
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಲಾಗಿದೆ. ಅಲ್ಲದೆ ಟೀಮ್ ಇಂಡಿಯಾದ ಒಡಿಐ ಕ್ಯಾಪ್ಟನ್ ಆಗಿ ಶುಭ್ಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಯುಗಾಂತ್ಯವಾದಂತಾಗಿದೆ.
ಅತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿ, ಭಾರತ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟರೂ ರೋಹಿತ್ ಶರ್ಮಾ ಅವರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಸಿದ್ದು ಯಾಕೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಇದೀಗ ಎಲ್ಲರೂ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ನತ್ತ ಬೊಟ್ಟು ಮಾಡುತ್ತಿದ್ದಾರೆ.
ಗೌತಮ್ ಗಂಭೀರ್ ನಿರ್ದೇಶನದ ಮೇರೆಗೆ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಗಂಭೀರ್ ಅವರ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಟೀಮ್ ಇಂಡಿಯಾ ಕೋಚ್, ರೋಹಿತ್ ಶರ್ಮಾ ಅವರನ್ನು ಹಾಡಿ ಹೊಗಳುತ್ತಿರುವುದು ಕಾಣಬಹುದು.
ರೋಹಿತ್ ಶರ್ಮಾ ಭಾರತ ತಂಡದ ನಾಯಕನಾಗದಿದ್ದರೆ, ಅದು ಭಾರತದ ದುರದೃಷ್ಟ. ಬದಲಾಗಿ ರೋಹಿತ್ ಶರ್ಮಾ ಅವರದ್ದಲ್ಲ. ಅವರು ವೈಟ್-ಬಾಲ್ ಕ್ರಿಕೆಟ್ ಅಥವಾ ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗದಿದ್ದರೆ, ಅದು ನಾಚಿಕೆಗೇಡಿನ ಸಂಗತಿ” ಎಂದು ಗೌತಮ್ ಗಂಭೀರ್ ಈ ಹಿಂದೆ ಅಭಿಪ್ರಾಯಪಟ್ಟಿದ್ದರು.
ಭಾರತ ತಂಡಕ್ಕಾಗಿ ರೋಹಿತ್ ಶರ್ಮಾ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಇದಾಗ್ಯೂ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಗಂಭೀರ್ ಈ ವಿಡಿಯೋದಲ್ಲಿ ಹೇಳಿದ್ದರು.
Never seen anyone more hypocritical and two-faced than Gautam Gambhir. The same guy who once said, “If Rohit Sharma doesn’t become India’s captain, it’s India’s loss, not Rohit’s,” now doesn’t want him as captain after becoming coach himself. pic.twitter.com/pqRzYKDR2a
— Kusha Sharma (@Kushacritic) October 4, 2025
ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ, ಗೌತಮ್ ಗಂಭೀರ್ ನೀಡಿದ ಹೇಳಿಕೆಗಳ ಈ ವಿಡಿಯೋ ಇದೀಗ ವೈರಲ್ ಆಗಿದೆ. ಅದು ಕೂಡ ಗಂಭೀರ್ ಕೋಚಿಂಗ್ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಕಳೆದುಕೊಂಡ ಬೆನ್ನಲ್ಲೇ. ಈ ವಿಡಿಯೋಗೆ ಇದೀಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಗಂಭೀರ್ ಅವರನನ್ನು ಕಪಟಿ ಎಂದು ಜರಿದರೆ ಇನ್ನೂ ಕೆಲವರು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಸರಿಯಾದ ನಡೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 6 ದಿನಗಳಲ್ಲಿ ರೋಹಿತ್ ಶರ್ಮಾ ಭವಿಷ್ಯ ನಿರ್ಧಾರ
ಒಟ್ಟಿನಲ್ಲಿ ವರ್ಷಗಳ ಹಿಂದೆ ಗೌತಮ್ ಗಂಭೀರ್ ನೀಡಿದ ಹೇಳಿಕೆಗಳು ಇದೀಗ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಅದು ಕೂಡ ಭಾರತ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಬೆನ್ನಲ್ಲೇ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸುವ ಮೂಲಕ..!