ಪಂದ್ಯ ನಿಲ್ಲಿಸಿ ಟೀಮ್ ಇಂಡಿಯಾ ಆಟಗಾರರ ಶತಕ ತಪ್ಪಿಸಲು ಮುಂದಾಗಿದ್ದ ಬೆನ್ ಸ್ಟೋಕ್ಸ್
India vs England Test: ಇಂಗ್ಲೆಂಡ್ ನಾಯಕನ ಕೋರಿಕೆಯನ್ನು ತಿರಸ್ಕರಿಸಿದ ಜಡೇಜಾ ಹಾಗೂ ಸುಂದರ್ 386 ರನ್ ಗಳಿಂದ ಟೀಮ್ ಇಂಡಿಯಾ ಸ್ಕೋರ್ ಅನ್ನು 425 ಕ್ಕೆ ಕೊಂಡೊಯ್ದರು. ಈ ಮೂಲಕ ರವೀಂದ್ರ ಜಡೇಜಾ ಅಜೇಯ 107 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ (101) ಚೊಚ್ಚಲ ಶತಕ ಪೂರೈಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 358 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ 669 ರನ್ ಕಲೆಹಾಕಿತು. ಇತ್ತ ದ್ವಿತೀಯ ಇನಿಂಗ್ಸ್ ನಲ್ಲಿ 311 ರನ್ ಗಳ ಹಿನ್ನಡೆ ಪಡೆದ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ಯೋಜನೆ ರೂಪಿಸಿದೆ.
ಅದರಂತೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಭಾರತ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದ್ದರು. ಇನ್ನು ನಿರ್ಣಾಯಕವಾಗಿದ್ದ 5ನೇ ದಿನದಾಟದಲ್ಲಿ ಕೆಎಲ್ ರಾಹುಲ್ 90 ರನ್ ಗಳಿಸಿ ಔಟಾದರೆ, ಶುಭ್ ಮನ್ ಗಿಲ್ 102 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಅಷ್ಟೇ ಅಲ್ಲದೇ ಮೂರನೇ ಸೆಷನ್ ವರೆಗೂ ವಿಕೆಟ್ ಬೀಳದಂತೆ ನೋಡಿಕೊಂಡರು.
ಇತ್ತ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂಬುದು ಖಚಿತವಾಗುತ್ತಿದ್ದಂತೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮ್ಯಾಚ್ ನಿಲ್ಲಿಸಲು ಮುಂದಾದರು. ಅಲ್ಲದೆ ಈ ಬಗ್ಗೆ ಅಂಪೈರ್ ಜೊತೆ ಚರ್ಚಿಸಿದ್ದಾರೆ. ಅಂಪೈರ್ ಟೀಮ್ ಇಂಡಿಯಾ ಬ್ಯಾಟರ್ ಗಳ ಜೊತೆ ಕೇಳಬೇಕೆಂದು ಸೂಚಿಸಿದ್ದಾರೆ.
ಅದರಂತೆ ಭಾರತೀಯ ಬ್ಯಾಟರ್ ಗಳಿಗೆ ಶೇಕ್ ಹ್ಯಾಂಡ್ ನೀಡಲು ಬೆನ್ ಸ್ಟೋಕ್ಸ್ ಮುಂದಾದರು. ಆದರೆ ಹಸ್ತಲಾಘವ ನೀಡಿ ಪಂದ್ಯ ನಿಲ್ಲಿಸಲು ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ನಿರಾಕರಿಸಿದರು.
ಏಕೆಂದರೆ ಈ ಹಂತದಲ್ಲಿ ರವೀಂದ್ರ ಜಡೇಜಾ 89 ರನ್ ಗಳಿಸಿದ್ದರೆ, ವಾಷಿಂಗ್ಟನ್ ಸುಂದರ್ 80 ರನ್ ಬಾರಿಸಿದ್ದರು. ಇತ್ತ ಟೀಮ್ ಇಂಡಿಯಾ ಬ್ಯಾಟರ್ ಗಳು ಶತಕದ ಸಮೀಪಕ್ಕೆ ತಲುಪುತ್ತಿದ್ದಂತೆ ಪಂದ್ಯವನ್ನು ನಿಲ್ಲಿಸಲು ಬೆನ್ ಸ್ಟೋಕ್ಸ್ ಮುಂದಾಗಿದ್ದರು.
ಆದರೆ ಇಂಗ್ಲೆಂಡ್ ನಾಯಕನ ಕೋರಿಕೆಯನ್ನು ತಿರಸ್ಕರಿಸಿದ ಜಡೇಜಾ ಹಾಗೂ ಸುಂದರ್ 386 ರನ್ ಗಳಿಂದ ಟೀಮ್ ಇಂಡಿಯಾ ಸ್ಕೋರ್ ಅನ್ನು 425 ಕ್ಕೆ ಕೊಂಡೊಯ್ದರು. ಈ ಮೂಲಕ ರವೀಂದ್ರ ಜಡೇಜಾ ಅಜೇಯ 107 ರನ್ ಬಾರಿಸಿದರೆ, ವಾಷಿಂಗ್ಟನ್ ಸುಂದರ್ (101) ಚೊಚ್ಚಲ ಶತಕ ಪೂರೈಸಿದರು.
ಇತ್ತ ವಾಷಿಂಗ್ಟನ್ ಸುಂದರ್ ಶತಕ ಪೂರೈಸುತ್ತಿದ್ದಂತೆ ಬೆನ್ ಸ್ಟೋಕ್ಸ್ ಮ್ಯಾಚ್ ಕಾಲ್ ಆಫ್ ಗೆ ಮನವಿ ಮಾಡಿದ್ದಾರೆ. ಈ ವೇಳೆ ಇಂಗ್ಲೆಂಡ್ ನಾಯಕನ ಮನವಿಯನ್ನು ಅಂಗೀಕರಿಸಿದ ಟೀಮ್ ಇಂಡಿಯಾ ಬ್ಯಾಟರ್ಗಳು ದ್ವಿತೀಯ ಇನಿಂಗ್ಸ್ ಅನ್ನು ಅಂತ್ಯಗೊಳಿಸಿದರು. ಇದರೊಂದಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.

