ಸಿಎಸ್​ಕೆ ತಂಡದಿಂದ ಗೇಟ್​ಪಾಸ್; 5 ದಿನಗಳಲ್ಲಿ ಸತತ 3ನೇ ಶತಕ ಸಿಡಿಸಿ ಮಿಂಚಿದ ಜಗದೀಸನ್..!

TV9kannada Web Team

TV9kannada Web Team | Edited By: pruthvi Shankar

Updated on: Nov 17, 2022 | 4:30 PM

Vijay Hazare Trophy: ಸಿಎಸ್‌ಕೆಯಿಂದ ಬಿಡುಗಡೆಯಾದ ನಂತರ, ಗೋವಾ ವಿರುದ್ಧ ಗಳಿಸಿದ ಶತಕವು ನಾರಾಯಣ ಜಗದೀಸನ್ ಅವರ ಬ್ಯಾಟ್‌ನಿಂದ ಹೊರಬಂದ ಸತತ ಎರಡನೇ ಶತಕವಾಗಿದೆ.

ಸಿಎಸ್​ಕೆ ತಂಡದಿಂದ ಗೇಟ್​ಪಾಸ್; 5 ದಿನಗಳಲ್ಲಿ ಸತತ 3ನೇ ಶತಕ ಸಿಡಿಸಿ ಮಿಂಚಿದ ಜಗದೀಸನ್..!
ಧೋನಿ ಜೊತೆ ಜಗದೀಸನ್

ಒಂದಲ್ಲ, ಎರಡಲ್ಲ, ಮೂರು ಶತಕಗಳು, ಅದೂ ಬ್ಯಾಕ್ ಟು ಬ್ಯಾಕ್. ತಮಿಳುನಾಡಿನ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಸನ್ (Narayan Jagadeesan) ದೇಶೀ ಕ್ರಿಕೆಟ್​ನಲ್ಲಿ ರನ್​ಗಳ ಮಳೆಯನ್ನೇ ಹರಿಸುತ್ತಿದ್ದಾರೆ. ಸದ್ಯ ಭಾರತದಲ್ಲಿ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಪಂದ್ಯಾವಳಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ತಮಿಳುನಾಡು ಪರ ಜಗದೀಸನ್ ಮಿಂಚಿನ ಪ್ರದರ್ಶನ ನೀಡಿತ್ತಿದ್ದಾರೆ. ಆದರೆ ನಾರಾಯಣ್ ಜಗದೀಸನ್ ಪ್ರತಿಭೆಗೆ ಬೆಲೆ ನೀಡದ ಐಪಿಎಲ್ (IPL) ಫ್ರಾಂಚೈಸಿ ಸಿಎಸ್​ಕೆ (CSK) ಜಗದೀಸನ್ ಅವರನ್ನು ತಂಡದಿಂದ ಕೈಬಿಟ್ಟಿದೆ.

ಅಷ್ಟೇ ಅಲ್ಲ, ಜಗದೀಸನ್ ಈ ಹಿಂದೆ ಸಿಎಸ್‌ಕೆ ಪರ ಆಡಿದ್ದಾಗಲೂ ಧೋನಿ ಅವರಿಗೆ ಸಿಗಬೇಕಾದಷ್ಟು ಅವಕಾಶಗಳನ್ನು ನೀಡಲಿಲ್ಲ. ಇದೆಲ್ಲವುಗಳನ್ನು ಗಾಳಿಗೆ ತೂರಿರುವ ಜಗದೀಸನ್ ದೇಶೀ ಟೂರ್ನಿಯಲ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಿದ್ದಾರೆ.

ತಾಜಾ ಸುದ್ದಿ

ಜಗದೀಸನ್ 168 ರನ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ತಂಡದ ವಿರುದ್ಧ ತಮಿಳುನಾಡಿನ ಆರಂಭಿಕ ಆಟಗಾರ ನಾರಾಯಣ್ ಜಗದೀಸನ್ ಸತತ ಮೂರನೇ ಶತಕ ದಾಖಲಿಸಿದ್ದಾರೆ. ಈ ವೇಳೆ 140 ಎಸೆತಗಳನ್ನು ಎದುರಿಸಿದ ಜಗದೀಸನ್ 168 ರನ್ ಗಳಿಸಿದರು. ಜಗದೀಸನ್ ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಸೇರಿದ್ದವು. ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಮಿಳುನಾಡು 50 ಓವರ್‌ಗಳಲ್ಲಿ 373 ರನ್‌ಗಳ ಬೃಹತ್ ಸ್ಕೋರ್ ಮಾಡಿತು.

