IND vs NZ: ವಿಶ್ವ ವಿಜೇತ ಭಾರತಕ್ಕೆ ದಾಖಲೆಯ ಮೂರನೇ ಟಿ20 ವಿಶ್ವಕಪ್ ಕಿರೀಟ
Team India Retains T20 World Cup Title: ಹಾಲಿ ಚಾಂಪಿಯನ್ ಟೀಂ ಇಂಡಿಯಾ 2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಕಿವೀಸ್ ವಿರುದ್ಧ ಭಾರತದ ಮೊದಲ ಗೆಲುವು ಇದಾಗಿದೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ 255 ರನ್‌ಗಳ ಬೃಹತ್ ಮೊತ್ತ ಗಳಿಸಿತು. ನಂತರ ಭಾರತೀಯ ಬೌಲರ್‌ಗಳು ಕಿವೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಿ ಐತಿಹಾಸಿಕ ಗೆಲುವಿಗೆ ಕಾರಣರಾದರು.

2024 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ (T20 World Cup) ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಹಿಡಿದು ಇಲ್ಲಿಗೆ 617 ದಿನಗಳು ಕಳೆದಿವೆ. ಇದೀಗ ಈ 617 ದಿನಗಳ ನಂತರ ಹಾಲಿ ಚಾಂಪಿಯನ್ ಟೀಂ ಇಂಡಿಯಾ (Team India) ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಹಮದಾಬಾದ್ನ ಮೋದಿ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಟೀಂ ಇಂಡಿಯಾ (India vs New Zealand) ತನ್ನ ಮೂರನೇ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ವಾಸ್ತವವಾಗಿ ಈ ಆವೃತ್ತಿಯಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡಿ ಫೈನಲ್ಗೇರಿದ್ದವು. ಹೀಗಾಗಿ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿತ್ತು. ಇದಕ್ಕೆ ಕಾರಣವೂ ಇತ್ತು. ಅದೇನೆಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ, ಕಿವೀಸ್ ವಿರುದ್ಧ ಗೆದ್ದೇ ಇರಲಿಲ್ಲ. ಹೀಗಾಗಿ ಅದೊಂದು ಭಯದೊಂದಿಗೆ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾ ಪಂದ್ಯದ ಆರಂಭದಿಂದಲೇ ಕಿವೀಸ್ ಮೇಲೆ ಸವಾರಿ ಮಾಡಿತು. ಇದರ ಪರಿಣಾಮವಾಗಿ ಭಾರತದ ಮುಂದೆ ಮಂಡಿಯೂರಿದ ಕಿವೀಸ್, ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಮೊದಲ ಸೋಲು ಅನುಭವಿಸುವುದರ ಜೊತೆಗೆ ಚಾಂಪಿಯನ್ ಪಟ್ಟದಿಂದಲೂ ವಂಚಿತವಾಯಿತು.
ಭಾರತಕ್ಕೆ ಸ್ಫೋಟಕ ಆರಂಭ
ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಕಿವೀಸ್ ಬೌಲರ್ಗಳನ್ನು ಮೊದಲ ಓವರ್ನಿಂದಲೇ ತರಾಟೆಗೆ ತೆಗೆದುಕೊಂಡ ಟೀಂ ಇಂಡಿಯಾ ಬ್ಯಾಟರ್ಗಳು ಆರಂಭದಲೇ ಕಿವೀಸ್ ಪಡೆಯನ್ನು ಪಂದ್ಯದಿಂದ ಹೊರಹಾಕಿದರು. ಉಳಿದ ಕೆಲಸವನ್ನು ತಂಡದ ಬೌಲರ್‌ಗಳು ಮಾಡಿ ಮೂಗಿಸಿದರು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಇಡೀ ವಿಶ್ವಕಪ್‌ನಲ್ಲಿ ರನ್ ಬರ ಎದುರಿಸಿದ್ದ ಅಭಿಷೇಕ್ ಶರ್ಮಾ ಕೊನೆಗೂ ಲಯ ಕಂಡುಕೊಳ್ಳುವುದರೊಂದಿಗೆ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಸಂಜು ಹ್ಯಾಟ್ರಿಕ್ ಅರ್ಧಶತಕ
ಇತ್ತ ಎಂದಿನಂತೆ ತನ್ನ ಅಮೋಘ ಫಾರ್ಮ್ ಮುಂದುವರೆಸಿದ ಸಂಜು ಸ್ಯಾಮ್ಸನ್, ಸತತ ಮೂರನೇ ಪಂದ್ಯದಲ್ಲಿ ಅರ್ಧಶತಕ ಪೂರೈಸುವುದರ ಮೂಲಕ ಹ್ಯಾಟ್ರಿಕ್ ಅರ್ಧಶತಕ ದಾಖಲಿಸಿದರು. ಈ ಜೋಡಿಯ ಅಬ್ಬರದಿಂದಾಗಿ ಟೀಂ ಇಂಡಿಯಾ ಮೊದಲ ವಿಕೆಟ್ಗೆ 98 ರನ್ ಕಲೆಹಾಕಿತು. ಇದಕ್ಕೆ ತೆಗೆದುಕೊಂಡಿದ್ದು ಕೇವಲ 43 ಎಸೆತಗಳು ಮಾತ್ರ. 52 ರನ್ ಬಾರಿಸಿದ ಅಭಿಷೇಕ್ ಶರ್ಮಾ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆನಂತರ ಬಂದ ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಜೊತೆಗೂಡಿ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಇವರಿಬ್ಬರು ಶತಕದ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ತಂಡವನ್ನು 200 ರನ್‌ಗಳ ಗಡಿ ದಾಟಿಸಿದರು.
