
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy 2025) ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಂ ಇಂಡಿಯಾ ಸದ್ಯ ಗೆದ್ದ ಖುಷಿಯಲ್ಲಿ ತೇಲಾಡುತ್ತಿದೆ. ಪ್ರಸ್ತುತ ದುಬೈನಲ್ಲಿರುವ ರೋಹಿತ್ ಪಡೆ ಇಷ್ಟರಲ್ಲೇ ಭಾರತಕ್ಕೆ ಬಂದಿಳಿಯಲಿದೆ. ಚಾಂಪಿಯನ್ಸ್ ಟ್ರೋಫಿ ಸಂಭ್ರಮ ಮುಗಿಯುವುದರೊಳಗೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ (IPL) ಆರಂಭವಾಗಲಿದೆ. 2 ತಿಂಗಳುಗಳ ಕಾಲ ನಡೆಯುವ ಐಪಿಎಲ್ ಮೇ ಕೊನೆಯ ವಾರದಲ್ಲಿ ಅಂತ್ಯಗೊಳಲಿದೆ. ಇದರರ್ಥ ಟೀಂ ಇಂಡಿಯಾ (Team India) ಮುಂದಿನ ಮೂರು ತಿಂಗಳು ಯಾವ ಅಂತರರಾಷ್ಟ್ರೀಯ ಸರಣಿಗಳನ್ನು ಆಡುವುದಿಲ್ಲ. ಹಾಗಿದ್ದರೆ, ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?
ಟೀಂ ಇಂಡಿಯಾದ ವೇಳಾಪಟ್ಟಿಯ ಪ್ರಕಾರ, ರೋಹಿತ್ ಪಡೆ ಜೂನ್ ತಿಂಗಳಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ನಾಲ್ಕನೇಯ ಆವೃತ್ತಿಯೂ ಶುರುವಾಗಲಿದೆ. ಈ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿರುವ ಟೀಂ ಇಂಡಿಯಾ, ಬಲಿಷ್ಠ ಇಂಗ್ಲೆಂಡ್ ತಂಡವನ್ನು ಅವರ ನೆಲದಲ್ಲೇ ಎದುರಿಸಲಿದೆ. ಸುಮಾರು 45 ದಿನಗಳ ಕಾಲ ಇಂಗ್ಲೆಂಡ್ನಲ್ಲಿರುವ ಟೀಂ ಇಂಡಿಯಾ, ಐದು ಪಂದ್ಯಗಳನ್ನು ಆಡಿ ಮುಗಿಸಿದ ಬಳಿಕ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ವಾಪಸ್ಸಾಗಲಿದೆ.
ಈ ಪ್ರವಾಸಕ್ಕಾಗಿ ಟೀಂ ಇಂಡಿಯಾವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಟೆಸ್ಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮುಂದುವರಿಯುವ ನಿರೀಕ್ಷೆಯಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮೊದಲು ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂಬ ಊಹಾಪೋಹವಿತ್ತು. ಆದರೆ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಸದ್ಯಕ್ಕೆ ನಿವೃತ್ತಿಯ ನಿರ್ಧಾರವಿಲ್ಲ ಎಂದು ನೇರವಾಗಿ ಹೇಳಿದ್ದರು. ಹೀಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಜೊತೆಗೆ, ವಿರಾಟ್ ಕೊಹ್ಲಿ, ಶುಭ್ನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ಸಹ ತಂಡದ ಭಾಗವಾಗುವ ನಿರೀಕ್ಷೆಯಿದೆ.
ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು 135 ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 35 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 51 ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ 50 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ಇದನ್ನೂ ಓದಿ: ‘ಶಾರ್ಜಾದಿಂದ ಪರಾರಿಯಾಗಲು ಯತ್ನಿಸಿದ್ದ ಗವಾಸ್ಕರ್ಗೆ ಇದು ಶೋಭೆ ಅಲ್ಲ’; ಇಂಜಮಾಮ್ ಆಕ್ರೋಶ
ಇಂಗ್ಲೆಂಡ್ ಪ್ರವಾಸಕ್ಕೆ ಸಂಭಾವ್ಯ ಭಾರತ ತಂಡ: ಶುಭ್ಮನ್ ಗಿಲ್, ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಧ್ರುವ್ ಜುರೆಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