ENG vs AUS: ‘ಐಪಿಎಲ್ ಇದ್ದಿದ್ದರೆ ತಕ್ಷಣ ಓಡುತ್ತಿದ್ರಿ’; ಮೊಯಿನ್ ಅಲಿ ಹೇಳಿಕೆಗೆ ಮೈಕಲ್ ಕ್ಲಾರ್ಕ್ ಟಾಂಗ್
ENG vs AUS: ಆಟಗಾರರು ವೇಳಾಪಟ್ಟಿಯ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ ಈಗ ಏನಾದರೂ ಐಪಿಎಲ್ ನಡೆದಿದ್ದರೆ, ದೂರ ನೀಡುತ್ತಿರುವ ಆಟಗಾರರೇ ತಕ್ಷಣ ಐಪಿಎಲ್ಗೆ ಹೊರಡುತ್ತಿದ್ದರು ಎಂದು ಕ್ಲಾರ್ಕ್ ಹೇಳಿದ್ದಾರೆ.
ಭಾನುವಾರ ನಡೆದ ಟಿ20 ವಿಶ್ವಕಪ್ (T20 World Cup 2022) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತಂಡ ಎರಡನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಈ ಸಂಭ್ರಮವನ್ನು ಮನಸಾರೆ ಆಚರಿಸುವುದಕ್ಕೂ ಹೆಚ್ಚು ಸಮಯ ನೀಡದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯನ್ನು ಆಯೋಜಿಸಿದೆ. ಮಂಡಳಿಯ ಈ ನಿರ್ಧಾರಕ್ಕೆ ತಮ್ಮ ಅಸಮಾದಾನವನ್ನು ಹೊರಹಾಕಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಮೊಯಿನ್ ಅಲಿ (Moeen Ali) ಮಂಡಳಿಯ ವೇಳಾಪಟ್ಟಿಯನ್ನು ಟೀಕಿಸಿದ್ದರು. ಆದರೆ ಈಗ ಮೊಯಿನ್ ಅಲಿ ಅವರ ಈ ಹೇಳಿಕೆಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ (Michael Clarke) ಸಖತ್ ಟಾಂಗ್ ನೀಡಿದ್ದಾರೆ.
ವಿಶ್ರಾಂತಿಯನ್ನು ಪಡೆಯದ ಹಾಗೆ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಆಯೋಜಿಸಿರುವ ಬಗ್ಗೆ ಮಾತನಾಡಿದ್ದ ಮೊಯಿನ್ ಅಲಿ, ಇಂತಹ ಕಾರ್ಯಕ್ರಮಗಳು ಆಟಗಾರರ 100 ಪ್ರತಿಶತ ಪ್ರದರ್ಶನದ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತವೆ. ಹೆಚ್ಚು ಗ್ಯಾಪ್ ಇಲ್ಲದೇ ನಿರಂತರ ಪಂದ್ಯಗಳನ್ನು ಆಡುವುದರಿಂದಾಗಿ ಆಟಗಾರರಿಗೆ ವಿಶ್ರಾಂತಿ ತೆಗೆದುಕೊಳ್ಳುವ ಅವಕಾಶ ಸಿಗುತ್ತಿಲ್ಲ ಎಂದು ಅಲಿ ಆರೋಪಿಸಿದ್ದರು.
