Ranji Trophy 2024: ಶತಕ ಸಿಡಿಸಿದ ಬೌಲರ್​ಗಳು: ಹೊಸ ದಾಖಲೆ ನಿರ್ಮಾಣ

| Updated By: ಝಾಹಿರ್ ಯೂಸುಫ್

Updated on: Feb 27, 2024 | 12:59 PM

Ranji Trophy 2024: ರಣಜಿ ಟೂರ್ನಿಯಲ್ಲಿ 10ನೇ ಮತ್ತು 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸಿದ ವಿಶೇಷ ದಾಖಲೆಯನ್ನು ತುನುಷ್ ಕೋಟ್ಯಾನ್ ಹಾಗೂ ತುಷಾರ್ ದೇಶಪಾಂಡೆ ನಿರ್ಮಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಜೋಡಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 1946 ರಲ್ಲಿ ಇಬ್ಬರು ಭಾರತೀಯರು ಇಂತಹದೊಂದು ಅಪರೂಪದ ದಾಖಲೆ ನಿರ್ಮಿಸಿದ್ದರು.

Ranji Trophy 2024: ಶತಕ ಸಿಡಿಸಿದ ಬೌಲರ್​ಗಳು: ಹೊಸ ದಾಖಲೆ ನಿರ್ಮಾಣ
Tanush Kotian - Tushar Deshpande
Follow us on

ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ (Ranji Trophy 2024) ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ತುನುಷ್ ಕೋಟ್ಯಾನ್ ಹಾಗೂ ತುಷಾರ್ ದೇಶಪಾಂಡೆ ಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬರೋಡಾ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಪರ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತುನುಷ್ 120 ರನ್ ಬಾರಿಸಿದರೆ, 11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ತುಷಾರ್ 123 ರನ್​ಗಳಿಸಿದರು. ಈ ಮೂಲಕ ರಣಜಿ ಟೂರ್ನಿ ಇತಿಹಾಸದಲ್ಲಿ 10ನೇ ಮತ್ತು 11ನೇ ಕ್ರಮಾಂಕದ ಶತಕ ಬಾರಿಸಿದ ವಿಶೇಷ ದಾಖಲೆ ಬರೆದರು.

ಅಲ್ಲದೆ ರಣಜಿ ಟ್ರೋಫಿ ಇತಿಹಾಸದಲ್ಲೇ ಇಂತಹದೊಂದು ಸಾಧನೆ ಮಾಡಿದ 2ನೇ ಜೋಡಿ ಎನಿಸಿಕೊಂಡರು. ಇದಕ್ಕೂ ಮುನ್ನ 1946 ರಲ್ಲಿ ಸರ್ರೆ ವಿರುದ್ಧದ ಪಂದ್ಯದಲ್ಲಿ ಚಂದು ಸರ್ವಾಟೆ ಮತ್ತು ಶುಟೆ ಬ್ಯಾನರ್ಜಿ 10ನೇ ಮತ್ತು 11ನೇ ಕ್ರಮಾಂಕಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು.

ಇದೀಗ ಮುಂಬೈ ಪರ ಬೌಲರ್​ಗಳಾಗಿ ಕಣಕ್ಕಿಳಿಯುತ್ತಿರುವ ತನುಷ್ ಕೋಟ್ಯಾನ್ ಹಾಗೂ ತುಷಾರ್ ಜೋಡಿ ಕೊನೆಯ ವಿಕೆಟ್​ಗೆ 232 ರನ್​ಗಳ ಜೊತೆಯಾಟವಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಶತಮಾನದಲ್ಲಿ ಅಂತಿಮ ವಿಕೆಟ್​ಗೆ ದ್ವಿಶತಕದ ಜೊತೆಯಾಟವಾಡಿದ ಭಾರತೀಯ ಜೋಡಿ ಎನಿಸಿಕೊಂಡಿದ್ದಾರೆ.

ಮುಂಬೈ ಮೇಲುಗೈ:

ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಮುಂಬೈ ತಂಡವು ಮುಶೀರ್ ಖಾನ್ (203) ಅವರ ದ್ವಿಶತಕದ ನೆರವಿನಿಂದ 384 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬರೋಡಾ ತಂಡವು 348 ರನ್​ಗಳಿಗೆ ಆಲೌಟ್ ಆಯಿತು.

ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ಪರ ಹಾರ್ದಿಕ್ ತಮೋರ್ (114), ತುನುಷ್ ಕೋಟ್ಯಾನ್ (120) ಹಾಗೂ ತುಷಾರ್ ದೇಶಪಾಂಡೆ (123) ಶತಕ ಬಾರಿಸಿದರು. ಈ ಮೂಲಕ ಮುಂಬೈ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 569 ರನ್ ಕಲೆಹಾಕಿದೆ.

ಇದೀಗ ಕೊನೆಯ ದಿನದಾಟದಲ್ಲಿ ಬರೋಡಾ ತಂಡವು 606 ರನ್​ಗಳ ಗುರಿ ಪಡೆದಿದ್ದು, ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.  ಅದರಂತೆ ಮುಂಬೈ ತಂಡವು ಸೆಮಿಫೈನಲ್​ಗೇರುವುದು ಬಹುತೇಕ ಖಚಿತ ಎನ್ನಬಹುದು.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಭೂಪೇನ್ ಲಾಲ್ವಾನಿ , ಹಾರ್ದಿಕ್ ತಮೋರ್ (ವಿಕೆಟ್ ಕೀಪರ್) , ಅಜಿಂಕ್ಯ ರಹಾನೆ (ನಾಯಕ) , ಸೂರ್ಯಾಂಶ್ ಶೆಡ್ಗೆ , ಶಮ್ಸ್ ಮುಲಾನಿ , ಮುಶೀರ್ ಖಾನ್ , ಶಾರ್ದೂಲ್ ಠಾಕೂರ್ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ತುಷಾರ್ ದೇಶಪಾಂಡೆ.

ಇದನ್ನೂ ಓದಿ: Yashasvi Jaiswal: ಟೆಸ್ಟ್​​ನಲ್ಲಿ ಹೊಸ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್

ಬರೋಡಾ ಪ್ಲೇಯಿಂಗ್ 11: ಜ್ಯೋತ್ಸ್ನಿಲ್ ಸಿಂಗ್ , ಶಾಶ್ವತ್ ರಾವತ್ , ವಿಷ್ಣು ಸೋಲಂಕಿ (ನಾಯಕ) , ಶಿವಾಲಿಕ್ ಶರ್ಮಾ , ಮಿತೇಶ್ ಪಟೇಲ್ (ವಿಕೆಟ್ ಕೀಪರ್) , ಮಹೇಶ್ ಪಿಥಿಯಾ , ಪ್ರಿಯಾಂಶು ಮೊಲಿಯಾ , ಭಾರ್ಗವ್ ಭಟ್ , ಲುಕ್ಮಾನ್ ಮೇರಿವಾಲಾ , ನಿನಾದ್ ರಥ್ವಾ , ರಾಜ್ ಲಿಂಬಾನಿ.