ದಾಖಲೆಯ 255 ರನ್‌ಗಳ ಗುರಿ
ಕೇವಲ 15.1 ಓವರ್ಗಳಲ್ಲಿ ತಂಡವನ್ನು 200 ರನ್‌ಗಳ ಗಡಿ ದಾಟಿಸಿದ ಈ ಜೋಡಿ ಸ್ಯಾಮ್ಸನ್ ವಿಕೆಟ್ ಪತನದೊಂದಿಗೆ ಬೇರ್ಪಟ್ಟಿತು. ಸತತ ಮೂರನೇ ಪಂದ್ಯದಲ್ಲೂ ಶತಕ ವಂಚಿತರಾದ ಸಂಜು ಸ್ಯಾಮ್ಸನ್ 89 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಸಂಜು ಬೆನ್ನಲ್ಲೇ ಇಶಾನ್ ಕಿಶನ್ ಕೂಡ 54 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿಮ್ಮಿ ನಿಶಮ್ ಎಸೆದ ಈ ಓವರ್ನಲ್ಲಿ ಭಾರತ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು. ಆದ್ದರಿಂದ ತಂಡದ ರನ್ ವೇಗಕ್ಕೆ ಬ್ರೇಕ್ ಬಿದ್ದಿತು. ಆದಾಗ್ಯೂ ಕೊನೆಯ ಓವರ್ನಲ್ಲಿ ಶಿವಂ ದುಬೆ (26 ರನ್) ಅಬ್ಬರಿಸುವ ಮೂಲಕ ತಂಡವನ್ನು 255 ರನ್ಗಳಿಗೆ ಕೊಂಡೊಯ್ದರು.
ಆರಂಭದಲ್ಲೇ ಸೋಲೊಪ್ಪಿಕೊಂಡ ಕಿವೀಸ್
ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ಗೆ ಮೊದಲ ಓವರ್ನಲ್ಲೇ ಆಘಾತ ಎದುರಾಗುವುದರಲಿತ್ತು. ಆದರೆ ಶಿವಂ ದುಬೆ, ಫಿಲ್ ಆಲೆನ್ ಅವರ ಸುಲಭ ಕ್ಯಾಚ್ ಕೈಚೆಲಿದರು. ಸೆಮಿಫೈನಲ್‌ನಲ್ಲಿ ದಾಖಲೆಯ ಶತಕ ಬಾರಿಸಿದ್ದ ಆಲೆನ್ ಕ್ಯಾಚ್ ಬಿಟ್ಟಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿತು. ಇದಕ್ಕೆ ಪೂರಕವಾಗಿ ಸೈಫರ್ಟ್ ಮುಂದಿನ ಓವರ್ನಲ್ಲಿ ಬರೋಬ್ಬರಿ 21 ರನ್ ಬಾರಿಸಿದರು. ಇದು ತಂಡವನ್ನು ಒತ್ತಡಕ್ಕೆ ತಳ್ಳಿದಂತೆ ಕಾಣುತ್ತಿತ್ತು. ಆದರೆ ಮೂರನೇ ಓವರ್ನಲ್ಲಿ ದಾಳಿಗಿಳಿದ ಅಕ್ಷರ್ ಆಲೆನ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ನಂತರ ಬಂದ ರಚಿನ್ ರವೀಂದ್ರಗೆ ಜಸ್ಪ್ರೀತ್ ಬುಮ್ರಾ ಮೊದಲ ಎಸೆತದಲ್ಲೇ ಪೆವಿಲಿಯನ್ ದಾರಿ ತೋರಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಫ್ಸ್ ಆಟವೂ 5 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ಕಿವೀಸ್ 47 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು.
IND vs NZ: 18 ಎಸೆತಗಳಲ್ಲಿ ಅರ್ಧಶತಕ; ಫೈನಲ್‌ನಲ್ಲಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ
ಬೂಮ್ ಬೂಮ್ ಬುಮ್ರಾ ಮ್ಯಾಜಿಕ್
ತಂಡದ ಪರ ಏಕಾಂಗಿ ಹೋರಾಟ ನೀಡಿದ ಆರಂಭಿಕ ಟಿಮ್ ಸೈಫರ್ಟ್ 26 ಎಸೆತಗಳಲ್ಲಿ 52 ರನ್ ಬಾರಿಸಿ ಏಕಾಂಗಿ ಹೋರಾಟ ನೀಡಿದರು. ಆದರೆ ಅವರು ಕೂಡ ವರುಣ್ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಕಿಶನ್ಗೆ ಕ್ಯಾಚಿತ್ತು ಔಟಾದರು. ಸೈಫರ್ಟ್ ಔಟಾಗುತ್ತಿದ್ದಂತೆ ಕಿವೀಸ್ ಸೋಲು ಖಚಿತವಾಯಿತು. ಅದರಂತೆ ಆ ಬಳಿಕ ಬಂದ ಕಿವೀಸ್ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಒಂದು ತುದಿಯಲ್ಲಿ ಹೋರಾಟ ನೀಡಲು ಯತ್ನಿಸಿದ ನಾಯಕ ಸ್ಯಾಂಟ್ನರ್ 43 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕಿವೀಸ್ 159 ರನ್ಗಳಿಸಲಷ್ಟೇ ಶಕ್ತವಾಗಿ 96 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 pm, Sun, 8 March 26
