India vs England 2nd Test: ಇಂಗ್ಲೆಂಡ್​ಗೆ ಭಯ ಶುರು: 7 ವರ್ಷಗಳ ಹಿಂದಿನಂತಿದೆ ಈಗಿನ ಪಂದ್ಯ..!

| Updated By: ಝಾಹಿರ್ ಯೂಸುಫ್

Updated on: Aug 15, 2021 | 3:54 PM

Team India: ಭಾರತ 364 ರನ್​ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 391 ರನ್ ಪೇರಿಸಿದೆ. ಮೊದಲ ಇನಿಂಗ್ಸ್​ನಲ್ಲಿ ಭಾರತದ ಪರ ಕೆಎಲ್ ರಾಹುಲ್ ಶತಕ ಸಿಡಿಸಿ ನೆರವಾಗಿದ್ದರು.

India vs England 2nd Test: ಇಂಗ್ಲೆಂಡ್​ಗೆ ಭಯ ಶುರು: 7 ವರ್ಷಗಳ ಹಿಂದಿನಂತಿದೆ ಈಗಿನ ಪಂದ್ಯ..!
Virat kohli
Follow us on

ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್ (England) ತಂಡದ್ದೇ ಪಾರುಪತ್ಯ. ಶತಮಾನಗಳಿಂದ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು ಮೇಲುಗೈ ಸಾಧಿಸುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯೇ ಇಲ್ಲಿ ಆಡಿದ 140 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ 55 ಗೆಲುವು ದಾಖಲಿಸಿರುವುದು. ಹಾಗೆಯೇ 51 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರವಾಸಿ ತಂಡ ಲಾರ್ಡ್ಸ್​ನಲ್ಲಿ ಗೆದ್ದಿರುವುದು ಕೇವಲ 32 ಪಂದ್ಯಗಳಲ್ಲಿ ಮಾತ್ರ. ಅಂದರೆ ಈ ಮೈದಾನದಲ್ಲಿ ಇಂಗ್ಲೆಂಡ್ ತಂಡವು 140 ಪಂದ್ಯಗಳಲ್ಲಿ 106 ಮ್ಯಾಚ್​ಗಳಲ್ಲಿ ಮೇಲುಗೈ ಸಾಧಿಸಿದೆ. ಇದಾಗ್ಯೂ ಇದೀಗ ಇಂಗ್ಲೆಂಡ್ ತಂಡಕ್ಕೆ ಸಣ್ಣ ಭಯವೊಂದು ಶುರುವಾಗಿದೆ. ಏಕೆಂದರೆ ಪ್ರಸ್ತುತ ನಡೆಯುತ್ತಿರುವ ಪಂದ್ಯವು 7 ವರ್ಷಗಳ ಹಿಂದಿನ ಟೀಮ್ ಇಂಡಿಯಾ (India vs England 2nd Test) ಪ್ರದರ್ಶನಕ್ಕೆ ಸಾಮ್ಯತೆ ಹೊಂದಿರುವುದು.

ಈಗ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ 364 ರನ್​ ಕಲೆಹಾಕಿದರೆ, ಇಂಗ್ಲೆಂಡ್ ತಂಡವು 391 ರನ್ ಪೇರಿಸಿದೆ. ಮೊದಲ ಇನಿಂಗ್ಸ್​ನಲ್ಲಿ ಭಾರತದ ಪರ ಕೆಎಲ್ ರಾಹುಲ್ ಶತಕ ಸಿಡಿಸಿ ನೆರವಾಗಿದ್ದರು. ಇತ್ತ ನಾಯಕ ಜೋ ರೂಟ್ ಅಜೇಯ 180 ರನ್​ ಬಾರಿಸಿ ಇಂಗ್ಲೆಂಡ್​ 27 ರನ್​ಗಳ ಮುನ್ನಡೆ ತಂದುಕೊಟ್ಟಿದ್ದಾರೆ. ಇದೀಗ ದ್ವಿತೀಯ ಇನಿಂಗ್ಸ್​ ಆರಂಭವಾಗಿದೆ. ಇನ್ನು 2 ದಿನದಾಟ ಬಾಕಿ ಉಳಿದಿವೆ. ಇದರ ಬೆನ್ನಲ್ಲೇ 2014ರ ಟೀಮ್ ಇಂಡಿಯಾ ಪ್ರದರ್ಶನದ ಅಂಕಿ ಅಂಶಗಳು ಮುನ್ನಲೆಗೆ ಬಂದಿದೆ.

