Shubman Gill: ಶುಭ್ಮನ್ ಗಿಲ್… ಟೀಕೆಗಳಿಗೆ ಬ್ಯಾಟ್ನಿಂದಲೇ ಉತ್ತರ
Shubman Gill: ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಸತತ ವೈಫಲ್ಯ ಅನುಭವಿಸಿದ್ದ ಶುಭ್ಮನ್ ಗಿಲ್ ಇದೀಗ ಕಂಬ್ಯಾಕ್ ಮಾಡಿದ್ದಾರೆ. ಅದು ಕೂಡ ಮೂರು ಪಂದ್ಯಗಳಲ್ಲೂ ಬ್ಯಾಕ್ ಟು ಬ್ಯಾಕ್ 50+ ಸ್ಕೋರ್ಗಳಿಸುವ ಮೂಲಕ ಎಂಬುದು ವಿಶೇಷ. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಗಿಲ್ ಎಲ್ಲಾ ಟೀಕೆಗಳಿಗೂ ಉತ್ತರ ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನ ಪ್ರಥಮ ಇನಿಂಗ್ಸ್ನಲ್ಲಿ 23 ರನ್, ದ್ವಿತೀಯ ಇನಿಂಗ್ಸ್ನಲ್ಲಿ ಝೀರೋ… ಇದಕ್ಕೂ ಮುನ್ನ ಕಣಕ್ಕಿಳಿದ 8 ಇನಿಂಗ್ಸ್ಗಳಲ್ಲಿ ಕಲೆಹಾಕಿದ್ದು 47, 6, 10, 29*, 2, 26, 36, 10 ರನ್ಗಳು. ಹೀಗಾಗಿ ಮೊದಲ ಟೆಸ್ಟ್ ಪಂದ್ಯದ ವೈಫಲ್ಯದ ಬೆನ್ನಲ್ಲೇ ಶುಭ್ಮನ್ ಗಿಲ್ (Shubman Gill ) ಮೂರನೇ ಕ್ರಮಾಂಕಕ್ಕೆ ಸೂಕ್ತರೇ ಎಂಬ ಪ್ರಶ್ನೆಗಳೆದ್ದಿದ್ದವು.
ಅಲ್ಲದೆ 2ನೇ ಟೆಸ್ಟ್ ಪಂದ್ಯಕ್ಕೆ ಗಿಲ್ ಬದಲಿಗೆ ಚೇತೇಶ್ವರ ಪೂಜಾರ ಅಥವಾ ಹನುಮ ವಿಹಾರಿಯನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕೆಂಬ ಕೂಗುಗಳು ಕೂಡ ಕೇಳಿ ಬಂದಿದ್ದವು. ಈ ಎಲ್ಲಾ ಅಪಸ್ವರಗಳ ನಡುವೆ 2ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಮೊದಲ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 34 ರನ್ಗಳು ಮಾತ್ರ.
ಈ ವೈಫಲ್ಯವನ್ನೇ ನೋಡಲು ಕಾದು ಕುಳಿತಿದ್ದ ಟೀಕಾಗಾರರಿಗೆ ಮತ್ತೊಮ್ಮೆ ಗಿಲ್ ಆಹಾರವಾದರು. ಆದರೆ 2ನೇ ಇನಿಂಗ್ಸ್ನಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಶುಭ್ಮನ್ ಗಿಲ್ 104 ರನ್ ಬಾರಿಸಿ ಮಿಂಚಿದರು. ಈ ಶತಕದೊಂದಿಗೆ ಗಿಲ್ 3ನೇ ಟೆಸ್ಟ್ ಪಂದ್ಯಕ್ಕೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು.
ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲೇ ಶುಭ್ಮನ್ ಗಿಲ್ ಶೂನ್ಯಕ್ಕೆ ಔಟಾದರು. ಮತ್ತದೇ ಟೀಕೆ ಟಿಪ್ಪಣಿಗಳು ಶುರುವಾದವು. ಆದರೆ 2ನೇ ಇನಿಂಗ್ಸ್ನಲ್ಲಿ ಕಂಬ್ಯಾಕ್ ಮಾಡಿದ ಗಿಲ್ ಅಮೂಲ್ಯ 91 ರನ್ಗಳ ಕೊಡುಗೆ ನೀಡಿದರು. ಮತ್ತೊಂದು ಸರದಿಯ ಟೀಕೆಗೆ ಕಾಯುತ್ತಿದ್ದವರಿಗೆ ಗಿಲ್ ಬ್ಯಾಟ್ ಮೂಲಕ ಉತ್ತರ ನೀಡಿದರು.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶುಭ್ಮನ್ 38 ರನ್ ಬಾರಿಸಿದರು. ಆದರೆ ಈ ಬಾರಿ ಟೀಕೆ ಮಾಡಲು ಅವಕಾಶವೇ ಇರಲಿಲ್ಲ. ಏಕೆಂದರೆ ಇದಕ್ಕೂ ಮುನ್ನ ಗಿಲ್ ಬ್ಯಾಟ್ನಿಂದ 91 ರನ್ಗಳು ಮೂಡಿಬಂದಿತ್ತು. ಹೀಗಾಗಿಯೇ ಟೀಕಾಗಾರರು 2ನೇ ಇನಿಂಗ್ಸ್ನಲ್ಲಿ ಅದೇನು ಮಾಡಲಿದ್ದಾನೆ ನೋಡೋಣ ಎಂದು ಕಾದು ಕುಳಿತಿದ್ದರು.
ಆದರೆ ಟೀಮ್ ಇಂಡಿಯಾಗೆ ಏನು ಅವಶ್ಯಕತೆಯಿತ್ತೋ ಅದನ್ನೇ ಶುಭ್ಮನ್ ಗಿಲ್ ನೀಡಿದರು. ಟೆಸ್ಟ್ ಕ್ರಿಕೆಟ್ನಲ್ಲಿ ತಾಳ್ಮೆ ಎಷ್ಟು ಅನಿವಾರ್ಯ ಎಂಬುದನ್ನು ನಿರೂಪಿಸಿದರು. ಟೀಮ್ ಇಂಡಿಯಾ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್ ರನ್ ಪೇರಿಸುತ್ತಾ ಸಾಗಿದರು. ಅದರಲ್ಲೂ ಯುವ ಆಟಗಾರ ಧ್ರುವ್ ಜುರೇಲ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು.
ಪರಿಣಾಮ ಸರಣಿ ನಿರ್ಣಾಯಕ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸುವ ಮೂಲಕ ಶುಭ್ಮನ್ ಗಿಲ್ ಭಾರತ ತಂಡಕ್ಕೆ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿ ಜಯಿಸಿದರೆ, ಅತ್ತ ಶುಭ್ಮನ್ ಗಿಲ್ ಟೀಕಾಗಾರರ ವಿರುದ್ಧ ಗೆದ್ದು ಬೀಗಿದರು.
ಸರಣಿ ಆರಂಭಕ್ಕೂ ಮುನ್ನ ಸತತ ಟೀಕೆಗಳಿಗೆ ಗುರಿಯಾಗಿದ್ದ ಶುಭ್ಮನ್ ಗಿಲ್ ಈ ಬಾರಿ 1 ಶತಕ ಹಾಗೂ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂರು ಅತ್ಯುತ್ತಮ ಇನಿಂಗ್ಸ್ ಮೂಡಿಬಂದಿರುವುದು ಗೆಲುವಿಗೆ ನಿರ್ಣಾಯಕವಾಗಿದ್ದ 2ನೇ ಇನಿಂಗ್ಸ್ನಲ್ಲಿ ಎಂಬುದು ವಿಶೇಷ.
ಇದನ್ನೂ ಓದಿ: WPL ನಲ್ಲಿ ಹೊಸ ಇತಿಹಾಸ ಬರೆದ RCB ಸ್ಪಿನ್ನರ್
ಎಲ್ಲರೂ ಶುಭ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಅನುಮಾನಪಟ್ಟರು, ಈ ಹಿಂದೆ ವಿರಾಟ್ ಕೊಹ್ಲಿ ಬಗ್ಗೆ ಹೇಗೆ ಅನುಮಾನಪಟ್ಟರೋ ಅದೇ ರೀತಿ… ಶುಭ್ಮನ್ ಗಿಲ್ ಬಗ್ಗೆ ಅನುಮಾನವೇ ಬೇಡ. ಇದು ಭಾರತ ತಂಡ 4ನೇ ಟೆಸ್ಟ್ ಪಂದ್ಯ ಗೆದ್ದಾಗ ಇಂಗ್ಲೆಂಡ್ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಮಾಡಿದ ಟ್ವೀಟ್. ಈ ಟ್ವೀಟ್ ಶುಭ್ಮನ್ ಗಿಲ್ ಅವರ ಮೇಲೆ ಟೀಕಾ ಪ್ರಹಾರ ನಡೆಸಿದವರಿಗೆ ಸ್ಪಷ್ಟ ಉತ್ತರ.