ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ (India vs Australia) 2-1 ಅಂಕಗಳ ಅಂತರದಿಂದ ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಇದೀಗ ಟೆಸ್ಟ್ ಸರಣಿ ಬಳಿಕ ಉಭಯ ತಂಡಗಳು ಏಕದಿನ ಸರಣಿಗೆ ಸಜ್ಜಾಗುತ್ತಿದೆ. ವರ್ಷಾಂತ್ಯದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಈ ಇಂಡೋ-ಆಸೀಸ್ ಏಕದಿನ ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಮೊದಲ ಏಕದಿನ ಪಂದ್ಯಕ್ಕಾಗಿ ಮುಂಬೈಗೆ ತಲುಪಿರುವ ಟೀಮ್ ಇಂಡಿಯಾ (Team India) ವಾಂಖೆಡೆಯಲ್ಲಿ ಅಭ್ಯಾಸ ಕೂಡ ಶುರು ಮಾಡಿಕೊಂಡಿದೆ. ಮೊದಲ ಏಕದಿನ ಪಂದ್ಯಕ್ಕೆ ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮಾ ಅಲಭ್ಯರಾಗಿದ್ದು ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವ ವಹಿಸಿಕೊಂಡಿದ್ದಾರೆ.
10 ವರ್ಷಗಳ ಬಳಿಕ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಜಯದೇವ್ ಉನಾದ್ಕಟ್ ಬುಧವಾರ ಬೌಲಿಂಗ್ ಅಭ್ಯಾಸ ನಡೆಸಿದರು. ಇವರ ಜೊತೆಗೆ ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಅವಧಿಯನ್ನು ಮೀಸಲಿರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ ಬೆವರು ಹರಿಸಿದರು. ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಕೀಪರ್ ಇಶಾನ್ ಕಿಶನ್ ಕೂಡ ಇದ್ದರು. ಟೀಮ್ ಇಂಡಿಯಾದ ಪ್ರ್ಯಾಕ್ಟೀಸ್ ಸೆಷನ್ ಬಳಿಕ ಆಸ್ಟ್ರೇಲಿಯ ಕ್ರಿಕೆಟಿಗರೂ ಕೂಡ ಇದೇ ಮೈದಾನದಲ್ಲಿ ಅಭ್ಯಾಸ ನಡೆಸಿದರು.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರು ಬೆನ್ನುನೋವಿನಿಂದಾಗಿ ಶುಕ್ರವಾರದಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಭಾರತದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕೂಡ ಕಡಿಮೆ ಎಂದು ತಿಳಿದುಬಂದಿದೆ. ಅವರು ಪ್ರಸ್ತುತ ವೈದ್ಯಕೀಯ ನೆರವು ಪಡೆಯಲು NCAಗೆ ಮರಳಿದ್ದಾರೆ. ಆದರೆ, ಅವರಿಗೆ ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರಂತೆ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೇ ಎಂಬ ಬಗ್ಗೆ ತಿಳಿದುಬಂದಿಲ್ಲ.
ಕೊಹ್ಲಿ, ಧೋನಿ ಅಲ್ಲವೇ ಅಲ್ಲ; ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದರಲ್ಲಿ ಮೊದಲ ಪಂದ್ಯ ಮಾರ್ಚ್ 17 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದರೆ, ಮಾರ್ಚ್ 19ಕ್ಕೆ ವಿಶಾಖಪಟ್ಟಣಂನ ವೈಎಸ್ಆರ್ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ಹಾಗೂ ಅಂತಿಮ ಮೂರನೇ ಏಕದಿನ ಪಂದ್ಯ ಮಾರ್ಚ್ 22 ರಂದು ಚೆನ್ನೈನ ಎಮ್ಎ ಚಿದಂಬರಂ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿವೆ. ಹಾಗೆಯೇ ಲೈವ್ ಸ್ಟ್ರೀಮಿಂಗ್ ಹಾಟ್ಸ್ಟಾರ್ನಲ್ಲಿ ಲಭ್ಯವಿರಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ/ ಮೊದಲ ಪಂದ್ಯಕ್ಕಿಲ್ಲ),ಇಶಾನ್ ಕಿಶನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕಟ್,
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಜೈ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