IND vs ENG: ಮೂವರು ಔಟ್; 5ನೇ ಟೆಸ್ಟ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾ

Team India Playing XI: ಮ್ಯಾಂಚೆಸ್ಟರ್ ಪಂದ್ಯ ಡ್ರಾ ಆದ ನಂತರ, ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾದ ಒತ್ತಡದಲ್ಲಿದೆ. ಇಂಜುರಿಯಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದರೆ, ಶಾರ್ದೂಲ್ ಠಾಕೂರ್ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆಗಳಿವೆ. ಗಾಯದಿಂದ ಚೇತರಿಸಿಕೊಂಡಿರುವ ಆಕಾಶ್ ದೀಪ್ ಮತ್ತು ಅರ್ಶ್‌ದೀಪ್ ಸಿಂಗ್ ತಂಡಕ್ಕೆ ಸೇರಿಸುವ ಸಾಧ್ಯತೆಯಿದೆ.

IND vs ENG: ಮೂವರು ಔಟ್; 5ನೇ ಟೆಸ್ಟ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾ
Team India

Updated on: Jul 28, 2025 | 9:10 PM

ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಟೀಂ ಇಂಡಿಯಾ (Team India) ಇದೀಗ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಏಕೆಂದರೆ ಈ ಪಂದ್ಯವನ್ನು ಸೋತರೆ, ಸರಣಿ ಇಂಗ್ಲೆಂಡ್‌ ಪಾಲಾಗಲಿದೆ. ಗೆದ್ದರೆ ಸರಣಿ ಸಮಬಲದೊಂದಿಗೆ ಕೊನೆಗೊಳ್ಳಲಿದೆ. ಹೀಗಾಗಿ ಸರಣಿ ಸೋಲನ್ನು ತಪ್ಪಿಸುವ ಸಲುವಾಗಿ ಟೀಂ ಇಂಡಿಯಾ ತನ್ನ ಬಲಿಷ್ಠ ಪ್ಲೇಯಿಂಗ್ 11 ಅನ್ನು ಕಟ್ಟಿಕೊಂಡು ಓವಲ್ (Oval Test Match) ಪಂದ್ಯಕ್ಕೆ ಸಜ್ಜಾಗಬೇಕಿದೆ. ಆದರೆ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡುವ ಹನ್ನೊಂದರ ಬಳಗವನ್ನು ಕಟ್ಟುವುದು ನಾಯಕ ಗಿಲ್ ಹಾಗೂ ಕೋಚ್ ಗಂಭೀರ್​ಗೆ ದೊಡ್ಡ ಸವಾಲಾಗಿದೆ. ಅಲ್ಲದೆ ಗಾಯಾಳುಗಳ ಬದಲಿಯಾಗಿ ಬಂದ ಆಟಗಾರರ ಪ್ರದರ್ಶನ ಕೂಡ ತೀರ ಕಳಪೆಯಾಗಿರುವುದು ತಂಡದ ತಲೆನೋವನ್ನು ಹೆಚ್ಚಿಸಿದೆ.

ಸರಣಿಯಿಂದ ಪಂತ್ ಔಟ್

ಇದೀಗ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಕೊನೆಯ ಟೆಸ್ಟ್ ಜುಲೈ 31 ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು, ಭಾರತದ ಪ್ಲೇಯಿಂಗ್-11 ರಲ್ಲಿಯೂ ಬದಲಾವಣೆಗಳು ಖಚಿತ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಆಡಿದ ಮೂವರು ಆಟಗಾರರು ಕೊನೆಯ ಟೆಸ್ಟ್​ನಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇದರಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಹೆಸರೂ ಸೇರಿದ್ದು, ಪಂತ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಧ್ರುವ್ ಜುರೆಲ್ ಅವರ ಸ್ಥಾನದಲ್ಲಿ ಅವಕಾಶ ಪಡೆಯುತ್ತಾರೆ.

ಶಾರ್ದೂಲ್-ಅನ್ಶುಲ್​ಗೆ ಕೋಕ್

ರಿಷಭ್ ಪಂತ್ ಹೊರತುಪಡಿಸಿ ಶಾರ್ದೂಲ್ ಠಾಕೂರ್ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ಕೈಬಿಡುವುದು ಖಚಿತ. ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 152 ಓವರ್‌ಗಳನ್ನು ಬೌಲ್ ಮಾಡಿತ್ತು. ಆ ಇನ್ನಿಂಗ್ಸ್‌ನಲ್ಲಿ ಶಾರ್ದೂಲ್ ಕೇವಲ 11 ಓವರ್‌ಗಳನ್ನು ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದೆ 55 ರನ್‌ಗಳನ್ನು ಬಿಟ್ಟುಕೊಟ್ಟರು. ಇವರ ಜೊತೆಗೆ 24 ವರ್ಷದ ಅನ್ಶುಲ್ ಕಾಂಬೋಜ್ ಕೂಡ ನಿಷ್ಪರಿಣಾಮಕಾರಿಯಾಗಿದ್ದರು. ವಿಶೇಷವಾಗಿ ಅವರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ, ಅವರ ಸರಾಸರಿ ವೇಗ ಕೇವಲ 129 ಕಿ.ಮೀ. ಆಗಿತ್ತು, ಇದು ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಹೀಗಾಗಿ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಮಿಂಚಿದ್ದ ಬೌಲರ್ ಆಕಾಶ್ ದೀಪ್ ಫಿಟ್ ಆಗಿದ್ದು, ಅರ್ಶ್‌ದೀಪ್ ಸಿಂಗ್ ಕೂಡ ಕೈ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅನ್ಶುಲ್ ಹಾಗೂ ಶಾರ್ದೂಲ್ ಬದಲಿಗೆ ಆಕಾಶ್ ಹಾಗೂ ಅರ್ಶ್​ದೀಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಭಾರತ ಸಂಭಾವ್ಯ ಪ್ಲೇಯಿಂಗ್ 11: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್, ಆಕಾಶ್ ದೀಪ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 pm, Mon, 28 July 25