ಹೌದು, 2014 ರಲ್ಲಿ ಭಾರತ ಹಾಗೂ ಇಂಗ್ಲೆಂಡ್ ಲಾರ್ಡ್ಸ್​ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 295 ರನ್ ಕಲೆಹಾಕಿತ್ತು. ಈ ವೇಳೆ ಭಾರತ ತಂಡಕ್ಕೆ ಅಜಿಂಕ್ಯ ರಹಾನೆ 103 ರನ್ ಬಾರಿಸಿ ನೆರವಾಗಿದ್ದರು. ಇನ್ನು ಭಾರತ ನೀಡಿದ ಗುರಿಗೆ ಪ್ರತಿಯಾಗಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 319 ರನ್ ಗಳಿಸಿತು. ಅಂದರೆ, ಅಂದು 24 ರನ್​ಗಳ ಮುನ್ನಡೆ ಪಡೆದುಕೊಂಡಿದ್ದರು.

ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಿತು. ಮುರಳಿ ವಿಜಯ್, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ  342 ರನ್ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್​ಗೆ 319 ರನ್ ಗಳ ಗುರಿ ನೀಡಿತು. ಆದರೆ ಆತಿಥೇಯರು ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 223 ರನ್ ಗಳಿಗೆ ಆಲೌಟಾದರು. ಈ ಪಂದ್ಯವನ್ನು ಟೀಮ್ ಇಂಡಿಯಾ 95 ರನ್​ಗಳಿಂದ ಗೆದ್ದುಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಬೌಲರ್ ಇಶಾಂತ್ ಶರ್ಮಾ 7 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೆ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದ್ದರು. ಇದೀಗ ಕಾಕತಾಳೀಯ ಎಂಬಂತೆ ಪ್ರಸ್ತುತ ಟೆಸ್ಟ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ಒಬ್ಬ ಆಟಗಾರನಿಂದ (ಕೆಎಲ್ ರಾಹುಲ್) ಶತಕ ಮೂಡಿಬಂದಿದೆ. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕಡಿಮೆ ಮೊತ್ತದ ಮುನ್ನಡೆ ಪಡೆದಿದೆ. ಇತ್ತ ಇಶಾಂತ್ ಶರ್ಮಾ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದ್ದಾರೆ.

ಈ ಅಂಕಿ ಅಂಶಗಳು ಮುನ್ನೆಲೆಗೆ ಬರುತ್ತಿದ್ದಂತೆ 7 ವರ್ಷಗಳ ಹಿಂದಿನಂತೆ ಈ ಬಾರಿ ಕೂಡ ಟೀಮ್ ಇಂಡಿಯಾ ಅಂತಿಮ ಎರಡು ದಿನಗಳ ದಿನದಾಟದಲ್ಲಿ ಕಂಬ್ಯಾಕ್ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಹಾಗೆಯೇ ಇಂಗ್ಲೆಂಡ್​ನ ಅದೃಷ್ಟದ ಮೈದಾನ ಲಾರ್ಡ್ಸ್​ನಲ್ಲೇ ಆತಿಥೇಯರಿಗೆ ಕೊಹ್ಲಿ ಪಡೆ ಮಣ್ಣು ಮುಕ್ಕಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ 2ನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದ್ದು, ನಾಲ್ಕನೇ ದಿನದಾಟದ ಮುಕ್ತಾಯದ ವೇಳೆ ಈ ಪಂದ್ಯದ ಫಲಿತಾಂಶ ಏನಾಗಲಿದೆ ಎಂಬುದಕ್ಕೆ ಸ್ಪಷ್ಟತೆ ಸಿಗಲಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್:
ಟೀಮ್ ಇಂಡಿಯಾ- ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ – ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್, ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್, ಮೊಯೀನ್ ಅಲಿ, ಸ್ಯಾಮ್ ಕರನ್, ಓಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಅಂಡರ್ಸನ್

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?