‘ಐಪಿಎಲ್ ಇದ್ದಿದ್ದರೆ ತಕ್ಷಣ ಓಡುತ್ತಿದ್ದೆ’
2015 ರಲ್ಲಿ ಆಸ್ಟ್ರೇಲಿಯಾವನ್ನು ತನ್ನ ನಾಯಕತ್ವದಲ್ಲಿ ವಿಶ್ವ ಚಾಂಪಿಯನ್ ಮಾಡಿದ ನಾಯಕ ಮೈಕೆಲ್ ಕ್ಲಾರ್ಕ್ ಅಲಿ ಹೇಳಿಕೆಯ ಕುರಿತು ಮಾತನಾಡಿದ್ದು, ಆಟಗಾರರು ವೇಳಾಪಟ್ಟಿಯ ಬಗ್ಗೆ ದೂರು ನೀಡುತ್ತಿದ್ದಾರೆ. ಆದರೆ ಈಗ ಏನಾದರೂ ಐಪಿಎಲ್ ನಡೆದಿದ್ದರೆ, ದೂರ ನೀಡುತ್ತಿರುವ ಆಟಗಾರರೇ ತಕ್ಷಣ ಐಪಿಎಲ್ಗೆ ಹೊರಡುತ್ತಿದ್ದರು. ಟಿ20 ವಿಶ್ವಕಪ್ ನಂತರ ಐಪಿಎಲ್ ಆಡುವಂತಿದ್ದರೆ, ನೀವು ಈ ರೀತಿ ಏನನ್ನೂ ಕೇಳುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕ್ಲಾರ್ಕ್ ಫಾಕ್ಸ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ. ಅಲ್ಲದೆ ಆಟಗಾರರು ಅಂತರಾಷ್ಟ್ರೀಯ ವೇಳಾಪಟ್ಟಿಯ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ಅವರು ಹಣಕ್ಕಾಗಿ ದೇಶೀಯ ಮತ್ತು ಫ್ರಾಂಚೈಸಿ ಕ್ರಿಕೆಟ್ ಅನ್ನು ಆಡುತ್ತಿದ್ದಾರೆ ಎಂದಿದ್ದಾರೆ.
ಮೊಯಿನ್ ಅಲಿ ಹೇಳಿದ್ದೇನು?
ವಿಶ್ವಕಪ್ ಗೆಲುವಿನ ಭಾಗವಾಗಿದ್ದ ಮೊಯಿನ್ ಅಲಿ, “ಮೂರು ದಿನಗಳಲ್ಲಿ ಪಂದ್ಯವನ್ನು ಆಡುವುದು ಭಯಾನಕವಾಗಿದೆ. ಒಂದು ವೇಳೆ ಭಾನುವಾರ ಮಳೆ ಬಿದ್ದಿದ್ದರೆ, ಸೋಮವಾರ ವಿಶ್ವಕಪ್ ಫೈನಲ್ ನಡೆಯುತ್ತಿತ್ತು. ಆಗ ಈ ಸರಣಿ ಆರಂಭಕ್ಕೆ ಕೇವಲ 2 ದಿನಗಳು ಮಾತ್ರ ಉಳಿಯುತ್ತಿದ್ದವು. ಎರಡು ದಿನಗಳ ಗ್ಯಾಪ್‌ನಲ್ಲಿ ಮುಂದಿನ ಸರಣಿಗೆ ತಯಾರಾಗುವುದನ್ನು ಆಟಗಾರರಾದ ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ನಾವು ಆಟದಲ್ಲಿ ತೊಡಗಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದಿದ್ದಾರೆ.
ಅಲ್ಲದೆ ಈ ರೀತಿಯ ವೇಳಾಪಟ್ಟಿ ಸಿದ್ಧಪಡಿಸಿರುವುದು ಇದೇ ಮೊದಲಲ್ಲ ಎಂದು ಮೊಯಿನ್ ದೂರಿದ್ದಾರೆ. ಇದಕ್ಕೂ ಮೊದಲು, 2019 ರಲ್ಲಿ ಆಡಿದ ಏಕದಿನ ವಿಶ್ವಕಪ್ ನಂತರ ಇದೇ ರೀತಿಯ ವೇಳಾಪಟ್ಟಿ ಇರಿಸಲಾಗಿತ್ತು. ಈ ರೀತಿಯಾಗಿ ಬಿಡುವಿಲ್ಲದ ವೇಳಾಪಟ್ಟಿಯಿಂದ ವಿಶ್ವವಿಜೇತರಾಗಿರುವ ನಮಗೆ ಸಂಭ್ರಮಿಸುವ ಅವಕಾಶವೇ ಇಲ್ಲದಂತ್ತಾಗುತ್ತದೆ. ನಾವು ಈ ಚಾಂಪಿಯನ್ ಪಟ್ಟಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುತ್ತೇವೆ. ಹೀಗಾಗಿ ಒಂದು ಗುಂಪಿನಂತೆ ನಾವು ಈ ಸಂಭ್ರಮವನ್ನು ಆನಂದಿಸಲು, ಆಚರಿಸಲು ಬಯಸುತ್ತೇವೆ ಎಂದು ಅಲಿ ಹೇಳಿಕೊಂಡಿದ್ದಾರೆ.
Published On - 2:54 pm, Thu, 17 November 22