜಾನ್ಸನ್ ಚಾರ್ಲ್ಸ್ (0) ರನ್ನು ಶೂನ್ಯಕ್ಕೆ ಔಟ್ ಮಾಡಿದ ಅಲೀ ನಾವೊ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.
ಮತ್ತೊಂದೆಡೆ ಬ್ರೆಂಡನ್ ಕಿಂಗ್ 29 ಎಸೆತಗಳನ್ನು ಎದುರಿಸಿ 34 ರನ್ ಬಾರಿಸಲಷ್ಟೇ ಶಕ್ತರಾದರು. ಹಾಗೆಯೇ ಸ್ಪೋಟಕ ದಾಂಡಿಗ ನಿಕೋಲಸ್ ಪೂರನ್ (27) ಅವರನ್ನು ಔಟ್ ಮಾಡುವಲ್ಲಿ ಜಾನ್ ಕರಿಕೊ ಯಶಸ್ವಿಯಾದರು.
ಇನ್ನು ರೋವ್ಮನ್ ಪೊವೆಲ್ (15) ಹಾಗೂ ಶೆರ್ಫೆನ್ ರುದರ್ಫೋರ್ಡ್ ಬಂದ ವೇಗದಲ್ಲೇ ಹಿಂತಿರುಗಿದರು. ಪರಿಣಾಮ ಕೊನೆಯ 5 ಓವರ್ಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 43 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಜೊತೆಗೂಡಿದ ರೋಸ್ಟನ್ ಚೇಸ್ ಹಾಗೂ ಆ್ಯಂಡ್ರೆ ರಸೆಲ್ ಜವಾಬ್ದಾರಿಯುತ ಇನಿಂಗ್ಸ್ ಆಡಿದರು.
ಅಲ್ಲದೆ 18ನೇ ಓವರ್ನಲ್ಲಿ 18 ರನ್ ಸಿಡಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. 27 ಎಸೆತಗಳನ್ನು ಎದುರಿಸಿದ ರೋಸ್ಟನ್ ಚೇಸ್ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 42 ರನ್ ಬಾರಿಸಿದರೆ, ಆ್ಯಂಡ್ರೆ ರಸೆಲ್ 9 ಎಸೆತಗಳಲ್ಲಿ 15 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಸಾಧಾರಣ ಗುರಿ ಮುಟ್ಟಲು 19 ಓವರ್ಗಳನ್ನು ತೆಗೆದುಕೊಂಡಿತು.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಜಾನ್ಸನ್ ಚಾರ್ಲ್ಸ್ , ಬ್ರಾಂಡನ್ ಕಿಂಗ್ , ರೋಸ್ಟನ್ ಚೇಸ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋವ್ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಶೆರ್ಫೇನ್ ರುದರ್ಫೋರ್ಡ್ , ರೊಮಾರಿಯೋ ಶೆಫರ್ಡ್ , ಅಕೇಲ್ ಹೊಸೈನ್ , ಅಲ್ಝಾರಿ ಜೋಸೆಫ್ , ಗುಡಾಕೇಶ್ ಮೋಟಿ.
ಇದನ್ನೂ ಓದಿ: T20 World Cup 2024 Schedule: ಟಿ20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಪಪುವಾ ನ್ಯೂಗಿನಿಯಾ ಪ್ಲೇಯಿಂಗ್ 11: ಟೋನಿ ಉರಾ , ಅಸ್ಸಾದ್ ವಾಲಾ (ನಾಯಕ) , ಸೆಸೆ ಬೌ , ಲೆಗಾ ಸಿಯಾಕಾ , ಹಿರಿ ಹಿರಿ , ಚಾರ್ಲ್ಸ್ ಅಮಿನಿ , ಕಿಪ್ಲಿನ್ ಡೋರಿಗಾ ( ವಿಕೆಟ್ ಕೀಪರ್) , ಅಲೀ ನಾವೋ , ಚಾಡ್ ಸೋಪರ್ , ಕಬುವಾ ಮೋರಿಯಾ , ಜಾನ್ ಕರಿಕೊ.
Published On - 7:32 am, Mon, 3 June 24