Neil Wagner: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೀಲ್ ವ್ಯಾಗ್ನರ್ ನಿವೃತ್ತಿ

Neil Wagner: ಸೌತ್ ಆಫ್ರಿಕಾ ಮೂಲದ ನ್ಯೂಝಿಲೆಂಡ್ ಕ್ರಿಕೆಟಿಗ ನೀಲ್ ವ್ಯಾಗ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2012 ರಲ್ಲಿ ನ್ಯೂಝಿಲೆಂಡ್ ಪರ ಪಾದಾರ್ಪಣೆ ಮಾಡಿದ್ದ ನೀಲ್ ಒಟ್ಟು 64 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಇದಾಗ್ಯೂ ಅವರಿಗೆ ಏಕದಿನ ಮತ್ತು ಟಿ20 ತಂಡಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ ಎಂಬುದು ವಿಶೇಷ.

Neil Wagner: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೀಲ್ ವ್ಯಾಗ್ನರ್ ನಿವೃತ್ತಿ
Neil Wagner
Follow us
TV9 Web
| Updated By: ಝಾಹಿರ್ ಯೂಸುಫ್

Updated on:Feb 27, 2024 | 10:24 AM

ನ್ಯೂಝಿಲೆಂಡ್ ತಂಡದ ವೇಗದ ಬೌಲರ್ ನೀಲ್ ವ್ಯಾಗ್ನರ್ (Neil Wagner) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಝಿಲೆಂಡ್ ತಂಡ ಪ್ರಕಟವಾದ ಬೆನ್ನಲ್ಲೇ 37 ವರ್ಷದ ನೀಲ್ ವ್ಯಾಗ್ನರ್ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 12 ವರ್ಷಗಳ ವೃತ್ತಿಜೀವನಕ್ಕೆ ತೆರೆ ಬಿದ್ದಂತಾಗಿದೆ.

ನ್ಯೂಝಿಲೆಂಡ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ನೀಲ್ ವ್ಯಾಗ್ನರ್ ಒಟ್ಟು 64 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 122 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 260 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದಾಗ್ಯೂ ನೀಲ್​ ನ್ಯೂಝಿಲೆಂಡ್ ಪರ ಒಂದೇ ಒಂದು ಏಕದಿನ ಮತ್ತು ಟಿ20 ಪಂದ್ಯಗಳನ್ನಾಡಿಲ್ಲ ಎಂಬುದು ವಿಶೇಷ.

ಇನ್ನು ನ್ಯೂಝಿಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಟ್ರೋಫಿ ಗೆದ್ದಾಗ ಎಡಗೈ ವೇಗಿ ನೀಲ್ ವ್ಯಾಗ್ನರ್ ತಂಡದ ಭಾಗವಾಗಿದ್ದರು. ತಮ್ಮ ಮಾರಕ ಬೌಲಿಂಗ್ ಮೂಲಕವೇ ಸಂಚಲನ ಸೃಷ್ಟಿಸಿದ್ದ ನೀಲ್ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿಲ್ಲ. ಹೀಗಾಗಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿ ಕರೆದು ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿರುವ ನೀಲ್ ವ್ಯಾಗ್ನರ್, ನೀವು ನೀಡಿರುವ ಬೆಂಬಲ, ಅದರಿಂದ ಸಿಕ್ಕಿರುವ ಪ್ರೀತಿಯಿಂದ ದೂರ ಸರಿಯುವುದು ಸುಲಭದ ವಿಷಯವಲ್ಲ. ಆದರೆ ಇತರರು ಕೂಡ ತಂಡದ ಪರ ಆಡಬೇಕಾದ ಸಮಯ ಬಂದಿದೆ. ಹೀಗಾಗಿ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನ್ಯೂಝಿಲೆಂಡ್ ಅಭಿಮಾನಿಗಳು ಹಾಗೂ ಇತರರು ನೀಡಿದ ಬೆಂಬಲಕ್ಕಾಗಿ, ನನ್ನನ್ನು ಸ್ವಾಗತಿಸಿದ್ದಕ್ಕಾಗಿ, ನನ್ನನ್ನು ನ್ಯೂಝಿಲೆಂಡ್​ನವನು ಎಂದು ಭಾವಿಸಿದ್ದಕ್ಕಾಗಿ ನಾನು ನಿಮಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಕಾಗಲ್ಲ. ಆದರೂ ನಿಮ್ಮೆಲ್ಲಾ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ನೀಲ್ ವ್ಯಾಗ್ನರ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024: RCB ಗೆದ್ದರೆ ಹೊಸ ಇತಿಹಾಸ

ಅಂದಹಾಗೆ ನೀಲ್ ವ್ಯಾಗ್ನರ್ ಸೌತ್ ಆಫ್ರಿಕಾ ಮೂಲದ ಕ್ರಿಕೆಟಿಗ. ಆದರೆ 2012 ರಲ್ಲಿ ತಮ್ಮ ವೃತ್ತಿಜೀವನವನ್ನು ನ್ಯೂಝಿಲೆಂಡ್ ಪರ ಆರಂಭಿಸಿದ್ದರು. ಇದೀಗ ನ್ಯೂಝಿಲೆಂಡ್ ತಂಡದ ಆಟಗಾರ ಎಂಬ ಟ್ಯಾಗ್​ಲೈನ್​ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

Published On - 10:22 am, Tue, 27 February 24