ಪ್ರಾಯೋಜಕರಿಲ್ಲ… ಭಾರತ ತಂಡದ ಜೆರ್ಸಿ ಮೇಲೆ ರಾರಾಜಿಸಲಿದೆ ‘ಇಂಡಿಯಾ’
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಮುಖ ಪ್ರಾಯೋಜಕತ್ವರಿಲ್ಲದೆ ಕಣಕ್ಕಿಳಿಯಲಿದೆ. ಅಂದರೆ ಭಾರತೀಯ ಆಟಗಾರರು ಧರಿಸುವ ಜೆರ್ಸಿ ಮುಂಭಾಗದಲ್ಲಿ ಯಾವುದೇ ಕಂಪೆನಿಯ ಹೆಸರು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಇಂಡಿಯಾ ಎಂಬ ಬರಹ ರಾರಾಜಿಸಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಜೆರ್ಸಿ ಮೇಲೆ ಇಂಡಿಯಾ ಎಂದು ಬರೆದಿದ್ದರೂ ಅದರ ಮೇಲೆ ಸ್ಪಾನ್ಸರ್ ಆಗಿರುವ ಡ್ರೀಮ್ 11 ಕಂಪೆನಿಯ ಜಾಹೀರಾತು ಕಾಣಿಸಿಕೊಳ್ಳುತ್ತಿತ್ತು.
ಆದರೀಗ ಟೀಮ್ ಇಂಡಿಯಾ ಪ್ರಾಯೋಜಕತ್ವದಿಂದ ಡ್ರೀಮ್ 11 ಅನ್ನು ಕೈ ಬಿಡಲಾಗಿದೆ. ಕಳೆದ ತಿಂಗಳು ಭಾರತ ಸರ್ಕಾರವು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಿದ ನಂತರ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದೆ. ಅಲ್ಲದೆ ಹೊಸ ಪ್ರಾಯೋಜಕರಿಗಾಗಿ ಆಹ್ವಾನ ನೀಡಿದೆ.

ಡ್ರೀಮ್ 11 ಪ್ರಾಯೋಜಕರಾಗಿದ್ದಾಗ ಟೀಮ್ ಇಂಡಿಯಾ ಧರಿಸಿದ ಜೆರ್ಸಿ
ಎಷ್ಟು ಕೋಟಿ ಡೀಲ್?
ಡ್ರೀಮ್ 11 ಹಾಗೂ ಬಿಸಿಸಿಐ ನಡುವೆ 2023 ರಲ್ಲಿ 44 ಮಿಲಿಯನ್ ಯುಎಸ್ ಡಾಲರ್ (ರೂ 358 ಕೋಟಿ) ಒಪ್ಪಂದವಾಗಿತ್ತು. ಅದರಂತೆ 2026 ರವರೆಗೆ ಡ್ರೀಮ್ 11 ಟೀಮ್ ಇಂಡಿಯಾದ ಜೆರ್ಸಿ ಮೇಲಿನ ಪ್ರಾಯೋಜಕತ್ವದ ಹಕ್ಕುಗಳನ್ನು ಹೊಂದಿದ್ದರು. ಆದರೆ ಕಳೆದ ತಿಂಗಳು ಭಾರತದಲ್ಲಿ ರಿಯಲ್ ಮನಿ ಗೇಮಿಂಗ್ ಅನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಅಂಗೀಕರಿಸಲಾಗಿದೆ. ಈ ನಿಯಮದ ಕಾರಣ ಡ್ರೀಮ್ 11 ಜೊತೆಗಿನ 358 ಕೋಟಿ ರೂ.ಗಳ ಒಪ್ಪಂದವನ್ನು ಬಿಸಿಸಿಐ ಕೊನೆಗೊಳಿಸಿದೆ.
ಏಷ್ಯಾಕಪ್ಗೆ ಯಾಕೆ ಪ್ರಾಯೋಜಕರಿಲ್ಲ?
ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ ಮುನ್ನ ಬಿಸಿಸಿಐ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಹೊಸ ಬಿಡ್ ಆಹ್ವಾನಿಸಿದೆ. ಸೆಪ್ಟೆಂಬರ್ 2 ರಂದು, ಮಂಡಳಿಯು ಆಹ್ವಾನ ಟೆಂಡರ್ (ಐಟಿಟಿ) ಮಾಡಿದ್ದು, ಆಸಕ್ತರು ಸೆಪ್ಟೆಂಬರ್ 12 ರವರೆಗೆ ಐಟಿಟಿಯನ್ನು ಖರೀದಿಸಬಹುದು. ಇನ್ನು ಸೆಪ್ಟೆಂಬರ್ 16 ರಂದು ಅಂತಿಮ ಬಿಡ್‌ಗಳ ಸಲ್ಲಿಕೆ ನಡೆಯಲಿದೆ.
ಇತ್ತ ಏಷ್ಯಾಕಪ್ ಶುರುವಾಗುವುದು ಸೆಪ್ಟೆಂಬರ್ 9 ರಂದು. ಅಲ್ಲದೆ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದೆ. ಇದಾದ ಬಳಿಕ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾದ ಮೂರನೇ ಪಂದ್ಯ ಇರುವುದು ಸೆಪ್ಟೆಂಬರ್ 19 ರಂದು.
ಹೊಸ ಪ್ರಾಯೋಜಕತ್ವಕ್ಕಾಗಿ ಸೆಪ್ಟೆಂಬರ್ 16 ರಂದು ಬಿಡ್ಡಿಂಗ್ ನಡೆಯಲಿದೆ. ಈ ಬಿಡ್ಡಿಂಗ್ ಬಳಿಕವಷ್ಟೇ ಹೊಸ ಪ್ರಾಯೋಜಕರು ಯಾರೆಂಬುದು ನಿರ್ಧಾರವಾಗಲಿದೆ. ಹೀಗಾಗಿ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪ್ರಾಯೋಜಕತ್ವ ಇಲ್ಲದ ಜೆರ್ಸಿಯಲ್ಲಿ ಕಣಕ್ಕಿಳಿಯುವುದು ಖಚಿತ ಎನ್ನಬಹುದು.
ಕಟ್ಟುನಿಟ್ಟಾದ ಅರ್ಹತಾ ನಿಯಮಗಳು:
ಟೀಮ್ ಇಂಡಿಯಾ ಜೊತೆ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಳ್ಳಲು ಬಯಸುವವರಿಗಾಗಿ ಕಟ್ಟು ನಿಟ್ಟಿನ ಅರ್ಹತಾ ಮಾನದಂಡಗಳನ್ನು ಬಿಸಿಸಿಐ ಮುಂದಿಟ್ಟಿದೆ. ಅದರಂತೆ ಟೆಂಡರ್ ಆಲ್ಕೋಹಾಲ್, ಜೂಜಾಟ, ಬೆಟ್ಟಿಂಗ್, ಕ್ರಿಪ್ಟೋಕರೆನ್ಸಿ, ಆನ್‌ಲೈನ್ ಹಣದ ಗೇಮಿಂಗ್, ತಂಬಾಕು ಅಥವಾ ಅಶ್ಲೀಲತೆಯಂತಹ ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುವ ವಿಷಯಗಳೊಂದಿಗೆ ಸಂಪರ್ಕ ಹೊಂದಿದ ಸಂಸ್ಥೆಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
