T20 World Cup 2024: ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾದ ಪ್ಲೇಯಿಂಗ್ 11 ಕನ್ಫರ್ಮ್
T20 World Cup 2024: ಟಿ20 ವಿಶ್ವಕಪ್ನ 9ನೇ ಆವೃತ್ತಿಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಭರ್ಜರಿ ಜಯ ಸಾಧಿಸಿ ಯುಎಸ್ಎ ಶುಭಾರಂಭ ಮಾಡಿದೆ. ಇನ್ನು ಜೂನ್ 5 ರಂದು ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ಈ ಮ್ಯಾಚ್ನಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 9 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ.
T20 World Cup 2024: ಟಿ20 ವಿಶ್ವಕಪ್ನ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ಅದಕ್ಕೂ ಮುನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಖಚಿತಪಡಿಸಿಕೊಂಡಿದೆ ಎನ್ನಬಹುದು. ಏಕೆಂದರೆ ಬಾಂಗ್ಲಾದೇಶ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಸಂಜು ಸ್ಯಾಮ್ಸನ್ ಕಾಣಿಸಿಕೊಂಡಿದ್ದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದದ್ದು ರಿಷಭ್ ಪಂತ್. ಅಂದರೆ ಇಲ್ಲಿ ವಿಕೆಟ್ ಕೀಪರ್ ಆಯ್ಕೆಗಾಗಿ ಇಬ್ಬರು ಮೇಲಿನ ಕ್ರಮಾಂಕದಲ್ಲಿ ಆಡಿಸಲಾಗಿದೆ.
ವಿಕೆಟ್ ಕೀಪರ್ ಯಾರು?
ಆರಂಭಿಕನಾಗಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಕೇವಲ 1 ರನ್ ಗಳಿಸಿ ಎಲ್ಬಿಡಬ್ಲ್ಯೂ ಆದರು. ಇನ್ನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ 32 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 53 ರನ್ ಬಾರಿಸಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಆಲ್ರೌಂಡರ್ಗಳು ಯಾರೆಲ್ಲಾ?
ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಆಲ್ರೌಂಡರ್ಗಳು ಕಣಕ್ಕಿಳಿದಿದ್ದರು. 5ನೇ ಕ್ರಮಾಂಕದಲ್ಲಿ ಶಿವಂ ದುಬೆ ಬ್ಯಾಟ್ ಬೀಸಿದರೆ, 6ನೇ ಮತ್ತು 7ನೇ ಕ್ರಮಾಂಕಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದರು.
ಇಲ್ಲಿ ದುಬೆ 16 ಎಸೆತಗಳಲ್ಲಿ 14 ರನ್ ಬಾರಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ ಅಜೇಯ 40 ರನ್ ಚಚ್ಚಿದರು. ಇನ್ನು ರವೀಂದ್ರ ಜಡೇಜಾ ಅಜೇಯ 4 ರನ್ಗಳಿಸಿದರು.
ಅಂದರೆ ಈ ಮೂವರಲ್ಲಿ ಹಾರ್ದಿಕ್ ಹಾಗೂ ಶಿವಂ ದುಬೆ ನಡುವೆ ನೇರ ಪೈಪೋಟಿಯಿತ್ತು. ಆದರೀಗ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಹಾರ್ದಿಕ್ ಪಾಂಡ್ಯ ಪ್ಲೇಯಿಂಗ್ ಇಲೆವೆನ್ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ ಎನ್ನಬಹುದು.
ಹಾಗೆಯೇ ಎಡಗೈ ಸ್ಪಿನ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾಗೆ ಸ್ಥಾನ ಸಿಗುವುದು ಕೂಡ ಖಚಿತ. ಹೀಗಾಗಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಬಹುತೇಕ ಖಚಿತ.
ಬೌಲರ್ಗಳು?
ಅಭ್ಯಾಸ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ದಾಳಿ ಸಂಘಟಿಸಿದ್ದಾರೆ. ಹೀಗಾಗಿ ಈ ಮೂವರು ವೇಗಿಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಕಣಕ್ಕಿಳಿಯಬಹುದು. ಹಾಗೆಯೇ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರನ್ನು ಹೆಚ್ಚುವರಿ ಬೌಲರ್ಗಳಾಗಿ ಬಳಸಿಕೊಳ್ಳಬಹುದು. ಅದರಂತೆ ಭಾರತ ದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ…
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: Aaron Jones: ಆರೋನ್ ಜೋನ್ಸ್ ತೂಫಾನ್ಗೆ ಹಳೆಯ ವಿಶ್ವ ದಾಖಲೆಗಳು ಉಡೀಸ್
ಭಾರತ ಟಿ20 ವಿಶ್ವಕಪ್ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.