IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗಿಲ್ಲ ಸ್ಥಾನ

India Test squad: ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಶುಭ್​ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದು, ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ರಿಷಭ್ ಪಂತ್ ಉಪನಾಯಕನಾಗಿ ಮರಳಿದ್ದಾರೆ. ನವೆಂಬರ್ 14 ರಿಂದ ಸರಣಿ ಪ್ರಾರಂಭವಾಗಲಿದೆ. ಈ ಸರಣಿಯಿಂದ ಎನ್. ಜಗದೀಶನ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡಲಾಗಿದೆ.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಕನ್ನಡಿಗನಿಗಿಲ್ಲ ಸ್ಥಾನ
Team India Test

Updated on: Nov 05, 2025 | 6:56 PM

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಐದು ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಇದೀಗ ಆ ಟೆಸ್ಟ್ ಸರಣಿಗೆ ಬಿಸಿಸಿಐ (BCCI) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಈ ಸರಣಿಯು ನವೆಂಬರ್ 14 ರಂದು ಪ್ರಾರಂಭವಾಗಲಿದ್ದು, ಎಂದಿನಂತೆ ಶುಭ್​ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದಿಂದಾಗಿ ಕಳೆದ ತವರು ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದ ರಿಷಭ್ ಪಂತ್ ತಂಡವನ್ನು ಕೂಡಿಕೊಂಡಿದ್ದು, ಉಪನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್ ಅನುಪಸ್ಥಿತಿಯಲ್ಲಿ ರವೀಂದ್ರ ಜಡೇಜಾ ತಂಡದ ಉಪನಾಯಕರಾಗಿದ್ದರು. ಇದೀಗ ಅವರು ಆಟಗಾರನಾಗಿ ತಂಡದಲ್ಲಿ ಆಡಲಿದ್ದಾರೆ.

ತಂಡಕ್ಕೆ ಮರಳಿದ ಸ್ಟಾರ್ ಆಟಗಾರ

ಮೇಲೆ ಹೇಳಿದಂತೆ ಈ ಸರಣಿಗೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಉಪನಾಯಕನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಪಂತ್ ಗಾಯಗೊಂಡಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಆಡಲಾಗಲಿಲ್ಲ. ಆದಾಗ್ಯೂ, ಅವರು ಈಗ ಸಂಪೂರ್ಣವಾಗಿ ಫಿಟ್ ಆಗಿದ್ದು, ತಂಡಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿನ ಸರಣಿಯಲ್ಲಿ ತಂಡದ ಭಾಗವಾಗಿರದ ಆಕಾಶ್ ದೀಪ್ ಕೂಡ ತಂಡಕ್ಕೆ ಮರಳಿದ್ದಾರೆ. ಉಳಿದ ಆಯ್ಕೆಯಾದ ಆಟಗಾರರು ಹಿಂದಿನ ಟೆಸ್ಟ್ ಸರಣಿಯಲ್ಲಿಯೂ ಆಡಿದ್ದಾರೆ.

ಈ ಇಬ್ಬರು ಆಟಗಾರರು ಔಟ್

ಏತನ್ಮಧ್ಯೆ, ಕಳೆದ ಟೆಸ್ಟ್ ಸರಣಿಯ ಭಾಗವಾಗಿದ್ದ ಇಬ್ಬರು ಆಟಗಾರರನ್ನು ಈ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಈ ಇಬ್ಬರು ಆಟಗಾರರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನ್. ಜಗದೀಶನ್ ಮತ್ತು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ. ಇಬ್ಬರಿಗೂ ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಒಂದು ಪಂದ್ಯ ಆಡಲು ಅವಕಾಶ ಸಿಗಲಿಲ್ಲ, ಇದೀಗ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಈ ಸರಣಿಯ ಮೊದಲ ಪಂದ್ಯ ನವೆಂಬರ್ 14 ರಿಂದ 18 ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಎರಡೂ ತಂಡಗಳು ಏಕದಿನ ಸರಣಿಯಲ್ಲಿ ಆಡಲಿವೆ.

ಟೆಸ್ಟ್ ಸರಣಿಗೆ ಭಾರತ ತಂಡ : ಶುಭ್​ಮನ್ ಗಿಲ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್, ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Wed, 5 November 25