WPL 2023: 11 ಸಿಕ್ಸರ್, 45 ಬೌಂಡರಿ, 305 ರನ್! ಆರ್​ಸಿಬಿಯ ಮ್ಯಾಚ್ ವಿನ್ನರ್ ಬಗ್ಗೆ ನಿಮಗೆಷ್ಟು ಗೊತ್ತು?

ಪೃಥ್ವಿಶಂಕರ

|

Updated on:Mar 16, 2023 | 10:24 AM

RCB: ಪಂಜಾಬ್‌ನಲ್ಲಿ ನಡೆದ ಅಂತರರಾಜ್ಯ ಏಕದಿನ ಪಂದ್ಯಾವಳಿಯಲ್ಲಿ ಕನಿಕಾ ಅಹುಜಾ ಅವರು 122 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 45 ಬೌಂಡರಿ ಒಳಗೊಂಡಂತೆ ಬರೋಬ್ಬರಿ 305 ರನ್ ಬಾರಿಸಿದ್ದರು.

WPL 2023: 11 ಸಿಕ್ಸರ್, 45 ಬೌಂಡರಿ, 305 ರನ್! ಆರ್​ಸಿಬಿಯ ಮ್ಯಾಚ್ ವಿನ್ನರ್ ಬಗ್ಗೆ ನಿಮಗೆಷ್ಟು ಗೊತ್ತು?
ಕನಿಕಾ ಅಹುಜಾ

ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ (RCB) ಮಹಿಳಾ ಪಡೆ ಕೊನೆಗೂ ಜಯದ ನಗೆ ಬೀರಿದೆ. ಯುಪಿ ವಾರಿಯರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ (Smriti Mandhana) ಪಡೆಗೆ 5 ವಿಕೆಟ್​ಗಳ ಭರ್ಜರಿ ಜಯ ಸಿಕ್ಕಿದೆ. ಸತತ 5 ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಭಾಗಶಃ ಹೊರಬಿದ್ದಿರುವ ಆರ್​ಸಿಬಿಗೆ ಈ ಪಂದ್ಯ ಬಹಳ ಮುಖ್ಯವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಪಿ ತಂಡ 19.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 136 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 5 ವಿಕೆಟ್ ಕಳೆದುಕೊಂಡು ಇನ್ನೇರಡು ಓವರ್​ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ತಂಡದ ಪರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಯುವ ಬ್ಯಾಟರ್ ಕನಿಕಾ ಅಹುಜಾ (Kanika Ahuja) ಕೇವಲ 30 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 46 ರನ್ ಚಚ್ಚಿದರು. ಅಂತಿಮವಾಗಿ ಆರ್​ಸಿಬಿ ಗೆಲುವಿಗೆ ರೂವಾರಿ ಎನಿಸಿಕೊಂಡ ಕನಿಕಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು.

ಕೇವಲ 20 ವರ್ಷ ವಯಸ್ಸಿನ ಕ್ರಿಕೆಟರ್ ಆಟಕ್ಕೆ ಇದೀಗ ಕ್ರಿಕೆಟ್ ಲೋಕ ಬೆರಗಾಗಿದ್ದು, ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ವಾಸ್ತವವಾಗಿ ಅಲ್ಪ ಗುರಿ ಬೆನ್ನಟ್ಟಿದ ಆರ್​ಸಿಬಿ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರ್‌ಸಿಬಿಯ ದಿಗ್ಗಜ ಆಟಗಾರ್ತಿಯರಾದ ಸೋಫಿ ಡಿವೈನ್, ಸ್ಮೃತಿ ಮಂಧಾನ, ಅಲಿಸ್ಸಾ ಪೆರ್ರಿ ಅವರನ್ನು ಔಟ್ ಮಾಡುವ ಮೂಲಕ ಯುಪಿ ತಂಡ ಮೇಲುಗೈ ಸಾಧಿಸಿತ್ತು. ಆದರೆ, ಕನಿಕಾ ಅಹುಜಾ ಏಕಾಂಗಿ ಹೋರಾಟ ನಡೆಸಿ ಯುಪಿ ಗೆಲುವಿನ ಕನಸಿಗೆ ಬ್ರೇಕ್ ಹಾಕಿದರು.

IND vs AUS 1st ODI: ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಮೊದಲ ಏಕದಿನ ಯಾವಾಗ?

