ಅದೇಗೆ ಭಾರತ ತಂಡಕ್ಕೆ 2 ಸಲ ಅವಕಾಶ? ನಮೀಬಿಯ ನಾಯಕನ ಪ್ರಶ್ನೆ

T20 World Cup 2026: ಯುಎಸ್​ಎ ವಿರುದ್ಧದ ಮೊದಲ ಪಂದ್ಯದಲ್ಲಿ 29 ರನ್​ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ (ಫೆ.12) ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡವು ನಮೀಬಿಯ ತಂಡವನ್ನು ಎದುರಿಸಲಿದೆ.

ಅದೇಗೆ ಭಾರತ ತಂಡಕ್ಕೆ 2 ಸಲ ಅವಕಾಶ? ನಮೀಬಿಯ ನಾಯಕನ ಪ್ರಶ್ನೆ
Gerhard Erasmus

Updated on: Feb 12, 2026 | 12:34 PM

T20 World Cup 2026: ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಭಾರತ ಮತ್ತು ನಮೀಬಿಯ ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಐಸಿಸಿಯ ನಡೆಯನ್ನು ನಮೀಬಿಯ ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಪ್ರಶ್ನಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ರಾತ್ರಿ ಹೊತ್ತಲ್ಲಿ ಅಭ್ಯಾಸ ನಡೆಸಲು ಅವಕಾಶ ನಮೀಬಿಯ ತಂಡಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ ಅತ್ತ ಭಾರತ ತಂಡಕ್ಕೆ 2 ಬಾರಿ ಫ್ಲಡ್​ ​ಲೈಟ್​ನಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಿರುವುದೇ ಇದೀಗ ಚರ್ಚೆಗೆ ಗ್ರಾಸವಾಗಿದೆ.

ನಮಗೆ ಪಂದ್ಯದ ಪೂರ್ವಭಾವಿ ತಯಾರಿಗಾಗಿ ರಾತ್ರಿ ಟ್ರೈನಿಂಗ್ ಸೆಷನ್ ನೀಡಲಾಗಿಲ್ಲ. ಆದರೆ ಭಾರತ ತಂಡವು ಎರಡು ರಾತ್ರಿ ಅಭ್ಯಾಸ ನಡೆಸಿದೆ. ಐಸಿಸಿ ನಿಮಗೆ ಬೇಕಾದಂತೆ ಮಾಡಬಹುದೇ? ಇದು ಅನ್ಯಾಯ ಎಂದು ನಮೀಬಿಯ ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಆಕ್ರೋಶ ಹೊರಹಾಕಿದ್ದಾರೆ.

ನಮೀಬಿಯದಲ್ಲಿ ಫ್ಲಡ್ ಲೈಟ್ ಹೊಂದಿರುವ ಪ್ರಮುಖ ಮೈದಾನಗಳಿಲ್ಲ. ಹೀಗಾಗಿ ನಮ್ಮ ತಂಡ ತವರಿನಲ್ಲಿ ಹೊನಲು ಬೆಳಕಿನ ಪಂದ್ಯವಾಡುತ್ತಿಲ್ಲ. ಇನ್ನು ನಮೀಬಿಯ ತಂಡದ ಆಟಗಾರರು ವಿದೇಶಿ ಲೀಗ್​ಗಳಲ್ಲೂ ಕಾಣಿಸಿಕೊಳ್ಳುವುದು ವಿರಳ.

ವಿದೇಶಿ ಲೀಗ್ ಆಡಿರುವ ಆಟಗಾರರು ನೇಪಾಳ ಪ್ರೀಮಿಯರ್ ಲೀಗ್ ಮತ್ತು ಇಂಟರ್​ನ್ಯಾಷನಲ್ ಟಿ20 ಲೀಗ್​ನಂತಹ  ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಮಾತ್ರ ಭಾಗವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ನಮೀಬಿಯ ತಂಡಕ್ಕೆ ಹೊನಲು ಬೆಳಕಿನ ಪಂದ್ಯ ಹೊಸ ಅನುಭವ.

ಇದಾಗ್ಯೂ ಐಸಿಸಿ ನಮಗೆ ರಾತ್ರಿ ಅಭ್ಯಾಸ ನಡೆಸಲು ಅವಕಾಶ ನೀಡದಿರುವುದು ಅಚ್ಚರಿ. ಅದೇ ವೇಳೆ ನಮ್ಮ ಎದುರಾಳಿ ತಂಡವಾಗಿ ಟೀಮ್ ಇಂಡಿಯಾಗೆ ಎರಡು ಬಾರಿ ಅವಕಾಶ ನೀಡಲಾಗಿದೆ. ಅದರಂತೆ ಭಾರತ ತಂಡವು ದೆಹಲಿಯಲ್ಲಿ ರಾತ್ರಿ ವೇಳೆ ಅಭ್ಯಾಸ ನಡೆಸಿದ್ದಾರೆ.

ಐಸಿಸಿಯ ಈ ನಡೆಯಿಂದ ತಂಡದ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಇದಾಗ್ಯೂ ಯುಎಸ್ಎ, ನೆದರ್​ಲೆಂಡ್ಸ್​ ಮತ್ತು ನೇಪಾಳದಂತಹ ಅಸೋಸಿಯೇಟ್ ರಾಷ್ಟ್ರಗಳ ಉತ್ಸಾಹಭರಿತ ಪ್ರದರ್ಶನದಂತೆ ನಾವು ಸಹ ಟೀಮ್ ಇಂಡಿಯಾಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸವಿದೆ ಎಂದು ಗೆರ್ಹಾರ್ಡ್ ಎರಾಸ್ಮಸ್ ಹೇಳಿದ್ದಾರೆ.

ಇದನ್ನೂ ಓದಿ: IPL​ನಲ್ಲಿ ಇಲ್ಲ ಚಾನ್ಸ್​: ಪಾಕಿಸ್ತಾನ್​ ಸೂಪರ್​ ಲೀಗ್​ಗೆ 47 ವಿದೇಶಿ ಆಟಗಾರರು ಆಯ್ಕೆ

ಒಟ್ಟಿನಲ್ಲಿ ನಮೀಬಿಯ ತಂಡಕ್ಕೆ ಫ್ಲಡ್ ಲೈಟ್ ಟ್ರೈನಿಂಗ್ ಸೆಷನ್ ನೀಡದೇ, ಟೀಮ್ ಇಂಡಿಯಾಗೆ ಮಾತ್ರ 2 ಬಾರಿ ರಾತ್ರಿ ಅಭ್ಯಾಸ ನಡೆಸಲು ಅವಕಾಶ ಮಾಡಿಕೊಟ್ಟಿರುವ ಐಸಿಸಿಯ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಕ್ರಿಕೆಟ್ ಅಂಗಳದಲ್ಲಿ ಈಗಷ್ಟೇ ಛಾಪು ಮೂಡಿಸುತ್ತಿರುವ ನಮೀಬಿಯದಂತಹ ತಂಡಕ್ಕೆ ಅಭ್ಯಾಸಕ್ಕೆ ಸಕಲ ಸೌಕರ್ಯ ಒದಗಿಸಿ ಕೊಡದೇ ತಾರತಮ್ಯ ಮರೆದಿರುವ ಐಸಿಸಿಯ ನಡೆಗೆ ಕ್ರಿಕೆಟ್ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

 

 

Published On - 12:33 pm, Thu, 12 February 26