ಖಡಕ್ ಸೂಚನೆ ಬೆನ್ನಲ್ಲೇ ರಣಜಿಯತ್ತ ಮುಖ ಮಾಡಿದ ಟೀಮ್ ಇಂಡಿಯಾದ 8 ಆಟಗಾರರು

|

Updated on: Jan 21, 2025 | 7:51 AM

Ranji Trophy 2025: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡ 8 ಆಟಗಾರರು ಈ ಬಾರಿಯ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ, ನ್ಯೂಝಿಲೆಂಡ್ ವಿರುದ್ಧದ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ರಣಜಿ ಪಂದ್ಯಗಳನ್ನಾಡುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಇದೀಗ ಭಾರತ ತಂಡದ 7 ಸ್ಟಾರ್ ಆಟಗಾರರು ರಣಜಿ ಟೂರ್ನಿಯತ್ತ ಮುಖ ಮಾಡಿದ್ದಾರೆ.

ಖಡಕ್ ಸೂಚನೆ ಬೆನ್ನಲ್ಲೇ ರಣಜಿಯತ್ತ ಮುಖ ಮಾಡಿದ ಟೀಮ್ ಇಂಡಿಯಾದ 8 ಆಟಗಾರರು
Team India
Follow us on

ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ರಣಜಿ ಟೂರ್ನಿ ಆಡಬೇಕೆಂದು ಬಿಸಿಸಿಐ ಖಡಕ್ ಸೂಚನೆ ನೀಡಿದೆ. ಈ ಸೂಚನೆ ಬೆನ್ನಲ್ಲೇ ಇದೀಗ ಭಾರತ ಟೆಸ್ಟ್ ತಂಡದ ಭಾಗವಾಗಿರುವ 8 ಆಟಗಾರರು ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇವರಲ್ಲಿ ವಿರಾಟ್ ಕೊಹ್ಲಿ 13 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ಸಜ್ಜಾದರೆ, ರೋಹಿತ್ ಶರ್ಮಾ 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕಳೆದ ಏಳು ವರ್ಷಗಳಿಂದ ರಣಜಿ ಪಂದ್ಯವಾಡದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡ ಈ ಬಾರಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಹಾಗೆಯೇ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಬಿದ್ದಿರುವ ಮೊಹಮ್ಮದ್ ಸಿರಾಜ್ ಸಹ ಹೈದರಾಬಾದ್ ಪರ ಆಡುವುದಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಮತ್ತೊಂದೆಡೆ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಕೂಡ ಈ ಬಾರಿಯ ರಣಜಿ ಟೂರ್ನಿಯ ದ್ವಿತೀಯಾರ್ಧದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ರಾಹುಲ್ ಕೂಡ ಕರ್ನಾಟಕ ಪರ ರಣಜಿ ಪಂದ್ಯವಾಡಿ 4 ವರ್ಷಗಳೇ ಕಳೆದಿದ್ದು, ಇದೀಗ ಮತ್ತೆ ದೇಶೀಯ ಅಂಗಳದಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಈಗಾಗಲೇ ರಣಜಿ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇವರೊಂದಿಗೆ ಭಾರತ ತಂಡದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಹಾಗೂ ಬಲಗೈ ಬ್ಯಾಟರ್ ಶುಭ್​ಮನ್ ಗಿಲ್ ಕೂಡ ಈ ಬಾರಿಯ ರಣಜಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಣಜಿ ಪಂದ್ಯವಾಡಲಿರುವ ಟೀಮ್ ಇಂಡಿಯಾ ಆಟಗಾರರು:

  • ರೋಹಿತ್ ಶರ್ಮಾ (ಮುಂಬೈ ತಂಡ)
  • ವಿರಾಟ್ ಕೊಹ್ಲಿ (ದೆಹಲಿ ತಂಡ)
  • ಶುಭ್​ಮನ್ ಗಿಲ್ (ಪಂಜಾಬ್ ತಂಡ)
  • ರಿಷಭ್ ಪಂತ್ (ದೆಹಲಿ ತಂಡ)
  • ಯಶಸ್ವಿ ಜೈಸ್ವಾಲ್ (ಮುಂಬೈ ತಂಡ)
  • ರವೀಂದ್ರ ಜಡೇಜಾ (ಸೌರಾಷ್ಟ್ರ ತಂಡ)
  • ಕೆಎಲ್ ರಾಹುಲ್ (ಕರ್ನಾಟಕ ತಂಡ)
  • ಮೊಹಮ್ಮದ್ ಸಿರಾಜ್ (ಹೈದರಾಬಾದ್ ತಂಡ).

ಪಂದ್ಯಾವಳಿ ಯಾವಾಗ ಶುರು?

ರಣಜಿ ಟೂರ್ನಿಯ ದ್ವಿತೀಯ ಹಂತದ ಪಂದ್ಯಗಳು ಜನವರಿ 23 ರಿಂದ ಶುರುವಾಗಲಿದೆ. ಜನವರಿ 23 ರಂದು ನಡೆಯಲಿರುವ ಪಂದ್ಯಗಳಲ್ಲಿ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಶುಭ್​ಮನ್ ಗಿಲ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಇನ್ನು ಜನವರಿ 30 ರಿಂದ ಶುರುವಾಗಲಿರುವ 2ನೇ ಸುತ್ತಿನ ದ್ವಿತೀಯ ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ವಿರಾಟ್ ಕೊಹ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದು, ಹೀಗಾಗಿ ಜನವರಿ 30 ರಂದು ನಡೆಯುವ ಪಂದ್ಯಕ್ಕೆ ಲಭ್ಯರಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಕ್ಸ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ

ಮತ್ತೊಂದೆಡೆ ಕೆಎಲ್ ರಾಹುಲ್ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಮೊದಲ ಪಂದ್ಯದಲ್ಲಿ ರಾಹುಲ್ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಜನವರಿ 30 ರಿಂದ ಶುರುವಾಗಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ ಕೂಡ ಜನವರಿ 30 ರಿಂದ ಆರಂಭವಾಗಲಿರುವ ಪಂದ್ಯಕ್ಕೆ ಲಭ್ಯರಿರುವುದಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​ಗೆ ತಿಳಿಸಿದ್ದಾರೆ.

 

Published On - 7:46 am, Tue, 21 January 25