ಆರ್​ಸಿಬಿಗೆ ಮೊದಲ ಗೆಲುವು ಕೊಟ್ಟ ಕನಿಕಾ

136 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿಗೆ ಎಡಗೈ ಬ್ಯಾಟರ್ ಕನಿಕಾ ಅಹುಜಾ ವರವಾದರು. ಆರಂಭದಲ್ಲಿಯೇ ಪ್ರಮುಖ 4 ವಿಕೆಟ್‌ಗಳನ್ನು ಕೇವಲ 60 ರನ್‌ಗಳಿಗೆ ಆರ್​ಸಿಬಿ ಕಳೆದುಕೊಂಡಿತ್ತು. ಇದರೊಂದಿಗೆ ಆರ್​ಸಿಬಿ ಇನ್ನಿಂಗ್ಸ್​ನ 9 ಓವರ್‌ಗಳು ಆಗಲೇ ಮುಗಿದಿದ್ದವು. ಈ ಕಷ್ಟದ ಸಂದರ್ಭಗಳಲ್ಲಿ ಕನಿಕಾ ತೋರಿದ ವಿವೇಕ ಅದ್ಭುತ. ಹೆಚ್ಚು ಅನುಭವ ಇಲ್ಲದಿದ್ದರೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ಅವರು ಉತ್ತಮ ಇನ್ನಿಂಗ್ಸ್ ಆಡಿದರು.

30 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 46 ರನ್ ಗಳಿಸಿದ ಕನಿಕಾ, ರಿಚಾ ಘೋಷ್ ಅವರೊಂದಿಗೆ 5 ನೇ ವಿಕೆಟ್‌ಗೆ 60 ರನ್ ಜೊತೆಯಾಟವನ್ನು ಹಂಚಿಕೊಂಡರು. ಇದರ ಪರಿಣಾಮ ಆರ್​ಸಿಬಿ ಏಕಾಏಕಿ ಬ್ಯಾಕ್ ಫೂಟ್ ನಿಂದ ಫ್ರಂಟ್ ಫುಟ್​ಗೆ ಬಂದಿತು.

ಆರ್​ಸಿಬಿ ಗೆಲುವನ್ನು ತಾಯಿಗೆ ಸಮರ್ಪಣೆ

ಆರ್​ಸಿಬಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಕನಿಕಾ, ತಂಡದ ಗೆಲುವನ್ನು ತನ್ನ ತಾಯಿಗೆ ಅರ್ಪಿಸಿದರು. ವಾಸ್ತವವಾಗಿ, ಕನಿಕಾ ಇಂದು ಕ್ರಿಕೆಟ್‌ ಆಡಲು ಅವರ ತಾಯಿಯ ಪಾತ್ರವು ಪ್ರಮುಖವಾಗಿದೆ. ಈ ಪಂದ್ಯಕ್ಕೂ ಮೊದಲು ಅನಾರೋಗ್ಯದಿಂದ ಬಳಲುತ್ತಿದ್ದ ಕನಿಕಾ, ಹಿಂದಿನ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಚೇತರಿಸಿಕೊಂಡು ತಂಡ ಸೇರಿಕೊಂಡ ಅಹುಜಾ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಆರ್​ಸಿಬಿಯ ಮೊದಲ ಗೆಲುವಿಗೆ ದೊಡ್ಡ ಕಾರಣರಾದರು.

11 ಸಿಕ್ಸರ್, 45 ಬೌಂಡರಿಗಳೊಂದಿಗೆ ತ್ರಿಶತಕ

ಅಂದಹಾಗೆ, ಆರ್​ಸಿಬಿ ಪರ ಸ್ಫೋಟಕ ಇನ್ನಿಂಗ್ಸ್‌ ಆಡಿದ ಕನಿಕಾ ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆಯನ್ನೂ ಬರೆದಿದ್ದಾರೆ. ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ಅಂತರರಾಜ್ಯ ಏಕದಿನ ಪಂದ್ಯಾವಳಿಯಲ್ಲಿ ಅವರು 122 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 45 ಬೌಂಡರಿ ಒಳಗೊಂಡಂತೆ ಬರೋಬ್ಬರಿ 305 ರನ್ ಬಾರಿಸಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada