Mohammad Shami: ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿ: ಐಪಿಎಲ್ನಿಂದ ಔಟ್..!
Mohammad Shami: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಳೆದ ಏಕದಿನ ವಿಶ್ವಕಪ್ನಲ್ಲಿ 24 ವಿಕೆಟ್ ಕಬಳಿಸಿ ಮಿಂಚಿದ್ದರು. ಇದಕ್ಕೂ ಮುನ್ನ ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದ ಶಮಿ ಒಟ್ಟು 28 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಆದರೆ ಈ ಬಾರಿಯ ಐಪಿಎಲ್ಗೆ ಶಮಿ ಅಲಭ್ಯರಾಗುವುದು ಖಚಿತವಾಗಿದೆ.
ಟೀಮ್ ಇಂಡಿಯಾ (Team India) ವೇಗಿ ಮೊಹಮ್ಮದ್ ಶಮಿ (Mohammad Shami) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪಾದದ ನೋವಿನಿಂದ ಬಳಲುತ್ತಿದ್ದ ಶಮಿ ಇದೀಗ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ನಿಂದ ಅವರು ಹೊರಗುಳಿಯುವುದು ಖಚಿತವಾಗಿದೆ. ಏಕದಿನ ವಿಶ್ವಕಪ್ ವೇಳೆ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು.
ಈ ನೋವಿನ ನಡುವೆಯೂ ಶಮಿ ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ. ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಇದೀಗ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದಾರೆ.
ನನ್ನ ಅಕಿಲ್ಸ್ ಸ್ನಾಯುರಜ್ಜು ಮೇಲೆ ಯಶಸ್ವಿ ಹೀಲ್ ಆಪರೇಷನ್ ಮಾಡಲಾಗಿದೆ. ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಮೊಹಮ್ಮದ್ ಶಮಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇದರೊಂದಿಗೆ ಮುಂಬರುವ ಐಪಿಎಲ್ನಲ್ಲಿ ಮೊಹಮ್ಮದ್ ಶಮಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ. ಹಾಗೆಯೇ ಜೂನ್ 1 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗೂ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ.
ಭರ್ಜರಿ ಫಾರ್ಮ್ನಲ್ಲಿದ್ದ ಶಮಿ:
ಏಕದಿನ ವಿಶ್ವಕಪ್ 2023 ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ 24 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಶಮಿ ಅವರ ಕರಾರುವಾಕ್ ದಾಳಿಯ ನೆರವಿನಿಂದ ಕಳೆದ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಇದರ ನಡುವೆ ಉಂಟಾದ ಪಾದದ ನೋವಿನ ಸಮಸ್ಯೆಯು ಇದೀಗ ಅವರನ್ನು ಮೈದಾನದಿಂದ ಕೆಲ ತಿಂಗಳುಗಳ ಕಾಲ ಹೊರಗುಳಿಯುವಂತೆ ಮಾಡಿದೆ.
ಇದನ್ನೂ ಓದಿ: 10 ಭರ್ಜರಿ ಸಿಕ್ಸ್, 5 ಫೋರ್: RCB ಆಟಗಾರನ ತೂಫಾನ್ ಶತಕ
ಅತ್ತ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಶಮಿ ಒಟ್ಟು 28 ವಿಕೆಟ್ ಕಬಳಿಸಿದ್ದರು. ಈ ಮೂಲಕ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಇದೀಗ ತಂಡದ ಪ್ರಮುಖ ವೇಗಿ ಹೊರಗುಳಿಯುತ್ತಿರುವುದು ಗುಜರಾತ್ ಟೈಟಾನ್ಸ್ ತಂಡದ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.
ಐಪಿಎಲ್ ಯಾವಾಗ ಶುರು?
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮಾರ್ಚ್ 22 ರಿಂದ ಶುರುವಾಗಲಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮುಂಬರುವ ಲೋಕಸಭಾ ಚುನಾವಣೆ ನಿಮಿತ್ತ ಕೇವಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಇನ್ನುಳಿದ ಪಂದ್ಯಗಳ ವೇಳಾಪಟ್ಟಿಯನ್ನು ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
Published On - 11:16 am, Tue, 27 February 24