ಕೆಲವೇ ಕೆಲವು ದಿನಗಳ ಹಿಂದೆ ಟಿ20 ಕ್ರಿಕೆಟ್ನಲ್ಲಿ ಕೇವಲ 17 ರನ್ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದ ಮಂಗೋಲಿಯಾ ತಂಡ ಇದೀಗ ಮತ್ತೊಮ್ಮೆ ಮುಜುಗರದ ಸೋಲಿಗೆ ಕೊರಳೊಡ್ಡಿದೆ. ಮಲೇಷ್ಯಾದ UKM ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ ಮಂಗೋಲಿಯಾ ತಂಡ 31 ರನ್ಗಳಿಗೆ ಆಲೌಟ್ ಆದರೆ, ಈ ಗುರಿ ಬೆನ್ನಟ್ಟಿದ ಮಲೇಷ್ಯಾ ತಂಡ ಕೇವಲ 13 ಎಸೆತಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗೋಲಿಯಾ 16.1 ಓವರ್ ಬ್ಯಾಟಿಂಗ್ ಮಾಡಿ ಕೇವಲ 31 ರನ್ ಗಳಿಸಿತು. ವಿಶೇಷವೆಂದರೆ ತಂಡದ 6 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲೂ ಸಾಧ್ಯವಾಗದೆ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. 26 ಎಸೆತಗಳಲ್ಲಿ 8 ರನ್ ಬಾರಿಸಿದ ಆರಂಭಿಕ ಮೋಹನ್ ವಿವೇಕಾನಂದನ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು 4 ರನ್‌ಗಳಿಗಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಕುತೂಹಲಕಾರಿ ಸಂಗತಿಯೆಂದರೆ ಒಬ್ಬ ಮಂಗೋಲಿಯನ್ ಬ್ಯಾಟ್ಸ್‌ಮನ್ ಮಾತ್ರ ಈ ಪಂದ್ಯದಲ್ಲಿ ಏಕೈಕ ಬೌಂಡರಿ ಬಾರಿಸಿದ್ದು, ಎನ್ಖ್ಬತ್ ಬತ್ಖುಯಾಗ್ 5 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 4 ರನ್ ಕಲೆಹಾಕಿದರು.
ಮಲೇಷ್ಯಾ ಪರ ವೀರನ್ ದೀಪ್ ಸಿಂಗ್ ಅದ್ಭುತ ಬೌಲಿಂಗ್ ಮಾಡಿದರು. ತಮ್ಮ ಖೋಟಾದ 4 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ರಿಜ್ವಾನ್ ಹೈದರ್, ಪವನ್‌ದೀಪ್ ಸಿಂಗ್, ವಿಜಯ್ ಉನ್ನಿ, ಮುಹಮ್ಮದ್ ಆಮಿರ್ ಮತ್ತು ಸೈಯದ್ ಅಜೀಜ್ ತಲಾ ಒಂದು ವಿಕೆಟ್ ಪಡೆದರು.
ಮಂಗೋಲಿಯಾ ನೀಡಿದ 31 ರನ್ಗಳ ಗುರಿ ಬೆನ್ನಟ್ಟಿದ ಮಲೇಷ್ಯಾ ಪರ ನಾಯಕ ಸೈಯದ್ ಅಜೀಜ್ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 281.82 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 31 ರನ್ ಸಿಡಿಸಿದರು. ಉಳಿದಂತೆ ಜುಬೈದ್ 3 ರನ್ ಕೊಡುಗೆ ನೀಡಿದರು. ಈ ಸೋಲಿನೊಂದಿಗೆ ಮಂಗೋಲಿಯಾ ತಂಡದ ಟಿ20 ವಿಶ್ವಕಪ್ ಅರ್ಹತೆಯ ಕನಸು ಕೂಡ ಭಗ್ನಗೊಂಡಿದೆ. ಮಂಗೋಲಿಯಾವನ್ನು ಈ ಹಿಂದೆ ಕುವೈತ್, ಹಾಂಗ್ ಕಾಂಗ್, ಮ್ಯಾನ್ಮಾರ್, ಸಿಂಗಾಪುರ ಮತ್ತು ಮಾಲ್ಡೀವ್ಸ್ ತಂಡಗಳು ಹೀನಾಯವಾಗಿ ಸೋಲಿಸಿದ್ದವು. ಟಿ20 ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಮಂಗೋಲಿಯಾ 6 ಪಂದ್ಯಗಳನ್ನು ಸೋತು, ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:37 pm, Mon, 9 September 24