
ಜುಲೈ 31 ರ ಗುರುವಾರದಿಂದ ಲಂಡನ್‌ನ ಓವಲ್‌ನಲ್ಲಿ (Oval Test Match) ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದ ಫಲಿತಾಂಶ ಹೊರಬೀಳುವುದಕ್ಕೂ ಮುನ್ನವೇ ಟೀಂ ಇಂಡಿಯಾ (Team India) ಸತತ ಸೋಲುಗಳ ವಿಚಾರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ವಾಸ್ತವವಾಗಿ ಟೀಂ ಇಂಡಿಯಾ ಪಂದ್ಯಗಳನ್ನು ಸೋತು ಈ ದಾಖಲೆಯನ್ನು ಬರೆದಿಲ್ಲ. ಬದಲಿಗೆ, ಪಂದ್ಯಕ್ಕೂ ಮುನ್ನ ನಡೆಯುವ ಟಾಸ್‌ಗಳನ್ನು ಸತತವಾಗಿ ಸೋಲುವ ಮೂಲಕ ಅಪರೂಪದಲ್ಲೇ ಅಪರೂಪವಾದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
ವಾಸ್ತವವಾಗಿ ಲೀಡ್ಸ್ ಟೆಸ್ಟ್ನಿಂದ ಆರಂಭವಾದ ಭಾರತದ ಇಂಗ್ಲೆಂಡ್ ಪ್ರವಾಸ ಇದೀಗ ಓವಲ್ ಟೆಸ್ಟ್ನೊಂದಿಗೆ ಮುಕ್ತಯವಾಗುತ್ತಿದೆ. ಈ ಸರಣಿಯಲ್ಲಿ ಭಾರತ 1 ಪಂದ್ಯವನ್ನು ಗೆದ್ದು, 2 ಪಂದ್ಯಗಳಲ್ಲಿ ಸೋತು, ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಆದರೆ ಇಡೀ ಸರಣಿಯ ಐದೂ ಪಂದ್ಯಗಳಲ್ಲಿ ಭಾರತ ತಂಡದ ನಾಯಕ ಶುಭ್ಮನ್ ಗಿಲ್ಗೆ ಟಾಸ್ ಗೆಲ್ಲಲು ಸಾಧ್ಯವಾಗಿಲ್ಲ. ಟಾಸ್ ಗೆಲ್ಲುವುದು, ಸೋಲುವುದು ಯಾರ ಕೈಯಲ್ಲೂ ಇರದಿದ್ದರೂ, ಟೀಂ ಇಂಡಿಯಾ ನಾಯಕರಿಗೆ ಟಾಸ್ ಸೋಲುವುದು ದುಃಸ್ವಪ್ನವಾಗಿದೆ ಎಂದರೆ ತಪ್ಪಾಗಲಾರದು. ಐದಲ್ಲ, ಹತ್ತಲ್ಲ, ಈ ವರ್ಷ ಸತತ 15 ಪಂದ್ಯಗಳಲ್ಲಿ ಟೀಂ ಇಂಡಿಯಾ ಟಾಸ್ ಸೋತಿರುವುದು ಅಚ್ಚರಿಯ ಸಂಗತಿಯಾಗಿದೆ.
ಮೇಲೆ ಹೇಳಿದಂತೆ ಈ ವರ್ಷ ಟೀಂ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 15 ನೇ ಪಂದ್ಯದಲ್ಲಿ ಟಾಸ್ ಸೋತಿದೆ. ಭಾರತ ತಂಡದ ಈ ಟಾಸ್ ಸೋಲುಗಳ ಸರಣಿಯು ಜನವರಿ 31, 2025 ರಂದು ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಟಾಸ್ ಸೋಲಿನೊಂದಿಗೆ ಪ್ರಾರಂಭವಾಯಿತು. ಇದರ ನಂತರ, ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ಮತ್ತು ನಂತರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟಾಸ್ ಸೋತ ಕಥೆಯನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಟೆಸ್ಟ್ ಸ್ವರೂಪದಲ್ಲಿ ಹೊಸ ನಾಯಕ ಶುಭ್ಮನ್ ಗಿಲ್ ಆಗಮನದೊಂದಿಗೆ ಅದೃಷ್ಟ ಬದಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಅವರು ಕೂಡ ಟಾಸ್ ವಿಚಾರದಲ್ಲಿ ಇದುವರೆಗೆ ಯಶಸ್ವಿಯಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಐದು ಪಂದ್ಯಗಳನ್ನು ಟಾಸ್‌ಗಳನ್ನು ಗಿಲ್ ಸೋತಿದ್ದಾರೆ.
🪙 15th toss loss for India this year
🪙 2nd time in 21st century a team has lost all tosses in a 5-Test series – both times: India in England
What's your fix for this coin conundrum? 🔮 Get creative with your solutions#ENGvIND #AndersonTendulkarTrophy pic.twitter.com/aDXePcEWZH
— Cricbuzz (@cricbuzz) July 31, 2025
ಈ ಮೂಲಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳ ಟಾಸ್ ಸೋತ ದಾಖಲೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು, ವೆಸ್ಟ್ ಇಂಡೀಸ್ ಫೆಬ್ರವರಿ 2, 1999 ರಿಂದ ಏಪ್ರಿಲ್ 21, 1999 ರ ನಡುವೆ ಸತತ 12 ಪಂದ್ಯಗಳಲ್ಲಿ ಟಾಸ್ ಸೋತಿತ್ತು. ಇದೀಗ 15 ಟಾಸ್ ಸೋಲುಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದೆ.
IND vs ENG: ಐದಕ್ಕೆ 5 ಪಂದ್ಯದಲ್ಲೂ ಟಾಸ್ ಸೋತ ಭಾರತ; ಕರುಣ್ ಇನ್, ಬುಮ್ರಾ ಔಟ್
ಇನ್ನೊಂದು ಅಚ್ಚರಿ ಸಂಗತಿಯೆಂದರೆ, ಮೂರನೇ ಸ್ಥಾನದಲ್ಲಿ ಮತ್ತೆ ಟೀಂ ಇಂಡಿಯಾವೇ ಇದ್ದು, ಡಿಸೆಂಬರ್ 2022 ಮತ್ತು ಮಾರ್ಚ್ 2023 ರ ನಡುವೆ ಭಾರತ ತಂಡ ಸತತ 11 ಪಂದ್ಯಗಳಲ್ಲಿ ಟಾಸ್ ಸೋತಿತ್ತು. ಇದಲ್ಲದೇ, ಶುಭಮನ್ ಗಿಲ್ 21 ನೇ ಶತಮಾನದಲ್ಲಿ ಟೆಸ್ಟ್ ಸರಣಿಯ ಎಲ್ಲಾ 5 ಪಂದ್ಯಗಳಲ್ಲಿ ಟಾಸ್ ಸೋತ ಎರಡನೇ ನಾಯಕ ಎನಿಸಿಕೊಂಡಿದ್ದಾರೆ. ಪ್ರಾಸಂಗಿಕವಾಗಿ, ಈ ಮೊದಲು 2018 ರಲ್ಲಿ ಸತತ 5 ಪಂದ್ಯಗಳಲ್ಲಿ ಟಾಸ್ ಸೋಲುವ ಮೂಲಕ ವಿರಾಟ್ ಕೊಹ್ಲಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:21 pm, Thu, 31 July 25