ಇದನ್ನೂ ಓದಿ: IND vs NZ T20 Live Streaming: ಭಾರತ- ಕಿವೀಸ್ ಮುಖಾಮುಖಿ; ನೇರ ಪ್ರಸಾರ ಯಾವ ಚಾನೆಲ್​ನಲ್ಲಿ? ಇಲ್ಲಿದೆ ಮಾಹಿತಿ

5 ದಿನಗಳಲ್ಲಿ ಸತತ ಮೂರನೇ ಶತಕ

ಸಿಎಸ್‌ಕೆಯಿಂದ ಬಿಡುಗಡೆಯಾದ ನಂತರ, ಗೋವಾ ವಿರುದ್ಧ ಗಳಿಸಿದ ಶತಕವು ನಾರಾಯಣ ಜಗದೀಸನ್ ಅವರ ಬ್ಯಾಟ್‌ನಿಂದ ಹೊರಬಂದ ಸತತ ಎರಡನೇ ಶತಕವಾಗಿದೆ. ಆದರೆ ಕಳೆದ 5 ದಿನಗಳಲ್ಲಿ ಇದು ನಾರಾಯಣ್ ಜಗದೀಸನ್ ಅವರ ಸತತ ಮೂರನೇ ಶತಕವಾಗಿದೆ. ನವೆಂಬರ್ 17 ರಂದು ಗೋವಾ ವಿರುದ್ಧ 168 ರನ್ ಗಳಿಸುವ ಮೊದಲು, ಅವರು ನವೆಂಬರ್ 15 ರಂದು ಛತ್ತೀಸ್‌ಗಢ ವಿರುದ್ಧ 107 ಮತ್ತು ನವೆಂಬರ್ 13 ರಂದು ಆಂಧ್ರಪ್ರದೇಶ ವಿರುದ್ಧ 114 ರನ್ ಗಳಿಸಿದರು.

ನಾರಾಯಣ್ ಜಗದೀಸನ್ ಅವರಲ್ಲದೆ ಸಾಯಿ ಸುದರ್ಶನ್ ಕೂಡ ಗೋವಾ ವಿರುದ್ಧ ಶತಕ ಸಿಡಿಸಿದ್ದರು. ವಿಜಯ್ ಹಜಾರೆ ಟ್ರೋಫಿಯ ಸತತ ಎರಡನೇ ಪಂದ್ಯದಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಛತ್ತೀಸ್‌ಗಢ ವಿರುದ್ಧ ಈ ಸಾಧನೆ ಮಾಡಿದ್ದರು.

ಐಪಿಎಲ್ 2023ರ ಮಿನಿ ಹರಾಜಿನ ಮುನ್ನ ಜಗದೀಶನ್ ಘರ್ಜನೆ

ಈಗ ಮುಂದಿನ ತಿಂಗಳು ಅಂದರೆ ಡಿಸೆಂಬರ್ 16 ರಂದು ಐಪಿಎಲ್​ನ ಮಿನಿ ಹರಾಜು ನಡೆಯಲ್ಲಿದ್ದು,  ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಶತಕಗಳನ್ನು ಬಾರಿಸಿರುವ ನಾರಾಯಣ್ ಜಗದೀಸನ್​​ಗೆ ಭಾಗ್ಯದ ಬಾಗಿಲು ತೆರೆಯುವ ಸಂಭವವಿದೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಪರ ಕಣಕ್ಕಿಳಿದಿದ್ದ ಜಗದೀಸನ್​ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಹೊಸ ತಂಡ ಸೇರುವುದರೊಂದಿಗೆ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಉದ್ದೇಶ ಜಗದೀಸನ್ ಅವರದ್ದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada