IND vs ENG: ನಿದ್ದೆ ಬರಿಸುವ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ನಿದ್ದೆಗೆಡಿಸುತ್ತಿರುವ ಆಂಗ್ಲ ಬ್ಯಾಟರ್ಸ್
India vs England: ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 224 ರನ್‌ಗಳಿಗೆ ಆಲೌಟ್ ಆಗಿದೆ. ಇತ್ತ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿ ಭಾರತದ ಬೌಲರ್‌ಗಳನ್ನು ಹೈರಾಣು ಮಾಡಿದರು. ಭಾರತದ ಆರಂಭಿಕ ಆಟಗಾರರಾದ ಜೈಸ್ವಾಲ್, ರಾಹುಲ್ ಮತ್ತು ಸುದರ್ಶನ್ ನಿರಾಶಾದಾಯಕ ಪ್ರದರ್ಶನ ನೀಡಿದರು. ಇದಕ್ಕೆ ತದ್ವಿರುದ್ಧವಾಗಿ ಇಂಗ್ಲೆಂಡ್ ಆರಂಭಿಕರು ಉತ್ತಮ ಬ್ಯಾಟಿಂಗ್ ಮಾಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದಾರೆ.

ಓವಲ್ ಟೆಸ್ಟ್ನಲ್ಲಿ (Oval Test) ಟೀಂ ಇಂಡಿಯಾವನ್ನು 224 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಆರಂಭಿಕರು ಭಾರತದ ಬೌಲರ್‌ಗಳನ್ನು ಮೊದಲ 10 ಓವರ್ಗಳಲ್ಲೇ ಹೈರಾಣಾಗಿಸಿದ್ದಾರೆ. ಮೊದಲ ಓವರ್ನಿಂದಲೂ ಬೌಂಡರಿಗಳ ಮಳೆಗರೆಯುತ್ತಿರುವ ಇಂಗ್ಲೆಂಡ್ ಆರಂಭಿಕರು 7 ರನ್ಗಳ ಸರಸಾರಿಯಲ್ಲಿ ರನ್ ಕಲೆಹಾಕುತ್ತಿದ್ದಾರೆ. ಇದು ನಾಯಕ ಶುಭ್ಮನ್ ಗಿಲ್ರನ್ನು (Shubman Gill) ಚಿಂತೆಗೀಡುಮಾಡಿದೆ. ವಾಸ್ತವವಾಗಿ ಪಂದ್ಯ ಆರಂಭಕ್ಕೆ ಮುನ್ನ ಓವಲ್‌ನಲ್ಲಿ ರನ್ ಗಳಿಸುವುದು ಕಷ್ಟ ಎನ್ನಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಟೀಂ ಇಂಡಿಯಾ (Team India) ಬ್ಯಾಟರ್ಗಳು ಕೂಡ ನಿದ್ದೆಬರಿಸುವಂತಹ ಬ್ಯಾಟಿಂಗ್ ಮಾಡಿದ್ದರು. ಆದರೆ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಆರಂಭಿಕರು ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ.
ಭಾರತಕ್ಕೆ ಕಳಪೆ ಆರಂಭ
ವಾಸ್ತವವಾಗಿ ಓವಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೈಸ್ವಾಲ್ 4ನೇ ಓವರ್ನಲ್ಲೇ ಔಟಾದರು. ಇಡೀ ಪ್ರವಾಸದಲ್ಲಿ ಜೈಸ್ವಾಲ್ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಕೊನೆಯ ಟೆಸ್ಟ್ನಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಲ್ಲವನ್ನು ಜೈಸ್ವಾಲ್ ಹುಸಿಗೊಳಿಸಿದರು. ಆರಂಭದಲ್ಲಿ ಹೊಡಿಬಡಿ ಆಟವಾಡುವ ಜೈಸ್ವಾಲ್ ಹೊದಬಳಿಕವಂತೂ ಭಾರತದ ಸ್ಕೋರ್ ಬೋರ್ಡ್ ನಿಂತ ನೀರಾಯಿತು.
ಆಮೆಗತಿಯ ಬ್ಯಾಟಿಂಗ್
ವಿಕೆಟ್ನಿಂದ ಹೊರಹೋಗುವ ಚೆಂಡುಗಳನ್ನು ಬಿಡುವುದನ್ನೇ ಕಾಯಕ ಮಾಡಿಕೊಂಡ ರಾಹುಲ್ ಹಾಗೂ ಸುದರ್ಶನ್ ರನ್ ಕಲೆಹಾಕುವುದನ್ನೇ ಮರೆತರು. ಇದಕ್ಕೆ ಪೂರಕವಾಗಿ ರಾಹುಲ್ ಬರೋಬ್ಬರಿ 40 ಎಸೆತಗಳನ್ನು ಎದುರಿಸಿ ಕೇವಲ 14 ರನ್ ಬಾರಿಸಿದರೆ, ಇತ್ತ ಸಾಯಿ ಸುದರ್ಶನ್ ಬರೋಬ್ಬರಿ 108 ಎಸೆತಗಳನ್ನು ಎದುರಿಸಿ 38 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ವೇಳೆ ಇವರಿಬ್ಬರ ಬ್ಯಾಟ್ನಿಂದ ಕ್ರಮವಾಗಿ 1 ಮತ್ತು 6 ಬೌಂಡರಿಗಳಷ್ಟೇ ಸಿಡಿದವು. ಹೀಗಾಗಿ ಭಾರತ ತಂಡ ಮೊದಲ 10 ಓವರ್ಗಳಲ್ಲಿ ಗಳಿಸಿದ್ದು ಕೇವಲ 33 ರನ್. ಇದರಲ್ಲಿ 9ನೇ ಓವರ್ನಲ್ಲಿ ಜೋಶ್ ಟಂಗ್ ವೈಡ್ ಮೂಲಕ 11 ರನ್ ನೀಡದಿದ್ದರೆ ತಂಡದ ಮೊತ್ತ ಕೇವಲ 23 ರನ್ಗಳಾಗಿರುತ್ತಿದ್ದವು.
ಕೇವಲ 224 ರನ್‌ಗಳಿಗೆ ಆಲೌಟ್
ಇದು ರಾಹುಲ್ ಸುದರ್ಶನ್ ಕಥೆ ಮಾತ್ರವಲ್ಲ. ಇವರಿಬ್ಬರ ಬಳಿಕ ಬಂದ ಎಲ್ಲಾ ಬ್ಯಾಟ್ಸ್ಮನ್ಗಳ ಕಥೆಯೂ ಇದೆ. ವಾಸ್ತವವಾಗಿ ಓವಲ್ ಪಿಚ್ನಲ್ಲಿ ಸಮಯ ಕಳೆದರೆ ದೀರ್ಘ ಇನ್ನಿಂಗ್ಸ್ ಆಡಬಹುದು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಹೀಗಿರುವಾಗ ಬ್ಯಾಟರ್ಗಳು ಚೆಂಡುಗಳನ್ನು ಬಿಡುವುದರ ಜೊತೆಗೆ ರನ್ ಕಲೆಹಾಕುವುದನ್ನು ಮುಂದುವರೆಸಬೇಕು. ಆದರೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ರನ್ ಕಲೆಹಾಕುವುದರ ಕಡೆಗೆ ನೋಡಲೇ ಇಲ್ಲ. ಇದರ ಜೊತೆಗೆ ನಿಯಮಿತ ಅಂತರದಲ್ಲಿ ವಿಕೆಟ್ ಕೈಚೆಲ್ಲಿತು. ಹೀಗಾಗಿ ತಂಡ 4 ಸೆಷನ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ ಕಲೆಹಾಕಿದ್ದು ಮಾತ್ರ ಕೇವಲ 224 ರನ್.
IND vs ENG: ಕರುಣ್ ನಾಯರ್ ಅರ್ಧಶತಕ; 224 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್
ಆಂಗ್ಲ ಆರಂಭಿಕರ ಆರ್ಭಟ
ಇದಕ್ಕೆ ತದ್ವಿರುದ್ಧವಾಗಿ ಓವಲ್ ಪಿಚ್ನಲ್ಲಿ ಏನು ಮಾಡಬೇಕು ಎಂಬುದನ್ನು ಕಂಠಪಾಠ ಮಾಡಿಕೊಂಡು ಬಂದಂತೆ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡದ ಆರಂಭಿಕರು ಮೊದಲ ಓವರ್ನಿಂದಲೂ ರನ್ ಕಲೆಹಾಕುವುದರ ಕಡೆಗೆ ಗಮನ ಹರಿಸಿದರು. ಇದಕ್ಕೆ ಉದಾಹರಣೆ ಎಂಬಂತೆ ಇಂಗ್ಲೆಂಡ್ ತನ್ನ ಮೊದಲ ವಿಕೆಟ್ ಅನ್ನು 13ನೇ ಓವರ್ನಲ್ಲಿ ಕಳೆದುಕೊಂಡಿತು. ಈ ಓವರ್ಗೂ ಮುನ್ನ ಮುಗಿದಿದ್ದ ಪ್ರತಿ ಓವರ್ನಲ್ಲೂ ಇಂಗ್ಲೆಂಡ್ ತಂಡ ಬೌಂಡರಿ ಕಲೆಹಾಕಿತು. ಒಂದೆಡೆ ಭಾರತದ ಆಟಗಾರರು ವಿಕೆಟ್ನಿಂದ ಹೊರಹೋಗುವ ಚೆಂಡುಗಳನ್ನು ಬಿಡುವ ಕೆಲಸ ಮಾಡಿದರೆ, ಇತ್ತ ಆಂಗ್ಲ ಆರಂಭಿಕರು ತಮ್ಮ ಆಕ್ರಮಣಕಾರಿ ಶೈಲಿಯಲ್ಲೇ ಬ್ಯಾಟ್ ಬೀಸಿದರು.
15 ಓವರ್ಗಳಲ್ಲಿ 100 ರನ್ ಪೂರ್ಣ
ಹೀಗಾಗಿ ಮೊದಲ ವಿಕೆಟ್ಗೆ 13 ಓವರ್ಗಳಲ್ಲಿ 92 ರನ್ಗಳ ಜೊತೆಯಾಟ ಬಂತು. ಇದರೊಂದಿಗೆ ತಂಡ 15ನೇ ಓವರ್ನಲ್ಲೇ 100 ರನ್ಗಳ ಗಡಿ ದಾಟಿತು. ಇತ್ತ ಟೀಂ ಇಂಡಿಯಾ 35 ಓವರ್ಗಳಲ್ಲಿ ತನ್ನ 100 ರನ್ಗಳ ಗಡಿ ದಾಟಿತು. ಈ ವೇಳೆಗೆ ಭಾರತ ತಂಡದ 3 ವಿಕೆಟ್ಗಳು ಉರುಳಿದ್ದವು. ಸುದ್ದಿ ಬರೆಯುವ ಹೊತ್ತಿಗೆ ಬೆನ್ ಡಕೆಟ್ 38 ಎಸೆತಗಳಲ್ಲಿ 43 ರನ್ ಬಾರಿಸಿ ಔಟಾಗಿದ್ದರೆ, ಮತ್ತೊಬ್ಬ ಆರಂಭಿಕ ಕ್ರೌಲಿ 43 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಬಾಲ್ ಬಿಡುವುದನ್ನೇ ಕಲೆ ಎಂದುಕೊಂಡಿರುವ ಟೀಂ ಇಂಡಿಯಾ ಆಟಗಾರರು ಚೆಂಡಿನ ಮೆರಿಟ್ಗೆ ತಕ್ಕಂತೆ ಬ್ಯಾಟ್ ಬೀಸುವುದನ್ನು ಕಲಿತರೆ ಫಲಿತಾಂಶ ಬೇರೆಯದ್ದೇ ಆಗಲಿದೆ. ಅಂದಹಾಗೆ ಓವಲ್‌ನಲ್ಲಿ ಟೀಂ ಇಂಡಿಯಾದ ಬ್ಯಾಟರ್ಗಳು ಮಾತ್ರ ತಪ್ಪು ಮಾಡಿಲ್ಲ. ಬೌಲರ್ಗಳು ಕೂಡ ತಮ್ಮ ಕಳಪೆ ಬೌಲಿಂಗ್ ಮೂಲಕ ಆಂಗ್ಲರು ಸುಲಭವಾಗಿ ರನ್ ಕಲೆಹಾಕಲು ನೆರವಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Fri, 1 August 25
